ಬೆಂಗಳೂರು, ಜೂ. 12- ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಪ್ರಚಾರಕ್ಕಾಗಿ 200 ಕೋಟಿ ರೂ. ಬಳಕೆಯಾಗಿದೆ ಎಂಬ ಆರೋಪವನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯ ಇದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಪ್ರಕಾಶ್ ರಾಜ್ ಹೆಸರು ಪ್ರಸ್ತಾಪವಾಗಿದೆ. ನ್ಯಾಯಾಲಯ ಎಸ್‌ಐಟಿ ಮುಖ್ಯಸ್ಥರಿಂದ ಮಾಹಿತಿ ಕೇಳಿದೆ. ಪೊಲೀಸರು ಮೊದಲು ಮಾಹಿತಿ ನೀಡಲಿ, ಇಂತಹ ವಿಚಾರಗಳನ್ನು ಮಾಧ್ಯಮಗಳಲ್ಲಿ ಚರ್ಚೆ ಮಾಡುವುದು ಸರಿಯಲ್ಲ. ಹೆಸರು ಪ್ರಸ್ತಾಪವಾದಾಕ್ಷಣ ಯಾರೂ ಕ್ರಿಮಿನಲ್‌ಗಳಾಗುವುದಿಲ್ಲ ಎಂದು ಹೇಳಿದರು.
ಧರ್ಮಸ್ಥಳ ವಿರುದ್ಧ ಅಪ ಪ್ರಚಾರಕ್ಕೆ ಬೇರೆ ಬಾಗಿಲಿನಿಂದ ದುಡ್ಡು ಬಂದಿದೆ. ಇದರಲ್ಲಿ ಕೆಲವರ ಸಹಭಾಗಿತ್ವ ಇದೆ ಎನ್ನುವ ಆರೋಪವನ್ನು ಬಂಧಿತ ವ್ಯಕ್ತಿ ಮಾಡಿದ್ದಾರೆ. 200 ಕೋಟಿ ರೂ. ಬಳಕೆಯಾಗಿದೆ ಎಂದು ಹೇಳುತ್ತಿದ್ದಾರೆ. ಇದು ಸಣ್ಣ ಮೊತ್ತ ಅಲ್ಲ, ಗಂಭೀರ ಪರಿಶೀಲನೆಯಾಗಬೇಕಿದೆ. ಆರೋಪ ಮಾಡುತ್ತಿರುವ ವ್ಯಕ್ತಿಯ ಮಾತುಗಳು ನಿಜವೋ, ಸುಳ್ಳೋ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದರು.
ಮೈಕ್ರೋ ಫೈನಾನ್‌್ಸ ವಿಚಾರವಾಗಿ ಸರ್ಕಾರ ರೂಪಿಸಿರುವ ಕಾನೂನುಗಳನ್ನು ಧರ್ಮಸ್ಥಳದ ಹಣಕಾಸು ಸಂಸ್ಥೆಗಳು ಪಾಲಿಸುತ್ತಿಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ಪ್ರಿಯಾಂಕ್ ಖರ್ಗೆಯವರು, ನಾನ್ ಬ್ಯಾಕಿಂಗ್ ಫೈನಾನ್‌್ಸ ಸಂಸ್ಥೆಗಳು (ಎನ್‌ಬಿಎಫ್‌ಸಿ)ಗಳು ಹೊಸ ಕಾನೂನು ಉಲ್ಲಂಘಿಸುತ್ತಿರುವ ಬಗ್ಗೆ ತಮ ಬಳಿ ಮಾಹಿತಿಯಿಲ್ಲ. ಮುಂದಿನವಾರ ಇದಕ್ಕಾಗಿ ಹೊಸ ಪ್ರತ್ಯೇಕ ಸಭೆ ನಡೆಸಿ, ಪರಿಶೀಲಿಸಲಾಗುವುದು ಎಂದರು.
ಹೊಸ ಕಾನೂನು ಧರ್ಮಸ್ಥಳದ ಸಂಸ್ಥೆಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಹಣಕಾಸು ಸಂಸ್ಥೆಗಳು ಅದನ್ನು ಪಾಲನೆ ಮಾಡಬೇಕು ಎಂದು ಹೇಳಿದರು.ಸಂಘ ಸಂಸ್ಥೆಗಳು ವ್ಯಕ್ತಿಗತ ಹಾಗೂ ಧಾರ್ಮಿಕ ದತ್ತಿ ಸಂಸ್ಥೆಗಳು ರಾಜ್ಯ ಸರ್ಕಾರ ಕಾಯ್ದೆ ರೂಪಿಸಿದ ಕಾಯ್ದೆಯನ್ನು ಪಾಲಿಸಲೇಬೇಕು. ಧರ್ಮಸ್ಥಳದ ವಿಚಾರವಾಗಿ ಯಾವ ದೂರಿದೆ, ಆನ್‌ಲೈನ್ ಪೇಮೆಂಟ್ ಬದಲಾಗಿ ನಗದು ರೂಪದಲ್ಲಿ ಹಣ ಪಡೆಯುತ್ತಿರುವ ಕುರಿತು ತಮಗೆ ಮಾಹಿತಿಯಿಲ್ಲ ಎಂದು ಹೇಳಿದರು.
ಬಿಟ್‌ಕಾಯಿನ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ಇದು ತಮ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಸಂಪುಟ ಉಪಸಮಿತಿ ರಚಿಸಲಾಗಿತ್ತು. ಅದಕ್ಕೆ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದರು. ಈಗ ಸಮಿತಿಯನ್ನು ಪುನರ್‌ರಚಿಸುವ ಅಥವಾ ರದ್ದುಮಾಡಿ ಈಗಾಗಲೇ ಸಿದ್ಧವಾಗಿರುವ ವರದಿಗಳ ಆಧಾರವಾಗಿಯೇ ಕ್ರಮ ತೆಗೆದುಕೊಳ್ಳಬೇಕೇ ಎಂಬ ಕುರಿತು ಮುಖ್ಯಮಂತ್ರಿಯವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಬೆಂಗಳೂರಿನ ಅಭಿವೃದ್ಧಿಗೆ ಪ್ರತ್ಯೇಕವಾಗಿ 26 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಯವರು ಪ್ರಧಾನಿಯವರಿಗೆ ಮನವಿ ಮಾಡಿದ್ದಾರೆ. ಬೆಂಗಳೂರು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ದೇಶಕ್ಕೆ ಆರ್ಥಿಕ ಪ್ರಗತಿಯ ಎಂಜಿನ್ ಆಗಿದೆ. ರಾಜ್ಯದ ಒಟ್ಟು ಜಿಡಿಪಿಗೆ ಬೆಂಗಳೂರಿನ ಕೊಡುಗೆ ಶೇ. 40ರಷ್ಟು. ಹೆಚ್ಚಿನ ವಲಸಿಗರು ಇಲ್ಲಿ ನೆಲೆಸಿದ್ದಾರೆ. ಬಂಡವಾಳ ಹರಿದು ಬರುತ್ತಿದೆ. ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇದಕ್ಕಾಗಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದರು.
ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುವುದು ಅನಗತ್ಯ. ಮೇಕೆದಾಟು ಯೋಜನೆ ವಿಚಾರವಾಗಿ ಸುಪ್ರೀಂಕೋರ್ಟಿನ ಆದೇಶ ಇದೆ. ನೆರೆಯ ರಾಜ್ಯದ ಮುಖ್ಯಮಂತ್ರಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ಹೋಗಲಿ. ಅವರು ಬಂದಾಕ್ಷಣ ನಾವು ನಮ ಹಕ್ಕನ್ನು ಬಿಟ್ಟುಕೊಡುವುದಿಲ್ಲ. ನೆಲ, ಜಲ, ಭಾಷೆ ವಿಚಾರವಾಗಿ ಯಾವುದೇ ರಾಜೀ ಇಲ್ಲ. ನಾವು ನಮ ರಾಜ್ಯದ ಹಿತಾಸಕ್ತಿಗೆ ಬದ್ಧರಾಗಿರುವಂತೆ, ತಮಿಳುನಾಡಿನ ಮುಖ್ಯಮಂತ್ರಿ ಕೂಡ ಕೆಲಸ ಮಾಡುತ್ತಾರೆ. ಅವರಿಗೆ ಅಡ್ಡಿ ಪಡಿಸುವುದು ಸರಿಯಲ್ಲ ಎಂದು ಹೇಳಿದರು. ಬಿಡದಿ ಭೂ ಸ್ವಾಧೀನ ವಿಚಾರವಾಗಿ ವಿರೋಧ ಪಕ್ಷಗಳು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಾಲಕಿ ವೆನ್ನಿಲಾ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ಪೊಲೀಸ್ ಇನ್‌್ಸಪೆಕ್ಟರ್, ಸಬ್ ಇನ್‌್ಸಪೆಕ್ಟರ್ ಮತ್ತು ರೈಟರ್ ಅವರನ್ನು ಇಂದು ಬೆಳಗ್ಗೆ ಅಮಾನತು ಮಾಡಲಾಗಿದೆ.
ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೂ ಕ್ರಮ ಕೈಗೊಳ್ಳದೇ ಲೋಪವೆಸಗಿದ್ದಾರೆ. ಕೊಲೆ ಆರೋಪಕ್ಕಾಗಿ ಬಾಲಕಿಯ ತಾಯಿ ಪ್ರಿಯಾಂಕ ಮತ್ತು ಮೋಹನ್ ಎಂಬ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದರು.
