ಬೆಂಗಳೂರು, ಜೂ.11- ನಗರದ ಕೆ.ಆರ್. ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತೆ ಮತ್ತು ಸುಗಮ ನಿರ್ವಹಣೆಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಕ್ರಮ ಕೈಗೊಂಡಿದೆ.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರ ಇತ್ತೀಚಿನ ಭೇಟಿ ವೇಳೆ ನೀಡಿದ ಸೂಚನೆಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ.
ಮಾರುಕಟ್ಟೆಯ ತಳಮಹಡಿಯಲ್ಲಿರುವ ಹೂವಿನ ಮಾರುಕಟ್ಟೆಯನ್ನು ಸಮಗ್ರವಾಗಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲಾಗಿದೆ. ಮಾರುಕಟ್ಟೆ ಮುಂಭಾಗದಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ನಡೆಯುವ ಪ್ರದೇಶದಲ್ಲಿ ಮಳೆಗಾಲದಲ್ಲಿ ನೀರು ನಿಂತು ಗಲೀಜಾಗುತ್ತಿರುವ ಹಿನ್ನೆಲೆ, ಗುಂಡಿಗಳನ್ನು ಮುಚ್ಚಿ ಸಂಪೂರ್ಣ ಕಾಂಕ್ರೀಟ್ ಅಳವಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಹೆಚ್ಚುವರಿ ಮಾರ್ಷಲ್‌ಗಳನ್ನು ನಿಯೋಜಿಸುವಂತೆ ಸೂಚಿಸಲಾಗಿದ್ದು, ಮೊದಲ ಮಹಡಿಯಲ್ಲಿರುವ ಶೌಚಾಲಯವನ್ನು ಸಾರ್ವಜನಿಕ ಬಳಕೆಗೆ ತೆರೆಯಲು ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಕೆ.ಆರ್. ಮಾರುಕಟ್ಟೆ ಕಟ್ಟಡದ ಒಳಗೆ ಹಾಗೂ ಮುಂಭಾಗದಲ್ಲಿ ಕಂಡುಬರುವ ಒತ್ತುವರಿಗಳನ್ನು ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲು ಒತ್ತುವರಿದಾರರಿಗೆ ನಿಗದಿತ ಕಾಲಾವಕಾಶ ನೀಡಲಾಗುವುದು. ಆ ಅವಧಿಯಲ್ಲೂ ತೆರವುಗೊಳಿಸದಿದ್ದರೆ ಪಾಲಿಕೆಯೇ ತೆರವು ಕಾರ್ಯಾಚರಣೆ ನಡೆಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವ ಉದ್ದೇಶದಿಂದ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಅಗತ್ಯವಾದ ಶೆಡ್ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಜೊತೆಗೆ ಮಾರುಕಟ್ಟೆ ಮುಂಭಾಗದಲ್ಲಿ ವ್ಯಾಪಾರಿಗಳಿಗೆ ನಿಗದಿತ ವ್ಯಾಪಾರ ಸ್ಥಳಗಳನ್ನು ಗುರುತಿಸಿ ಲೈನಿಂಗ್ ವ್ಯವಸ್ಥೆ ಮಾಡಲಾಗುವುದು. ನಿಗದಿತ ಸ್ಥಳ ಬಿಟ್ಟು ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ವ್ಯಾಪಾರ ನಡೆಸುವವರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಲಾಗುತ್ತಿದೆ.
ಸಭೆಯಲ್ಲಿ ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರು, ಡಿಜಿಎಂ, ಪೊಲೀಸ್ ಅಧಿಕಾರಿಗಳು ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
