ಬೆಂಗಳೂರು, ಆ.5-ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆ. 8 ಮತ್ತು 9ರಂದು ಲಿಖಿತ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.ಈ ಸಂಬಂಧ ಪರೀಕ್ಷಾ ಸಿದ್ಧತಾ ಸಭೆಯನ್ನು ನಡೆಸಿದ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು, ಪಾರದರ್ಶಕ ಮತ್ತು ನ್ಯಾಯಸಮತ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆ ನಡೆಸಲು ಸೂಚನೆ ನೀಡಿದ್ದು, ಪರೀಕ್ಷೆ ಮುಗಿದ ಕೂಡಲೇ ಓಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕೆಇಎ ವೆಬ್ಸೈಟ್ಗೆ ಅಪ್ ಲೋಡ್ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.
ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ (4,217) ಆಗಸ್ಟ್ 8ರಂದು ಮತ್ತು ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ (14,082) ಆಗಸ್ಟ್ 9ರಂದು ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕ ವೃಂದದವರಿಗೆ ಕಲಬುರಗಿಯ 10 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ ಬೆಂಗಳೂರಿನ 12, ಹುಬ್ಬಳ್ಳಿಯ 7 ಮತ್ತು ಕಲಬುರಗಿಯ 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.
ಅರ್ಜಿ ಸಲ್ಲಿಸಿರುವ ಒಟ್ಟು 18,299 ಅಭ್ಯರ್ಥಿಗಳ ಪೈಕಿ ಬಿ-ಟೆಕ್ ಬಯೋ ಟೆಕ್ನಾಲಜಿ ಅಭ್ಯರ್ಥಿಗಳು 626 ಮಂದಿ ಇದ್ದಾರೆ. ಬಿಇ ಬಯೋ ಟೆಕ್ನಾಲಜಿ ಅಭ್ಯರ್ಥಿಗಳು 362 ಹಾಗೂ ರಾಯ್ ಟೆಕ್ನಾಲಜಿ ಬಿಎಸ್ಸಿ ಕೃಷಿ ಪದವೀಧರರು 221 ಮಂದಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದುವರೆಗೆ 14 ಸಾವಿರ ಮಂದಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡಿದ್ದು, ಉಳಿದ ಅಭ್ಯರ್ಥಿಗಳಿಗೆ ಡೌನ್ಲೋಡ್ ಲಿಂಕ್ ಅನ್ನು ವಾಟ್್ಸಅಪ್ ಮೂಲಕ ಕಳುಹಿಸಲಾಗಿದೆ ಎಂದಿದ್ದಾರೆ.
ನೀಟ್ ನೋಂದಣಿ ಆ.7 ವಿಸ್ತರಣೆ:
ಯುಜಿ ನೀಟ್ ರೋಲ್ ನಂಬರ್ ಜೋಡಣೆ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಆ.7ರವರೆಗೆ ವಿಸ್ತರಿಸಲಾಗಿದೆ. ಜುಲೈ 30ರ ನಂತರ ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿರುವ ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಇಂದು ನಡೆಸಬೇಕಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಆಗಸ್ಟ್ 9ರಂದು ನಡೆಸಲಾಗುತ್ತದೆ.
ಇನ್ನೂ ಕೆಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕೋರಿರುವ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ. ಆ. 9ರಂದು ಬೆಳಿಗ್ಗೆ 11.30 ರಿಂದ 12.30ರವರೆಗೆ ಪರೀಕ್ಷೆ ನಡೆಯಲಿದೆ. ಏಪ್ರಿಲ್ 15 ಮತ್ತು ಮೇ 23ರಂದು ನಡೆದ ಕನ್ನಡ ಪರೀಕ್ಷೆಗೆ ಗೈರುಹಾಜರಾದವರು ಕೂಡ ಹಾಜರಾಗಬಹುದು ಎಂದು ಅವರು ವಿವರಿಸಿದ್ದಾರೆ.
