Homeಕ್ರೀಡಾ ಸುದ್ದಿಮೊದಲ ಹ್ಯಾಟ್ರಿಕ್‌ ಗೋಲು ಬಾರಿಸಿ ಮೆಸ್ಸಿ ಮಿಂಚು : ಅಲ್ಜೀರಿಯಾ ವಿರುದ್ಧ ಅರ್ಜೆಂಟೀನಾ 3-0 ಗೆಲುವು

ಮೊದಲ ಹ್ಯಾಟ್ರಿಕ್‌ ಗೋಲು ಬಾರಿಸಿ ಮೆಸ್ಸಿ ಮಿಂಚು : ಅಲ್ಜೀರಿಯಾ ವಿರುದ್ಧ ಅರ್ಜೆಂಟೀನಾ 3-0 ಗೆಲುವು

Lionel Messi scores hat-trick in Argentina win over Algeria

ಕಾನ್ಸಾಸ್‌‍ ಸಿಟಿ (ಅಮೆರಿಕ), ಜೂ.17- ಫುಟ್‌ಬಾಲ್‌‍ ದಿಗ್ಗಜ ಲಿಯೊನೆಲ್‌ ಮೆಸ್ಸಿ ವಿಶ್ವಕಪ್‌ ಇತಿಹಾಸದಲ್ಲಿ ತಮ ಮೊದಲ ಹ್ಯಾಟ್ರಿಕ್‌ ಗೋಲಿನ ದಾಖಲೆ ಮಾಡಿ ಮಿಂಚಿದ್ದಾರೆ.
ಜರ್ಮನಿಯ ಮಿರೊಸ್ಲಾವ್‌ ಕ್ಲೋಸೆ ಅವರ ಅತಿ ಹೆಚ್ಚು ಗೋಲುಗಳ ದಾಖಲೆಯನ್ನು ಸರಿಗಟ್ಟಿದರು ಮೆಸ್ಸಿ ಅದ್ಭುತ ಪ್ರದರ್ಶನದ ನೆರವಿನಿಂದ ಅರ್ಜೆಂಟೀನಾ ತಂಡ ಅಲ್ಜೀರಿಯಾ ವಿರುದ್ಧ 3-0 ಗೋಲುಗಳ ಭರ್ಜರಿ ಜಯ ಸಾಧಿಸಿದೆ.

ಹಾಲಿ ಚಾಂಪಿಯನ್‌ ಅರ್ಜೆಂಟೀನಾ ತನ್ನ ವಿಶ್ವಕಪ್‌ ಅಭಿಯಾನವನ್ನು ಶುಭಾರಂಭ
ಮಾಡಿದೆ. ಅಮೆರಿಕದ ಕಾನ್ಸಾಸ್‌‍ ಸಿಟಿಯ ಆರೋಹೆಡ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೆಸ್ಸಿಆರಂಭದಿಂದಲೇ ಮಿಂಚಿದರು. ಇಂಟರ್‌ ಮಿಯಾಮಿ ತಂಡದ ಸಹ ಆಟಗಾರ ರೊಡ್ರಿಗೊ ಡಿ ಪೌಲ್‌ ನೀಡಿದ ಅದ್ಭುತ ಪಾಸ್‌‍ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ ಅವರು ಪಂದ್ಯದ ಆರಂಭಿಕ ನಿಮಿಷಗಳಲ್ಲೇ ಅರ್ಜೆಂಟೀನಾಗೆ ಮುನ್ನಡೆ ತಂದುಕೊಟ್ಟರು.

ಎರಡನೇಾರ್ಧದ ಆರಂಭದಲ್ಲೇ ಮತ್ತೊಂದು ಗೋಲು ದಾಖಲಿಸಿದ ಮೆಸ್ಸಿ, ಪಂದ್ಯ ಮುಗಿಯುವ ಕೆಲ ಕ್ಷಣಗಳ ಮೊದಲು ಮೂರನೇ ಗೋಲು ಬಾರಿಸಿ ತಮ್ಮ ಮೊದಲ ವಿಶ್ವಕಪ್‌ ಹ್ಯಾಟ್ರಿಕ್‌ ಪೂರ್ಣಗೊಳಿಸಿದರು. ಬಳಿಕ ಅವರು ಮೈದಾನ ತೊರೆಯುವಾಗ ಕ್ರೀಡಾಂಗಣದಲ್ಲಿದ್ದ ಸಾವಿರಾರು ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು.

ಈ ಮೂರು ಗೋಲುಗಳೊಂದಿಗೆ ಮೆಸ್ಸಿವಿಶ್ವಕಪ್‌ನಲ್ಲಿ ತಮ ಗೋಲುಗಳ ಸಂಖ್ಯೆಯನ್ನು 16ಕ್ಕೆ ಏರಿಸಿಕೊಂಡು ಜರ್ಮನಿಯ ಮಾಜಿ ಆಟಗಾರ ಮಿರೊಸ್ಲಾವ್‌ ಕ್ಲೋಸೆ ಅವರ ದಾಖಲೆಯ ಸಮಬಲ ಸಾಧಿಸಿದರು. ಮುಂದಿನ ಪಂದ್ಯಗಳಲ್ಲಿ ಅವರು ಈ ದಾಖಲೆಯನ್ನು ಹಿಂದಿಕ್ಕುವ ಸಾಧ್ಯತೆ ಹೆಚ್ಚಿದೆ.

ರೊಸಾರಿಯೊ ಮೂಲದ ಮೆಸ್ಸಿ ವಿಶ್ವಕಪ್‌ನ ಐದು ವಿಭಿನ್ನ ಆವೃತ್ತಿಗಳಲ್ಲಿ ಗೋಲು ದಾಖಲಿಸಿದ ಕೇವಲ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿಶ್ವಕಪ್‌ಗೆ ಅವರು ಪಾದಾರ್ಪಣೆ ಮಾಡಿದ್ದು 20 ವರ್ಷಗಳ ಹಿಂದೆ ಸರ್ಬಿಯಾ ಮತ್ತು ಮೊಂಟೆನೆಗ್ರೊ ವಿರುದ್ಧದ ಪಂದ್ಯದಲ್ಲಿ ಅಂದೂ ಅವರು ಗೋಲು ದಾಖಲಿಸಿದ್ದರು.

ಇದು ಮೆಸ್ಸಿಅವರ ವೃತ್ತಿಜೀವನದ 61ನೇ ಹ್ಯಾಟ್ರಿಕ್‌ ಆಗಿದ್ದು, ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರ ದಾಖಲಿಸಿದ 11ನೇ ಹ್ಯಾಟ್ರಿಕ್‌ ಆಗಿದೆ. ಅಲ್ಲದೆ, ವಿಶ್ವಕಪ್‌ನಲ್ಲಿ ಸತತ ಐದು ಪಂದ್ಯಗಳಲ್ಲಿ ಗೋಲು ಗಳಿಸಿದ ಸಾಧನೆಯನ್ನೂ ಅವರು ಮಾಡಿದರು.

ಲಿಯೋ ಬಗ್ಗೆ ಹೇಳಲು ನನ್ನ ಬಳಿ ಪದಗಳೇ ಇಲ್ಲ. ಅವರು ಅದ್ಭುತ ಆಟಗಾರ. ಫುಟ್‌ಬಾಲ್‌‍ ಪ್ರಪಂಚದ ಪ್ರತಿಯೊಬ್ಬರೂ ಅವರನ್ನು ಆಡುತ್ತಿರುವುದನ್ನು ನೋಡಲು ಬಯಸುತ್ತಾರೆ ಮತ್ತು ಆನಂದಿಸುತ್ತಾರೆ ಎಂದು ಅರ್ಜೆಂಟೀನಾ ಮುಖ್ಯ ಕೋಚ್‌ ಲಿಯೊನೆಲ್‌ ಸ್ಕಲೋನಿ ಹೇಳಿದ್ದಾರೆ.
ಮೆಸ್ಸಿಯ ಪ್ರದರ್ಶನವು ಇದೇ ದಿನ ಮಿಂಚಿದ್ದ ಇತರ ಇಬ್ಬರು ತಾರಾ ಆಟಗಾರರಾದ ಫ್ರಾನ್‌್ಸನ ಕೈಲಿಯನ್‌ ಎಂಬಾಪೆ ಮತ್ತು ನಾರ್ವೆಯ ಎರ್ಲಿಂಗ್‌ ಹಾಲೆಂಡ್‌ ಅವರ ಸಾಧನೆಗಳನ್ನು ಮರೆಮಾಡಿತು.

ಸೆನೆಗಲ್‌ ವಿರುದ್ಧ ಫ್ರಾನ್‌್ಸನ 3-1 ಗೆಲುವಿನಲ್ಲಿ ಎಂಬಾಪೆ ಎರಡು ಗೋಲು ಗಳಿಸಿ ವಿಶ್ವಕಪ್‌ ಗೋಲುಗಳ ಪಟ್ಟಿಯಲ್ಲಿ 14 ಗೋಲುಗಳೊಂದಿಗೆ ನಾಲ್ಕನೇ ಸ್ಥಾನವನ್ನು ಹಂಚಿಕೊಂಡರು. ಮತ್ತೊಂದೆಡೆ ಇರಾಕ್‌ ವಿರುದ್ಧ ನಾರ್ವೆಯ 4-1 ಜಯದಲ್ಲಿ ಹಾಲೆಂಡ್‌ ಎರಡು ಗೋಲು ದಾಖಲಿಸಿದರು.

ಮೆಸ್ಸಿ ಒಬ್ಬ ಹುಚ್ಚು ಪ್ರತಿಭೆ ಎಂದು ಹಾಲೆಂಡ್‌ ಸಾಮಾಜಿಕ ಜಾಲತಾಣ ಸ್ನಾಪ್‌ಚಾಟ್‌ನಲ್ಲಿ ಪ್ರತಿಕ್ರಿಯಿಸಿದರು.ಮುಂದಿನ ವಾರ 39ನೇ ವಯಸ್ಸಿಗೆ ಕಾಲಿಡಲಿರುವ ಮೆಸ್ಸಿ, ವಿಶ್ವಕಪ್‌ಗೆ ಮುನ್ನ ಇಂಟರ್‌ ಮಿಯಾಮಿ ಪರ ಆಡುತ್ತಿದ್ದಾಗ ಸಣ್ಣ ಪ್ರಮಾಣದ ಹ್ಯಾಮ್‌ಸ್ಟ್ರಿಂಗ್‌‍ ಗಾಯದಿಂದ ಬಳಲುತ್ತಿದ್ದರು. ಆದರೂ, ಎಂಟು ಬಾರಿ ಬ್ಯಾಲನ್‌ ಡಿಓರ್‌ ಪ್ರಶಸ್ತಿ ಗೆದ್ದಿರುವ ಅವರು ಕಳೆದ ವಾರ ಐಸ್‌‍ಲ್ಯಾಂಡ್‌‍ ವಿರುದ್ಧದ ಸಿದ್ಧತಾ ಪಂದ್ಯದಲ್ಲಿ ಕೇವಲ 20 ನಿಮಿಷ ಆಡಿದರೂ ಪೆನಾಲ್ಟಿ ಮೂಲಕ ಗೋಲು ದಾಖಲಿಸಿ ತಮ್ಮ ಫಿಟ್‌ನೆಸ್‌‍ ಸಾಬೀತುಪಡಿಸಿದ್ದರು.

ಅಲ್ಜೀರಿಯಾ ವಿರುದ್ಧದ ಪಂದ್ಯವು ಮೆಸ್ಸಿಯ ಅಂತಾರಾಷ್ಟ್ರೀಯ ವೃತ್ತಿಜೀವನದ 200ನೇ ಪಂದ್ಯವಾಗಿತ್ತು. 2005ರಲ್ಲಿ 18ನೇ ವಯಸ್ಸಿನಲ್ಲಿ ಅವರು ಅರ್ಜೆಂಟೀನಾ ಪರ ಪದಾರ್ಪಣೆ ಮಾಡಿದ್ದರು. ಈ ಪಟ್ಟಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (228ಕ್ಕೂ ಹೆಚ್ಚು ಪಂದ್ಯಗಳು) ಮತ್ತು ಕುವೈತ್‌ನ ಬಾದರ್‌ ಅಲ್‌‍-ಮುತಾವಾ ಮಾತ್ರ ಮೆಸ್ಸಿಗಿಂತ ಮುಂದಿದ್ದಾರೆ.
ವಿಶ್ವಕಪ್‌ನ ಐದು ಆವೃತ್ತಿಗಳಲ್ಲಿ ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೆಸ್ಸಿ ಮತ್ತು ರೊನಾಲ್ಡೊ ಮಾತ್ರ ಸ್ಥಾನ ಪಡೆದಿದ್ದಾರೆ.

ಅರ್ಜೆಂಟೀನಾ ತಂಡವು ತನ್ನ ಶಿಬಿರವನ್ನು ಕಾನ್ಸಾಸ್‌‍ ಸಿಟಿಯಲ್ಲಿ ನಡೆಸುತ್ತಿರುವ ನಾಲ್ಕು ರಾಷ್ಟ್ರೀಯ ತಂಡಗಳಲ್ಲಿ ಒಂದಾಗಿದೆ. ತಂಡದ ಆಗಮನದ ಬಳಿಕ ಇಡೀ ಪ್ರದೇಶದಲ್ಲಿ ಮೆಸ್ಸಿ ಹುಚ್ಚು ಆವರಿಸಿದ್ದು, ಪಂದ್ಯ ದಿನ ಸಾವಿರಾರು ಅಭಿಮಾನಿಗಳು ಮೆಸ್ಸಿಯ 10ನೇ ಸಂಖ್ಯೆಯ ಜೆರ್ಸಿ ಧರಿಸಿ ಕ್ರೀಡಾಂಗಣಕ್ಕೆ ಹರಿದುಬಂದಿದ್ದರು.

ಪಂದ್ಯ ವೀಕ್ಷಣಾ ಕಾರ್ಯಕ್ರಮದಲ್ಲಿ ಅರ್ಜೆಂಟೀನಾ ಜೆರ್ಸಿ ತೊಟ್ಟ ಮೇಕೆಯೊಂದನ್ನು ವೇದಿಕೆಗೆ ಕರೆತಂದಿದ್ದು, ಮೆಸ್ಸಿಯನ್ನು ಫುಟ್‌ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಬಣ್ಣಿಸುವ ಅಭಿಮಾನಿಗಳ ಉತ್ಸಾಹಕ್ಕೆ ಸಾಕ್ಷಿಯಾಯಿತು. ಮೆಸ್ಸಿ ಮತ್ತೊಮ್ಮೆ ತಮ್ಮ ಪ್ರದರ್ಶನದ ಮೂಲಕ ಆ ಬಿರುದಿಗೆ ತಕ್ಕವರು ಎಂಬುದನ್ನು ಸಾಬೀತುಪಡಿಸಿದರು.

RELATED ARTICLES

Latest News