Homeರಾಜ್ಯಅನರ್ಹರನ್ನು ಕೈಬಿಡಲು ಗ್ಯಾರಂಟಿ ಯೋಜನೆಗಳ ಸಮಗ್ರ ಪರಿಷ್ಕರಣೆಗೆ ಮುಂದಾದ ಸರ್ಕಾರ

ಅನರ್ಹರನ್ನು ಕೈಬಿಡಲು ಗ್ಯಾರಂಟಿ ಯೋಜನೆಗಳ ಸಮಗ್ರ ಪರಿಷ್ಕರಣೆಗೆ ಮುಂದಾದ ಸರ್ಕಾರ

Government to comprehensive revision of guarantee schemes to weed out the ineligible

ಬೆಂಗಳೂರು,ಜೂ.11- ರಾಜ್ಯ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಐದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ಸಿಗುವಂತೆ ಮಾಡಲು, ಫಲಾನುಭವಿಗಳ ಪಟ್ಟಿಯನ್ನು ಸಮಗ್ರವಾಗಿ ಪರಿಷ್ಕರಿಸಲು ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಅಧಿಕಾರಿಗಳಿಗೆ ತಳಮಟ್ಟದವರೆಗೆ ಪರಿಶೀಲನೆ ನಡೆಸಲು ಮತ್ತು 15 ದಿನಗಳ ಒಳಗಾಗಿ ವಿಸ್ತೃತ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸೂಚಿಸಿದೆ. ಅಗತ್ಯವಿದ್ದಲ್ಲಿ ಫಲಾನುಭವಿಗಳು ತಮ ದಾಖಲೆಗಳನ್ನು ಮತ್ತೆ ಸಲ್ಲಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಅನರ್ಹರು ಯೋಜನೆಯ ಲಾಭ ಪಡೆಯುತ್ತಿರುವುದನ್ನು ತಡೆಯಲು ಮತ್ತು ಸರ್ಕಾರಿ ಬೊಕ್ಕಸದ ಮೇಲಿನ ಅನಗತ್ಯ ಹೊರೆ ಕಡಿಮೆ ಮಾಡಲು ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲಾಗುತ್ತಿದೆ. ಮೃತಪಟ್ಟವರ ಹೆಸರು, ಆದಾಯ ತೆರಿಗೆ ಪಾವತಿಸುವವರು ಮತ್ತು ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಜನ ಅನಗತ್ಯವಾಗಿ ಸೌಲಭ್ಯ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಗೃಹ ಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳ ನಿಧನವಾದ ನಂತರವೂ ಹಣ ಪಾವತಿಯಾಗುತ್ತಿರುವ ನಿದರ್ಶನಗಳು ಬೆಳಕಿಗೆ ಬಂದಿವೆ. ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ಹಣ ಅನರ್ಹರಿಗೆ ಪೋಲಾಗುತ್ತಿರುವ ಅಂದಾಜಿದೆ. ಯೋಜನೆಗಳ ಉದ್ದೇಶವು ನಿಜವಾದ ಬಡವರಿಗೆ ಮತ್ತು ಅರ್ಹರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಗುರಿಯಾಗಿದೆ.

ಅರ್ಹರಲ್ಲದವರು, ಸುಳ್ಳು ಮಾಹಿತಿ ನೀಡಿ ಅಥವಾ ದಾಖಲೆಗಳನ್ನು ತಿದ್ದುವ ಮೂಲಕ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಡಿ ಹಲವು ಕಡೆಗಳಲ್ಲಿ ನಕಲಿ ಅಥವಾ ಅನರ್ಹ ಫಲಾನುಭವಿಗಳು ಸೇರ್ಪಡೆಯಾಗಿರುವುದು ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಈ ಯೋಜನೆಗಳು ಭಾರೀ ಹೊರೆಯಾಗುತ್ತಿವೆ. ಯೋಜನೆಗಳಿಗೆ ಮೀಸಲಿಡುವ ಬೃಹತ್‌ ಮೊತ್ತವು ಮೂಲಸೌಕರ್ಯ ಅಭಿವೃದ್ಧಿ ಮತ್ತು ಇತರ ಬಂಡವಾಳ ಹೂಡಿಕೆಯ ಮೇಲೆ ಪ್ರಭಾವ ಬೀರುತ್ತಿದೆ ಎಂಬ ಆತಂಕ ತಜ್ಞರಿಂದ ವ್ಯಕ್ತವಾಗುತ್ತಿದೆ.

ಈ ಎಲ್ಲ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಸರ್ಕಾರವು ಗಂಭೀರ ಪರಿಷ್ಕರಣೆಗೆ ಮುಂದಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಜನಪರವಾಗಿದ್ದರೂ, ಅವುಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಅತ್ಯಗತ್ಯ. ಸರ್ಕಾರದ ಈ ಪರಿಷ್ಕರಣಾ ನಿರ್ಧಾರವು ಯೋಜನೆಗಳನ್ನು ಮತ್ತಷ್ಟು ಬಲಪಡಿಸುವ ಮತ್ತು ಅರ್ಹ ಫಲಾನುಭವಿಗಳಿಗೆ ನ್ಯಾಯಯುತವಾಗಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ.

ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ರಾಜ್ಯದ ಜನತೆಯ ಆರ್ಥಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು (ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ) ರಾಜ್ಯದ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿವೆ.

ಆದರೆ, ಇತ್ತೀಚಿನ ದಿನಗಳಲ್ಲಿ ಈ ಯೋಜನೆಗಳ ಅನುಷ್ಠಾನದಲ್ಲಿ ಕಂಡುಬರುತ್ತಿರುವ ಲೋಪದೋಷಗಳು ಮತ್ತು ಸರ್ಕಾರದ ಬೊಕ್ಕಸದ ಮೇಲಾಗುತ್ತಿರುವ ಆರ್ಥಿಕ ಒತ್ತಡವು ಸರ್ಕಾರದ ಗಂಭೀರ ಚಿಂತನೆಗೆ ಕಾರಣವಾಗಿದೆ. ಯೋಜನೆಗಳ ಘೋಷಣೆಯಾದ ಆರಂಭದಿಂದಲೂ ಹಲವು ವಿವಾದಗಳು ಕೇಳಿಬರುತ್ತಿವೆ. ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಅಥವಾ ಸುಸ್ಥಿತಿಯಲ್ಲಿರುವ ಕುಟುಂಬಗಳನ್ನು ಯೋಜನೆಗಳ ವ್ಯಾಪ್ತಿಯಿಂದ ಹೊರಗಿಡಲು ಕಠಿಣ ಪರಿಶೀಲನೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಹೊಸದಾಗಿ ಅರ್ಜಿಗಳ ಆಹ್ವಾನ :
ಅಕ್ರಮಗಳನ್ನು ತಡೆಗಟ್ಟಲು ಮತ್ತು ಅರ್ಹರನ್ನು ಮಾತ್ರ ಗುರುತಿಸಲು, ಪ್ರಸ್ತುತ ಇರುವ ಫಲಾನುಭವಿಗಳ ಪಟ್ಟಿಯನ್ನು ಮರು ಪರಿಶೀಲಿಸಿ, ಅವಶ್ಯಕವಿದ್ದಲ್ಲಿ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ.

ಆಧಾರ್‌ ದೃಢೀಕರಣ ಮತ್ತು ನೇರ ನಗದು ವರ್ಗಾವಣೆ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸುವ ಮೂಲಕ ಮಧ್ಯವರ್ತಿಗಳ ಹಾವಳಿ ಮತ್ತು ಸೋರಿಕೆಯನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ.ಯೋಜನೆಗಳ ಪರಿಷ್ಕರಣೆಯಿಂದ ಸರ್ಕಾರವು ಎರಡು ಮುಖ್ಯ ಉದ್ದೇಶಗಳನ್ನು ಹೊಂದಿದೆ

ಸಂಪನೂಲಗಳ ಮರುಹಂಚಿಕೆ :
ನಿಜಕ್ಕೂ ಅಗತ್ಯವಿರುವ ಬಡ ಮತ್ತು ಕೆಳಮಧ್ಯಮ ವರ್ಗದ ಜನರಿಗೆ ಮಾತ್ರ ಸೌಲಭ್ಯಗಳು ತಲುಪುವಂತೆ ಮಾಡುವುದು. ಸರ್ಕಾರದ ಬೊಕ್ಕಸದ ಮೇಲಾಗುತ್ತಿರುವ ಅನಗತ್ಯ ಒತ್ತಡವನ್ನು ಕಡಿಮೆ ಮಾಡಿ, ರಾಜ್ಯದ ಆರ್ಥಿಕ ಸ್ಥಿರತೆಯನ್ನು ಕಾಪಾಡುವುದು.ವಿದ್ಯುತ್‌ ಸಂಪರ್ಕಗಳ ಬಳಕೆಯ ಮಾದರಿ (ಉದಾಹರಣೆಗೆ: ವಸತಿ ಉದ್ದೇಶದ ಬದಲು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು), ಟೆನೆಂಟ್‌ (ಬಾಡಿಗೆದಾರರ) ಮಾಹಿತಿ, ಮತ್ತು ಆಧಾರ್‌ ಜೋಡಣೆಯಂತಹ ದಾಖಲೆಗಳನ್ನು ಮರುಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

2026-27ನೇ ಸಾಲಿಗೆ ಈ ಐದು ಯೋಜನೆಗಳಿಗಾಗಿ ಸರ್ಕಾರವು ಸುಮಾರು 51,286 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು, ಈ ಹಣದ ಸರಿಯಾದ ಬಳಕೆಗೆ ಒತ್ತು ನೀಡಲಾಗುತ್ತಿದೆ. ಆರ್ಥಿಕ ಹೊರೆ 2026-27ರ ಬಜೆಟ್‌ ಅಂದಾಜಿನ ಪ್ರಕಾರ, ಈ ಐದು ಯೋಜನೆಗಳಿಗಾಗಿ ಸರ್ಕಾರ ಸುಮಾರು 51,286 ಕೋಟಿಗಳನ್ನು ವ್ಯಯಿಸುತ್ತಿದೆ. ಇದು ರಾಜ್ಯದ ಒಟ್ಟು ವೆಚ್ಚದ (ಸಾಲ ಮರುಪಾವತಿ ಹೊರತುಪಡಿಸಿ) ಸುಮಾರು ಶೇ.12ರಷ್ಟು ಭಾಗವಾಗಿದೆ.

ಬಜೆಟ್‌ ಕೊರತೆ :
ಸಿಎಜಿ ವರದಿಯು ಈ ಯೋಜನೆಗಳ ಅನುಷ್ಠಾನವು ರಾಜಸ್ವ ವೆಚ್ಚ ಮತ್ತು ರಾಜಸ್ವ ಕೊರತೆಯನ್ನು ಹೆಚ್ಚಿಸಿದೆ ಎಂದು ಗಮನಿಸಿದೆ. ಇದು ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೀಸಲಿಡುವ ಬಂಡವಾಳ ವೆಚ್ಚದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಇದೆ.

RELATED ARTICLES

Latest News