ಪೇಶಾವರ್,ಜೂ.20- ಪಾಕಿಸ್ತಾನದ ಅಶಾಂತ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸಂಭವಿಸಿದ ಎರಡು ರಸ್ತೆಬದಿ ಸ್ಫೋಟಗಳಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ. ಬಾನು ಜಿಲ್ಲೆಯ ಮಾರ್ಕಾ ಬೇರಾ ಪ್ರದೇಶದಲ್ಲಿ ಈ ಸ್ಫೋಟಗಳು ಸಂಭವಿಸಿವೆ. ಬನ್ನು ಜಿಲ್ಲಾ ಪೊಲೀಸ್ ಅಧಿಕಾರಿ ಯಾಸೀರ್ ಅಫ್ರಿದಿ ಅವರ ಪ್ರಕಾರ, ರಸ್ತೆಬದಿಯಲ್ಲಿ ಅಳವಡಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನಸ್ಫೋಟಗೊಂಡು ಪ್ರಯಾಣಿಕರ ವ್ಯಾನ್‌ಗೆ ತಗುಲಿ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟರು.
ಮೊದಲ ಸ್ಫೋಟದ ಕೆಲವೇ ಕ್ಷಣಗಳ ನಂತರ ಅದೇ ಸ್ಥಳದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದರು. ಎರಡನೇ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಒಂದು ವಾಹನಕ್ಕೂ ಹಾನಿಯಾಗಿದೆ. ಗಾಯಾಳುಗಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಯಾಸಿರ್ ಅಫ್ರಿದಿ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಪ್ರಯಾಣಿಕರ ವ್ಯಾನ್ ಹಾಥಿ ಖೇಲ್ ಗ್ರಾಮದಿಂದ ಬನ್ನು ನಗರಕ್ಕೆ ತೆರಳುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಭದ್ರತಾ ಪಡೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ಪ್ರದೇಶವನ್ನು ಸುತ್ತುವರಿದು, ಸ್ಫೋಟ ನಡೆದ ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸುವ ಕಾರ್ಯ ಆರಂಭಿಸಿವೆ.
