ಬೆಂಗಳೂರು,ಜೂ.18- ಉದ್ಯಮಿಯೊಬ್ಬರನ್ನು ಅಪಹರಿಸಿ 1.9 ಕೋಟಿ ಹಣ ದರೋಡೆ ಮಾಡಿ ಪರಾರಿಯಾಗಿರುವ ಏಳು ಮಂದಿ ಆರೋಪಿಗಳಿಗಾಗಿ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪರಿಚಯಸ್ಥರೇ ಈ ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ.
ಮುನಿಸ್ವಾಮಿರೆಡ್ಡಿ ಲೇಔಟ್ ನಿವಾಸಿಯಾಗಿರುವ ಉದ್ಯಮಿ ಶಿವಶಂಕರ್ ಅವರು ತಮ ಸ್ನೇಹಿತ ಚೇತನ್ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಕುದುರೆಗೆರೆ ಗಣೇಶ ದೇವಸ್ಥಾನದ ಬಳಿ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಏಕಾಏಕಿ ಅವರ ಮೇಲೆ ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿ ಅವರಿಬ್ಬರನ್ನು ಅಪಹರಿಸಿದ್ದಾರೆ. ಕಾರಿನಲ್ಲಿದ್ದ 74 ಲಕ್ಷ ಹಣ ದೋಚಿದಲ್ಲದೇ ಅವರ ಮನೆಯಲ್ಲಿಟ್ಟಿದ್ದ 35 ಲಕ್ಷ ಹಣವನ್ನೂ ತರಿಸಿಕೊಂಡು ಒಟ್ಟು 1.9 ಕೋಟಿ ಹಣದೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ.
ಇವರ ಬಳಿ ಹಣವಿರುವುದು ಗೊತ್ತಿದ್ದವರೇ ಸಂಚು ರೂಪಿಸಿ ದರೋಡೆ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಎಲ್ಲಾ ಆಯಾಮಗಳಲ್ಲೂ ಪೊಲೀಸರು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಉದ್ಯಮಿ ಶಿವಶಂಕರ್ ಅವರು ಸ್ನೇಹಿತರೊಂದಿಗೆ ಸೇರಿಕೊಂಡು ಯಶವಂತಪುರದಲ್ಲಿ ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿದ್ದರು. ತದನಂತರ ರೈಸ್ ಫುಲ್ಲಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದರು. ಬಳಿಕ ಆ ಹಣ ಗಳಿಸಲು ಸ್ನೇಹಿತರ ಜೊತೆ ಸೇರಿ ರೈಸ್ ಫುಲ್ಲಿಂಗ್ ನಡೆಸುತ್ತಿದ್ದರು. ಈ ಸಂಬಂಧ ಶಿವಶಂಕರ್ ವಿರುದ್ಧವೇ ಪ್ರಕರಣ ದಾಖಲಾಗಿತ್ತು. ಇದೀಗ ಹಣ ದರೋಡೆ ದೂರಿನ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
