Homeರಾಜ್ಯಇರಾನ್ ಯುದ್ಧದದ ನಡುವೆಯೂ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ಪೂರೈಕೆ ಮಾಡಿದ್ದೇವೆ : ಪ್ರಹ್ಲಾದ್‌ ಜೋಶಿ

ಇರಾನ್ ಯುದ್ಧದದ ನಡುವೆಯೂ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ಪೂರೈಕೆ ಮಾಡಿದ್ದೇವೆ : ಪ್ರಹ್ಲಾದ್‌ ಜೋಶಿ

Farmers have been supplied with sufficient fertilizer despite Iran war: Prahlad Joshi

ಬೆಂಗಳೂರು,ಜೂ.14- ಕರ್ನಾಟಕದ ಕೆಲ ಭಾಗಗಳಲ್ಲಿ ರಸಗೊಬ್ಬರ ಕೊರತೆ ವರದಿಗಳ ನಡುವೆ, ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ಜಾಗತಿಕ ಪೂರೈಕೆ ಸರಪಳಿ ವ್ಯತ್ಯಯಗಳ ನಡುವೆಯೂ 2026ರ ಖಾರಿಫ್‌ (ಮುಂಗಾರು ಬೆಳೆ ಬೇಸಾಯ) ಹಂಗಾಮಿಗೆ ರಾಜ್ಯದ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ಪೂರೈಕೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ ಎಂದು ಹೇಳಿದ್ದಾರೆ.

ಜೂನ್‌ 10ರ ವೇಳೆಗೆ, ಯೂರಿಯಾದ ಪೊರ-ರಾಟಾ ಅಗತ್ಯ ಪ್ರಮಾಣ 3.13 ಲಕ್ಷ ಮೆಟ್ರಿಕ್‌ ಟನ್‌ (ಎಂಟಿ) ಆಗಿದ್ದರೆ, 5.59 ಲಕ್ಷ ಮೆಟ್ರಿಕ್‌ ಟನ್‌ ಪೂರೈಕೆಯನ್ನು ಖಚಿತಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

2.47 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ಮಾರಾಟವಾದ ಬಳಿಕವೂ 3.12 ಲಕ್ಷ ಮೆಟ್ರಿಕ್‌ ಟನ್‌ ಅಂತಿಮ ದಾಸ್ತಾನು ಉಳಿದಿದ್ದು, ಹೆಚ್ಚುವರಿಯಾಗಿ 17,190 ಮೆಟ್ರಿಕ್‌ ಟನ್‌ ಸಾಗಣೆಯಲ್ಲಿದೆ. ಡಿಎಪಿಯ ಪೊರ-ರಾಟಾ ಅಗತ್ಯ ಪ್ರಮಾಣ 1.89 ಲಕ್ಷ ಮೆಟ್ರಿಕ್‌ ಟನ್‌ ಆಗಿದ್ದರೆ, 2.57 ಲಕ್ಷ ಮೆಟ್ರಿಕ್‌ ಟನ್‌ ಲಭ್ಯತೆಯನ್ನು ಖಚಿತಪಡಿಸಲಾಗಿದೆ. ಪ್ರಸ್ತುತ 1.09 ಲಕ್ಷ ಮೆಟ್ರಿಕ್‌ ಟನ್‌ ದಾಸ್ತಾನು ಇದ್ದು, ಹೆಚ್ಚುವರಿ ಪೂರೈಕೆ ಹಾದಿಯಲ್ಲಿದೆ ಎಂದಿದ್ದಾರೆ.

ಇನ್ನು ಎನ್‌ಪಿಕೆಎಸ್‌‍ನ ಪೊರ-ರಾಟಾ ಅಗತ್ಯ ಪ್ರಮಾಣ 4.36 ಲಕ್ಷ ಟನ್‌ ಆಗಿದ್ದರೆ, 9.28 ಲಕ್ಷ ಟನ್‌ ಲಭ್ಯತೆಯನ್ನು ಖಚಿತಪಡಿಸಲಾಗಿದೆ. ಗಣನೀಯ ಪ್ರಮಾಣದ ಮಾರಾಟದ ಬಳಿಕವೂ, ಸಾಗಣೆಯಲ್ಲಿರುವ ದಾಸ್ತಾನು ಸೇರಿ 5.6 ಲಕ್ಷ ಟನ್‌ಗಿಂತ ಹೆಚ್ಚು ರಸಗೊಬ್ಬರ ಲಭ್ಯವಿದೆ.

ಇರಾನ್‌-ಇಸ್ರೇಲ್‌ ಸಂಘರ್ಷ ಹಾಗೂ ಪ್ರಮುಖ ಪೂರೈಕೆದಾರ ರಾಷ್ಟ್ರಗಳಿಂದ ರಫ್ತು ಕಡಿಮೆಯಾಗಿರುವಂತಹ ಭೌಗೋಳಿಕ-ರಾಜಕೀಯ ಸವಾಲುಗಳ ನಡುವೆಯೂ ಕೇಂದ್ರ ಸರ್ಕಾರ ಮುಂಚಿತವಾಗಿ ಕ್ರಮ ಕೈಗೊಂಡಿದೆ. ನಿರಂತರ ಪೂರೈಕೆಯನ್ನು ಕಾಯ್ದುಕೊಳ್ಳಲು ವಿಶೇಷ ಕ್ರಮಗಳ ಮೂಲಕ ದೇಶೀಯ ಯೂರಿಯಾ ಉತ್ಪಾದನೆಯನ್ನು ಹೆಚ್ಚಿಸಲಾಗಿದ್ದು, ಅಗತ್ಯ ಆಮದುಗಳನ್ನು ಸಹ ಖಚಿತಪಡಿಸಲಾಗಿದೆ ಎಂದು ಪ್ರಹ್ಲಾದ್‌ ಜೋಶಿ ಅವರು ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವಾಸ್ತವವಾಗಿ, ಖಾರಿಫ್‌ ಹಂಗಾಮು ಆರಂಭವಾಗುವುದಕ್ಕೂ ಮುನ್ನವೇ ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡಲಾಗಿದೆ. 2026ರ ಜನವರಿಯಿಂದ ಮಾರ್ಚ್‌ ಅವಧಿಯಲ್ಲೇ, ಮುಂಗಡ ದಾಸ್ತಾನು ಸಂಗ್ರಹಕ್ಕೆ ಅನುಕೂಲವಾಗುವಂತೆ ಅಂದಾಜು ಅಗತ್ಯಕ್ಕಿಂತ ಹೆಚ್ಚುವರಿಯಾಗಿ 0.33 ಲಕ್ಷ ಟನ್‌ ಯೂರಿಯಾ, 1.29 ಲಕ್ಷ ಟನ್‌ ಡಿಎಪಿ ಹಾಗೂ 1.58 ಲಕ್ಷ ಟನ್‌ ಎನ್‌ಪಿಕೆಎಸ್‌‍ ರಾಜ್ಯಕ್ಕೆ ಪೂರೈಕೆ ಮಾಡಲಾಗಿದೆ.

ರಾಜ್ಯದಲ್ಲಿ ರಸಗೊಬ್ಬರ ಲಭ್ಯತೆಯೇ ಸಮಸ್ಯೆಯಲ್ಲ ಎಂದು ಪ್ರತಿಪಾದಿಸಿದ ಪ್ರಹ್ಲಾದ್‌ ಜೋಶಿ, ಜಿಲ್ಲೆಗಳ ನಡುವೆ ಸಮರ್ಪಕ ವಿತರಣೆ ಖಚಿತಪಡಿಸುವುದು, ದಾಸ್ತಾನು ಸಂಗ್ರಹಣೆ (ಹೋರ್ಡಿಂಗ್‌), ಕಾಳಸಂತೆ ಮತ್ತು ಸಬ್ಸಿಡಿ ರಸಗೊಬ್ಬರಗಳ ದುರ್ಬಳಕೆಯನ್ನು ತಡೆಯುವುದು ಹಾಗೂ ರೈತರಿಗೆ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದು ಈಗ ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ.ರೈತರ ಹಿತಾಸಕ್ತಿಯನ್ನು ರಕ್ಷಿಸುವುದು ಮತ್ತು ಕರ್ನಾಟಕದಾದ್ಯಂತ ಸಮರ್ಪಕ ರಸಗೊಬ್ಬರ ಲಭ್ಯತೆಯನ್ನು ಖಚಿತಪಡಿಸುವುದಕ್ಕೆ ಭಾರತ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದ್ದಾರೆ.

RELATED ARTICLES

Latest News