ಬೆಂಗಳೂರು, ನ.6- ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ 23 ಲಕ್ಷಕ್ಕೂ ಅಧಿಕ ಅನರ್ಹ ಫಲಾನುಭವಿಗಳಿರುವುದು ಕಂಡುಬಂದಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 60 ವರ್ಷ ದಾಟಿದ ಅರ್ಹರಿಗೆ ಪಿಂಚಣಿ ನೀಡುವುದು ಸರ್ಕಾರದ ಉದ್ದೇಶ. ಆದರೆ 20, 30 ಹಾಗೂ 40 ವರ್ಷ ವಯಸ್ಸಿನವರೂ ಪಿಂಚಣಿಗಾಗಿ ಅರ್ಜಿ ಸಲ್ಲಿಸಿರುವ ಪ್ರಕರಣಗಳಿವೆ. ಇಂತಹ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಯಿಂದ ಹೊರಹಾಕಬೇಕಾಗಿದೆ. ಈ ಕುರಿತು ಮೂರು ಬಾರಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮಾಸಾಶನ ಪಡೆಯಲು ಇದ್ದ ವಾರ್ಷಿಕ ಆದಾಯ ಮಿತಿಯನ್ನು 30 ಸಾವಿರ ರೂಪಾಯಿಯಿಂದ 1.20 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಆದಾಯದ ಮಿತಿಯ ಸಮಸ್ಯೆ ಎದುರಾಗುವುದಿಲ್ಲ. ಎರಡು ವಾರದಲ್ಲಿ ಪಿಂಚಣಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಬಸ್ ಪ್ರಯಾಣ ದರ ಹೆಚ್ಚಳವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕೇಂದ್ರ ಸರ್ಕಾರ ಎಷ್ಟು ಬಾರಿ ಹೆಚ್ಚಿಸಿದೆ ಎಂಬುದನ್ನೂ ಗಮನಿಸಬೇಕು. ಜೋಶಿ ಸಚಿವರಾದ ಮೇಲೆಯೇ 14 ಬಾರಿ ಇಂಧನ ಬೆಲೆ ಹೆಚ್ಚಳವಾಗಿದೆ. ಇಂಧನ ದರ ಹೆಚ್ಚಳದಿಂದ ಸಾರಿಗೆ ಸಂಸ್ಥೆಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ. ಇದರಿಂದಾಗಿ ಸಾರಿಗೆ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿಚಾರವಾಗಿ ಸಂಪುಟ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿಲ್ಲ. ಕೆಲವು ಸಚಿವರು ತಮ ಕ್ಷೇತ್ರಗಳಲ್ಲಿ ಸುಮಾರು ಎರಡು ಸಾವಿರ ಮತದಾರರ ಹೆಸರುಗಳನ್ನು ಮಾತ್ರ ಕೈಬಿಡಲಾಗಿದೆ, ಹೆಚ್ಚಿನ ಪರಿಣಾಮವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ರಾಜ್ಯದ ಒಟ್ಟಾರೆ ಚಿತ್ರಣವನ್ನು ಗಮನಿಸಿದರೆ ಸುಮಾರು 1.08 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವ ಮಾಹಿತಿ ಇದೆ.
ಇವರಲ್ಲಿ 16 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕೆಲವರು ಬದುಕಿದ್ದೇವೆ ಎಂದು ಬಂದಿದ್ದಾರೆ. 65 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ ಎಂಬ ಮಾಹಿತಿಯೂ ಇದೆ. ಸ್ಥಳಾಂತರಗೊಂಡವರು ಬೇರೆ ಯಾವುದಾದರೂ ಪ್ರದೇಶದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರಬೇಕಲ್ಲವೇ ಎಂದು ಪ್ರಶ್ನಿಸಿದರು.
ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂಬುದು ಪಕ್ಷದ ನಿಲುವು. ಸರ್ಕಾರವೂ ಇದೇ ನಿಲುವಿಗೆ ಬದ್ಧವಾಗಿದೆ. ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದರೂ ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಪಕ್ಷ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಆಧರಿಸಿ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ಪರಮೇಶ್ವರ್ ಹೇಳಿದರು.
