ಬೆಂಗಳೂರು, ಜೂ. 18- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಣತಂತ್ರ ಫಲ ನೀಡಿದ್ದು, ಕಾಂಗ್ರೆಸ್ ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಗೆಲುವು ಸಾಧಿಸಿದ್ದಾರೆ. ಸಂಖ್ಯಾಬಲದ ಲೆಕ್ಕಾಚಾರ ಪ್ರಕಾರ ಕಾಂಗ್ರೆಸ್ 4, ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಲು ಅವಕಾಶವಿತ್ತು. 7ನೇ ಅಭ್ಯರ್ಥಿ ಬಗ್ಗೆ ಭಾರೀ ಕುತೂಹಲಗಳಿದ್ದವು. 18 ಶಾಸಕರನ್ನು ಹೊಂದಿರುವ ಜೆಡಿಎಸ್, ಬಿಜೆಪಿಯಿಂದ ಹೆಚ್ಚುವರಿಯಾಗಿ ದೊರೆಯುವ 6 ಮತಗಳನ್ನು ಲೆಕ್ಕಕ್ಕಿಟ್ಟುಕೊಂಡು, ತನ್ನ ಪಕ್ಷದ ಅಭ್ಯರ್ಥಿಯನ್ನಾಗಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಗೋವಿಂದರಾಜು ಅವರನ್ನು ಕಣಕ್ಕಿಳಿಸಿತ್ತು.
MLC ಚುನಾವಣಾ ಫಲಿತಾಂಶ : ಗೆದ್ದ ಅಭ್ಯರ್ಥಿಗಳು
ಕಾಂಗ್ರೆಸ್
ವಿನಯ್ ಕಾರ್ತಿಕ್ 32
ಹರಿ ಪ್ರಸಾದ್ 30
ತಿಪಣ್ಣಪ್ಪ ಕಮಕನೂರು 30
ಶಿವಣ್ಣ ಮಳವಳ್ಳಿ 30
ಪಿ.ವಿ.ಮೋಹನ್ 29
ಬಿಜೆಪಿ
ರಘು ಕೌಟಿಲ್ಯ 29
ಲಿಂಗರಾಜ ಪಾಟೀಲ 27
ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು 14 ಮತ ಬಿದಿದ್ದು, ಒಂದು ಮತ ಅಮಾನ್ಯಗೊಂಡಿದೆ. ಬಿಜೆಪಿ ಮತ್ತು ಜೆಡಿಎಸ್ ನ 3 ಶಾಸಕರ
ಅಡ್ಡ ಮತದಾನ ಮಾಡಿದ್ದಾರೆ.
ಕಾಂಗ್ರೆಸ್ ತನ್ನ ಪಕ್ಷದ 4 ಅಭ್ಯರ್ಥಿಗಳಿಗೆ ತಲಾ 30 ಮತಗಳಂತೆ ಹಂಚಿಕೆ ಮಾಡಿತ್ತು. ಒಟ್ಟು 135 ಶಾಸಕರಲ್ಲಿ 4 ಅಭ್ಯರ್ಥಿಗಳಿಗೆ 120 ಮತಗಳು ಹಂಚಿಕೆಯಾಗಿದ್ದು, ಹೆಚ್ಚುವರಿಯಾಗಿ ಉಳಿಯುವ 15 ಮತಗಳನ್ನು ವ್ಯರ್ಥಗೊಳ್ಳಬಾರದು ಎಂಬ ಕಾರಣಕ್ಕೆ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಜೊತೆಗೆ 135 ಶಾಸಕರಿಂದಲೂ 2ನೇ ಪ್ರಾಶಸ್ತ್ಯದ ಮತಗಳನ್ನು 5ನೇ ಅಭ್ಯರ್ಥಿಗೆ ಹಾಕುವಂತೆ ಸೂಚಿಸಲಾಗಿದ್ದು, ಇದು 4:1ರ ಅನುಪಾತದಲ್ಲಿ 33 ಮತಗಳಾಗುವ ಅಂದಾಜಿದೆ. ನಿರೀಕ್ಷೆಯಂತೆ ನಡೆದರೆ ವಿನಯ್ ಕಾರ್ತಿಕ ಗೆಲುವು ಸುಲಭ ಸಾಧ್ಯವಾಗಲಿದೆ.

ಬಿಜೆಪಿ 62 ಶಾಸಕರನ್ನು ಹೊಂದಿದ್ದು, ತನ್ನಿಬ್ಬರು ಅಭ್ಯರ್ಥಿಗಳ ಗೆಲುವಿಗೆ ಅಗತ್ಯವಿರುವ ತಲಾ 28 ಮತಗಳ ಬದಲಾಗಿ 30 ಮತಗಳನ್ನು ಹಂಚಿಕೆ ಮಾಡಿದೆ ಎಂದು ಹೇಳಲಾಗಿದೆ. 28 ಮತಗಳನ್ನು ಹಂಚಿಕೆ ಮಾಡಿದರೆ, ಬಿಜೆಪಿಯಿಂದ, ಜೆಡಿಎಸ್ ಅಭ್ಯರ್ಥಿಗೆ 6 ಹೆಚ್ಚುವರಿ ಮತಗಳು ಉಳಿಯುತ್ತಿದ್ದವು. 30 ಮತಗಳು ಹಂಚಿಕೆಯಾಗಿರುವುದರಿಂದಾಗಿ 2 ಮತಗಳು ಮಾತ್ರ ಉಳಿದಂತಾಗಿದೆ. ಬಿಜೆಪಿಯ ಉಚ್ಛಾಟಿತ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರುಗಳಲ್ಲಿ, ಯತ್ನಾಳ್ ತಾವು ಬಿಜೆಪಿಯ ಅಭ್ಯರ್ಥಿಗೆ ಮತ ಚಲಾಯಿಸುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಇಬ್ಬರು ತಮನ್ನು ಜೆಡಿಎಸ್-ಬಿಜೆಪಿಯ ಯಾವ ನಾಯಕರೂ ಸಂಪರ್ಕ ಮಾಡಿ, ಮತ ಕೇಳಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಆತಸಾಕ್ಷಿ ಮತ ಹಾಕಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ಎರಡು ಮತಗಳು ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಇದೆ.
ಜೊತೆಗೆ ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿ ಗೌಡ, ಸರ್ವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿರುವ ನಿರೀಕ್ಷೆಗಳಿವೆ.
ಕಾಂಗ್ರೆಸ್ನ ಹೆಚ್ಚುವರಿ 15 ಮತಗಳು, ಬಿಜೆಪಿಯ ಇಬ್ಬರು ಉಚ್ಛಾಟಿತರು, ಇಬ್ಬರು ಪಕ್ಷೇತರರು, ಸರ್ವೋದಯ ಪಕ್ಷದ ಒಬ್ಬರು ಸೇರಿ ಆಡಳಿರೂಢ ಪಕ್ಷದ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ಗೆ 20 ಮತಗಳು ಚಲಾವಣೆಯಾಗಿರಬಹುದು ಎನ್ನಲಾಗುತ್ತಿದೆ. ಜೆಡಿಎಸ್ನಿಂದ 3-4 ಮತಗಳನ್ನು ಕಾಂಗ್ರೆಸ್ ತನ್ನ ಪಾಲಿಗೆ ಲೆಕ್ಕ ಇಟ್ಟುಕೊಂಡಿದೆ. ಒಂದು ವೇಳೆ ಅದು ಸಾಧ್ಯವಾದರೆ ಕಾಂಗ್ರೆಸ್ 5ನೇ ಅಭ್ಯರ್ಥಿ ಗೆಲುವು ಸುಲಭ ಸಾಧ್ಯವಾಗಬಹುದು.
ಇದು ಒಂದು ಲೆಕ್ಕಾಚಾರವಾದರೆ, ಜೆಡಿಎಸ್ ಅಭ್ಯರ್ಥಿ ತನ್ನ ಪಕ್ಷದ 18 ಮತ್ತು ಬಿಜೆಪಿಯ ಹೆಚ್ಚುವರಿ 2 ಮತಗಳನ್ನೊಳಗೊಂಡು, ಸುಮಾರು 20 ಮತಗಳನ್ನು ಪಡೆದರೆ ಮೊದಲ ಪ್ರಾಶಸ್ತ್ಯದಲ್ಲಿ ಸಮಬಲದ ಪೈಪೋಟಿ ಎದುರಾಗಲಿದೆ. ಆಗ 2ನೇ ಪ್ರಾಶಸ್ತ್ಯದ ಮತಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಜೆಡಿಎಸ್ನ ಗೋವಿಂದರಾಜು ಮತ್ತು ಕಾಂಗ್ರೆಸ್ನ ವಿನಯ್ ಕಾರ್ತಿಕ್ ನಡುವೆ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಒಂದೆರಡು ಅಂತರದ ವ್ಯತ್ಯಾಸಗಳಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮೊದಲ ಪ್ರಾಶಸ್ತ್ಯದ ಮತದಲ್ಲಿ ಯಾರು ಹೆಚ್ಚು ಮತ ಪಡೆದಿರುತ್ತಾರೋ ಅವರಿಗೆ 2ನೇ ಪ್ರಾಶಸ್ತ್ಯದ ಮತಗಳ ಗಣಿಕೆ ಆರಂಭವಾಗಲಿದೆ.
ಒಂದು ವೇಳೆ ವಿನಯ್ ಕಾರ್ತಿಕ್ 21 ಮತಗಳನ್ನು ಪಡೆದಿದ್ದರೆ ಅವರಿಗೆ 2ನೇ ಪ್ರಾಶಸ್ತ್ಯದ ಮತ ಲೆಕ್ಕ ಹಾಕಲಾಗುವುದು. ಆಗ ಗೆಲುವು ಸುಲಭವಾಗಲಿದೆ ಅಥವಾ ಗೋವಿಂದರಾಜ್ ಅವರು ಹೆಚ್ಚು ಮತ ಪಡೆದಿದ್ದರೆ ಅವರಿಗೆ 2ನೇ ಪ್ರಾಶಸ್ತ್ಯ ಮತಗಳನ್ನು ಸೇರಿಸಲಾಗುತ್ತಿದೆ. ಇದು 4:1 ಅನುಪಾತದಲ್ಲಿ 20 ಮತಗಳಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಹೆಚ್ಚು ಮತ ಪಡೆದಿದ್ದರೆ ಅವರಿಗೆ 2ನೇ ಪ್ರಾಶಸ್ತ್ಯದಲ್ಲಿ 33 ಮತಗಳು ದೊರೆಯುವ ನಿರೀಕ್ಷೆ ಇದೆ. ಚುನಾವಣೆ ಮೇಲ್ನೋಟಕ್ಕೆ ಶಾಂತಿಯುತವಾಗಿ ನಡೆದಿದ್ದರೂ ಲೆಕ್ಕಾಚಾರ ಹಾಗೂ ಪೈಪೋಟಿಯಿಂದಾಗಿ ಕದನ ಕುತೂಹಲ ಕೆರಳಿಸಿತ್ತು. ಜೆಡಿಎಸ್ನ ಜಿ.ಟಿ.ದೇವೇಗೌಡ ಅವರು ಎಲ್ಲರಿಗಿಂತಲೂ ಮೊದಲೇ ಬಂದು ಮತ ಚಲಾಯಿಸಿ ತೆರಳುವಾಗ ತಾವು ಆತ ಸಾಕ್ಷಿಯ ಮತ ಹಾಕಿದ್ದೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 5ನೇ ಅಭ್ಯರ್ಥಿಯ ಗೆಲುವು ಪ್ರತಿಷ್ಠೆಯ ಕಣವಾಗಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದೇ ಪ್ರಮುಖ ಧ್ಯೇಯವಾದಂತೆ ಕಂಡು ಬರುತ್ತಿದೆ. ಚುನಾವಣೆಯಲ್ಲಿ ಅಡ್ಡ ಮತದ ಭೀತಿ ಎಲ್ಲಾ ಪಕ್ಷಗಳನ್ನು ಕಾಡುತ್ತಿದೆ. ಜೆಡಿಎಸ್ನಲ್ಲಿರುವ ಅಸಮಾಧಾನಿತರು ಕಾಂಗ್ರೆಸ್ ಅನ್ನು ಬೆಂಬಲಿಸಬಹುದೆಂಬ ಅಂದಾಜುಗಳಿದ್ದರೆ, ಅದೇ ರೀತಿ ಕಾಂಗ್ರೆಸ್ ನಲ್ಲಿರುವ ಅತೃಪ್ತರು ಜೆಡಿಎಸ್ ಅಭ್ಯರ್ಥಿಗೆ ಆತಸಾಕ್ಷಿ ಮತ ಚಲಾಯಿಸುವ ಆತಂಕಗಳಿವೆ.ಮೇಲ್ನೋಟಕ್ಕೆ ಜೆಡಿಎಸ್ ಅಭ್ಯರ್ಥಿ ಕೈಚೆಲ್ಲಿದಂತೆ ಕಂಡು ಬಂದಿದ್ದು, ಕಾಂಗ್ರೆಸ್ 5ನೇ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿದ್ದವು. ಆದರೆ ಆತಸಾಕ್ಷಿ ಮತಗಳು ಯಾವ ದಿಕ್ಕಿಗೆ ಸಾಗಿವೆ ಎಂಬುದು ಅಸ್ಪಷ್ಟವಾಗಿವೆ.
ಟಿಕೆಟ್ ಭರವಸೆ:
ಕಾಂಗ್ರೆಸ್ ಪಕ್ಷ ಬಿಜೆಪಿಯ ಉಚ್ಛಾಟಿತ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಮತ್ತು ಜೆಡಿಎಸ್ನ ಒಬ್ಬ ಹಿರಿಯ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಬಿ ಫಾರಂ ನೀಡುವ ಭರವಸೆಕೊಟ್ಟು ಮತ ಪಡೆಯಲೆತ್ನಿಸಿದೆ ಎಂದು ಹೇಳಲಾಗಿದೆ. ಚುನಾವಣೆಯ ಬಳಿಕ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಪಕ್ಷದ ಶಾಸಕರ ಸಭೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ.ಮೋಹನ್, ಶಿವಣ್ಣ ಮಳವಳ್ಳಿ, ಬಿಜೆಪಿಯ ರಘುಕೌಟಿಲ್ಯ, ಲಿಂಗರಾಜು ಪಾಟೀಲ್ ಗೆಲುವು ಬಹುತೇಕ ಖಚಿತವಾಗಿದೆ.
ಪ್ರತಿಯೊಬ್ಬ ಅಭ್ಯರ್ಥಿಗೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು 28ರ ಬದಲಾಗಿ ತಲಾ 30 ಮತಗಳನ್ನು ಹಂಚಿಕೆ ಮಾಡಿದ್ದು, ಕಾರ್ಯತಂತ್ರ ಬದಲಾಗುವಂತೆ ಮಾಡಿದ್ದಲ್ಲದೇ ಜೆಡಿಎಸ್ಗೆ ಶಾಕ್ ನೀಡಿತ್ತು.
