ಬೆಂಗಳೂರು,ಜೂ.20- ರಾಜ್ಯಸಭೆ ಚುನಾವಣೆಯಲ್ಲಿ ಏಜೆಂಟರಿಗೆ ತೋರಿಸಿ ಮತ ಹಾಕಬೇಕು. ಆದರೆ ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರು ಗುಪ್ತ ಮತದಾನ ಕಾಪಾಡಿಕೊಳ್ಳಬೇಕು ಎಂಬ ದ್ವಂದ್ವ ನೀತಿ ಏಕೆ ಎಂದು ಮಾಜಿ ಸಚಿವ ಸುರೇಶ್‌ಕುಮಾರ್ ಚುನಾವಣಾಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಸುರೇಶ್‌ಕುಮಾರ್, ರಾಜ್ಯಸಭೆಯ ಚುನಾವಣೆಗಳು ಅವಿರೋಧವಾಗಿ ಆಗಿರದಿದ್ದರೆ ರಾಜ್ಯಸಭೆಯ ಮತ್ತು ವಿಧಾನ ಪರಿಷತ್ತಿನ ಚುನಾವಣೆಗಳು ಒಂದೇ ದಿನ ನಡೆಯುತ್ತಿದ್ದವು.
ರಾಜ್ಯಸಭೆಯ ಚುನಾವಣೆಯಲ್ಲಿ ಮತಪತ್ರವನ್ನು ವಿಧಾನಸಭಾ ಸದಸ್ಯರು ಅಲ್ಲಿ ಕುಳಿತಿದ್ದ ತಮ್ಮ ಏಜೆಂಟರಿಗೆ ತೋರಿಸಿ ಹಾಕಬೇಕಿತ್ತು. ಆದರೆ ಅದೇ ವಿಧಾನಸಭಾ ಸದಸ್ಯರು ವಿಧಾನಪರಿಷತ್ತಿಗೆ ಮತ ಚಲಾಯಿಸುವಾಗ ಗೌಪ್ಯತೆ ಕಾಪಾಡಿಕೊಳ್ಳಬೇಕಿತ್ತು. ಈ ಎರಡೂ ಚುನಾವಣೆಗಳಲ್ಲಿ ವಿಧಾನಸಭಾ ಸದಸ್ಯರು ಮತದಾರರಾಗಿ ವರ್ತಿಸಬೇಕಾದ ರೀತಿಯಲ್ಲಿ ಈ ದ್ವಂದ್ವ ನೀತಿ ಏಕೆ? ಈ ರೀತಿಯ ನಿಯಮಾವಳಿಗಳ ಹಿಂದೆ ಇರುವ ಉದ್ದೇಶವೇನು? ದಯವಿಟ್ಟು ಈ ಗೊಂದಲಕ್ಕೆ ಸ್ಪಷ್ಟಿಕರಣ ನೀಡಬೇಕೆಂದು ಕೋರಿದ್ದಾರೆ.
ನಮ್ಮ ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಹಾಗೂ ರಾಜ್ಯದ ವಿಧಾನಪರಿಷತ್‌ಗೆ ಸಂಬಂಧಿಸಿದಂತೆ ವಿಧಾನಸಭೆಯಿಂದ ಏಳು ಸ್ಥಾನಗಳಿಗೆ ಚುನಾವಣೆಗಳು ನಡೆಯಿತು. ರಾಜ್ಯಸಭೆಯ ಚುನಾವಣೆಗಳು ಅವಿರೋಧವಾಗಿ ನಡೆದವು. ವಿಧಾನಪರಿಷತ್ತಿನ ಚುನಾವಣೆಗೆ ಏಳು ಸ್ಥಾನಗಳಿಗೆ 8 ಅಭ್ಯರ್ಥಿಗಳು ಇದ್ದದ್ದರಿಂದ ಚುನಾವಣೆ ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ.
ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ನಡೆದ ಚುನಾವಣೆಗಳಲ್ಲಿ ಮತದಾರರು ವಿಧಾನಸಭಾ ಸದಸ್ಯರೇ ಆಗಿದ್ದರು. ರಾಜ್ಯಸಭೆಗೆ ನಡೆದ ಚುನಾವಣೆಗಳಲ್ಲಿ ವಿಧಾನಸಭೆಯ ಸದಸ್ಯರು ಮತ ಚಲಾಯಿಸುವಾಗ, ತಾವು ಗುರುತು ಮಾಡಿದ ಮತ ಚೀಟಿಯನ್ನು ತೋರಿಸಿ ಹಾಕಬೇಕಿತ್ತು. ಆದರೆ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಗಳಲ್ಲಿ ಇದೇ ವಿಧಾನಸಭಾ ಸದಸ್ಯರಿಗೆ ಗೌಪ್ಯ ಮತದಾನದ ಸೌಲಭ್ಯ ದೊರೆತಿತ್ತು ಎಂದು ಪತ್ರದಲ್ಲಿ ಸುರೇಶ್‌ಕುಮಾರ್ ಉಲ್ಲೇಖಿಸಿದ್ದಾರೆ.
