ಮೈಸೂರು,ಆ.3-ಆಗಸ್ಟ್ ತಿಂಗಳ ಆರಂಭದಲ್ಲಿ ಮುಂಗಾರು ಚೇತರಿಕೆಗೊಂಡು ಕಾವೇರಿ ನದಿಯ ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯದ ನೀರಿನ ಸಂಗ್ರಹವು ನೂರು ಅಡಿಗಿಂತ ಹೆಚ್ಚಾಗಿದೆ.
ಕೆಆರ್ಎಸ್ ಜಲಾಶಯದ ಗರಿಷ್ಠ ಸಾಮರ್ಥ್ಯ 124.80 ಅಡಿ ಆಗಿದ್ದು, ಇಂದು 100 ಅಡಿಗಿಂತ ಹೆಚ್ಚು ಸಂಗ್ರಹವಾಗಿದೆ. ಜೂನ್, ಜುಲೈನಲ್ಲಿ ಮುಂಗಾರು ದುರ್ಬಲಗೊಂಡು ಮಳೆ ಕೊರತೆಯಾಗಿ ಆತಂಕ ಉಂಟಾಗಿತ್ತು.
ಆದರೆ, ಕಳೆದ ಮೂರು-ನಾಲ್ಕು ದಿನಗಳಿಂದ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಮತ್ತಷ್ಟು ಚುರುಕುಗೊಂಡಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣದ ಹೆಚ್ಚಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಹಾರಂಗಿ ಜಲಾಶಯ ಭರ್ತಿಯಾಗಿದ್ದು, ನದಿಗೆ ಭಾರಿ ಪ್ರಮಾಣದಲ್ಲಿ ಬಿಡಲಾಗಿದೆ. ಇದರಿಂದ ಕೇವಲ ಮೂರು ದಿನಗಳ ಅಂತರದಲ್ಲಿ ಜಲಾಶಯದ ನೀರಿನ ಮಟ್ಟ 8 ಅಡಿ ಏರಿಕೆ ಕಂಡಿದೆ. 32,048 ಕ್ಯೂಸೆಕ್ ಒಳಹರಿವು ಇದ್ದು, ಇದೇ ರೀತಿ ಮಳೆ ಮುಂದುವರಿದರೆ ಕೆ.ಆರ್.ಎಸ್ ಜಲಾಶಯ ಶೀಘ್ರದಲ್ಲೇ ಭರ್ತಿಯಾಗುವ ನಿರೀಕ್ಷೆ ಇದೆ. ಆದರೆ, ಕೊಡಗು ಸೇರಿದಂತೆ ಜಲಾನಯನ ಭಾಗದಲ್ಲಿ ಮಳೆ ಪ್ರಮಾಣ ಇಳಿಮುಖವಾಗುತ್ತಿದೆ.
ತಮಿಳುನಾಡಿಗೆ ನೀರು ಬಿಡುಗಡೆ ಸೂಚನೆ :
ಇತ್ತೀಚೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಪ್ರತಿನಿತ್ಯ 3,500 ಕ್ಯೂಸೆಕ್ ನೀರನ್ನು 15 ದಿನಗಳವರೆಗೆ ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ಇದನ್ನು ರಾಜ್ಯ ಸರ್ಕಾರುವ ಅನುಷ್ಠಾನ ಮಾಡಲಾಗದು ಎಂದು ವಾದಿಸಿತ್ತು.
ರೈತಪರ ಹಾಗೂ ಕನ್ನಡಪರ ಸಂಘಟನೆಗಳು ತಮಿಳುನಾಡಿಗೆ ನೀರು ಹರಿಸಬಾರದೆಂದು ಪ್ರತಿಭಟನೆ ಮಾಡಿದ್ದವು. ಅದರ ಬೆನ್ನಲ್ಲೇ ಉತ್ತಮ ಮಳೆಯಾಗಿದ್ದು, ಕಬಿನಿ ಜಲಾಶಯದಿಂದ ಸಾಕಷ್ಟು ನೀರು ಹೊರಬಿಡಲಾಗಿದೆ. ಜಲಾಶಯದ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಜಿಲ್ಲೆಯ ರೈತರು ಮುಂಗಾರು ಬೆಳೆಗಳಿಗೆ ನೀರಿನ ಕೊರತೆಯಿಲ್ಲ ಎಂಬ ಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಬಿನಿ ಜಲಾಶಯದ ಒಳಹರಿವು ಹೆಚ್ಚಳ :
ಮೈಸೂರು,ಆ.3- ಜಿಲ್ಲೆಯ ಎಚ್.ಡಿ.ಕೋಟೆ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿರುವುದರಿಂದ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಜಲಾಶಯವು ಗರಿಷ್ಠ ಮಟ್ಟ ತಲುಪಲು ಇನ್ನೂ 1.41 ಅಡಿ ಮಾತ್ರ ಬಾಕಿ ಇದೆ.ಇಂದು ಜಲಾಶಯದ ನೀರಿನ ಮಟ್ಟ 2282.59 ಅಡಿ ದಾಖಲಾಗಿದೆ.
ಜಲಾಶಯದ ಗರಿಷ್ಠ ಮಟ್ಟ 2284.00 ಅಡಿ. ನಿನ್ನೆ ಇದೇ ಸಮಯಕ್ಕೆ ಮಟ್ಟ 2282.25 ಅಡಿ ಇತ್ತು.ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಆಗಿದ್ದು, ಪ್ರಸ್ತುತ 18.60 ಟಿಎಂಸಿ ನೀರು ಸಂಗ್ರಹವಾಗಿದೆ.
ಜೀವಂತ ಸಂಗ್ರಹ 8.79 ಟಿಎಂಸಿ ಇದೆ. ಕಳೆದ ವರ್ಷ ಇದೇ ದಿನ ಸಂಗ್ರಹ 18.39 ಟಿಎಂಸಿ ಹಾಗೂ ಜೀವಂತ ಸಂಗ್ರಹ 8.58 ಟಿಎಂಸಿ ಇತ್ತು.ಒಳಹರಿವು 31,746 ಕ್ಯೂಸೆಕ್ ಇದೆ. ಕಳೆದ ವರ್ಷ 8,934 ಕ್ಯೂಸೆಕ್ ಇತ್ತು. ಹೊರಹರಿವಾಗಿ ಕಬಿನಿ ನದಿಗೆ 27,000 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.
ಎಲ್.ಬಿ.ಸಿ, ಆರ್.ಬಿ.ಸಿ ಕಾಲುವೆಗಳು ಹಾಗೂ ಲಿಫ್್ಟಗಳಿಗೆ ನೀರಿನ ಬಿಡುಗಡೆ ಮಾಡಿಲ್ಲ. ಒಟ್ಟು ಹೊರಹರಿವು 27,000 ಕ್ಯೂಸೆಕ್ ಆಗಿದೆ. ಕಳೆದ ವರ್ಷ 5,000 ಕ್ಯೂಸೆಕ್ ಇತ್ತು.
ಜಲಾನಯನ ಪ್ರದೇಶದಲ್ಲಿ 20 ಎಂಎಂ ಮಳೆಯಾಗಿದೆ. ಆವಿಯಾಗುವಿಕೆಯಿಂದ 10.16 ಮಿಲಿಯನ್ ಘನ ಅಡಿ ನೀರು ನಷ್ಟವಾಗಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
