ಪಾಲ್ಘರ್,ಜೂ.14- ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ಪ್ರದೇಶದಲ್ಲಿ ಸಹೋದರಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ನೆರೆಯ ಗುಜರಾತ್ನ ಭರುಚ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ಆರೋಪಿ ಪರಾರಿಯಾಗಿದ್ದನು. ಕಳೆದ ಎರಡು ವಾರಗಳಿಂದ ಆತನಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತುಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ರಾರ್ರಿ ಸಿನಿಮೀಯ ರೀತಿ ಆರೋಪಿಯನ್ನು ಬೆನ್ನಟ್ಟಿ ಗುಜರಾತ್ನ ಭರುಚ್ ನಗರದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್ಮೇಲ್ಗೆ ಒಳಗಾದ ಇಬ್ಬರು ಸಹೋದರಿಯರು ನೀಡಿದ ದೂರಿನ ಆಧಾರದ ಮೇಲೆ ಕಳೆದ ಜೂನ್ 1ರಂದು ಪ್ರಕರಣ ದಾಖಲಾಗಿತ್ತು.
ಪ್ರಕರಣವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ವಿಧಾನ ಪರಿಷತ್ ಸದಸ್ಯೆ ಚಿತ್ರಾ ವಾಘ್ ಅವರು ಜೂನ್ 6ರಂದು ಸಂತ್ರಸ್ತೆಯರ ಕುಟುಂಬವನ್ನು ಹಾಗೂ ದಹಾನು ಪೊಲೀಸ್ ಠಾಣೆಗೆ ಭೇಟಿ ನೀಡಿ, ಆರೋಪಿಯ ವಿರುದ್ಧ ತಕ್ಷಣ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಇದೇ ವೇಳೆ, ಆರೋಪಿಯ ನಿವಾಸವು ಅನಧಿಕೃತವಾಗಿ ನಿರ್ಮಿಸಲಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದರು.ನಂತರ ಈ ಪ್ರಕರಣದ ಕುರಿತು ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಆರೋಪಿಯನ್ನು ಪತ್ತೆಹಚ್ಚಲು ಪಾಲ್ಘರ್ ಪೊಲೀಸರು ಹಲವು ವಿಶೇಷ ತಂಡಗಳನ್ನು ರಚಿಸಿ ನೆರೆಯ ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಅಂತಿಮವಾಗಿ ಗುಜರಾತ್ನ ಭರುಚ್ನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮತ್ತು ಕಾನೂನು ಪ್ರಕ್ರಿಯೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
