ರೂರ್ಕಿ, ಸೆ. 20- ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು, 1975ರಲ್ಲಿ ಸಿಕ್ಕಿಂ ಭಾರತದೊಂದಿಗೆ ವಿಲೀನಗೊಳ್ಳುತ್ತಿದ್ದ ನಿರ್ಣಾಯಕ ಸಂದರ್ಭದಲ್ಲಿ ನಡೆದ ಅತ್ಯಂತ ರೋಚಕ ಮತ್ತು ಬೆಚ್ಚಿಬೀಳಿಸುವ ರಹಸ್ಯ ಕಾರ್ಯಾಚರಣೆಯನ್ನು ಬಯಲು ಮಾಡಿದ್ದಾರೆ.
ಗಡಿ ಕಣ್ಗಾವಲಿಗೆ ತೆರಳಿದ್ದ ತಮ್ಮ ಗುಪ್ತಚರ ತಂಡ ಚೀನಾದ ವಶಕ್ಕೆ ಸಿಲುಕಿದಾಗ, ನನ್ನ ಇಡೀ ವೃತ್ತಿಜೀವನ ಇಷ್ಟಕ್ಕೇ ಮುಗಿದುಹೋಯಿತು ಎಂದು ಕಂಗಾಲಾಗಿದ್ದ ಕ್ಷಣವನ್ನು ಅವರು ಐಐಟಿ ರೂರ್ಕಿಯ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ.
1975 ರಲ್ಲಿ ಸಿಕ್ಕಿಂ ಇನ್ನೂ ಅಧಿಕೃತವಾಗಿ ಭಾರತಕ್ಕೆ ಸೇರ್ಪಡೆಯಾಗದ ಸಮಯದಲ್ಲಿ, 20ರ ಹರೆಯದ ಯುವ ಐಪಿಎಸ್ ಅಧಿಕಾರಿಯಾಗಿದ್ದ ಅಜಿತ್ ದೋವಲ್ ಅವರಿಗೆ ಸಿಕ್ಕಿಂ ಭಾಗದ ಗುಪ್ತಚರ ಉಸ್ತುವಾರಿ ವಹಿಸಲಾಗಿತ್ತು. ಚೀನಾ ಸೇನೆಯ ಚಲನವಲನಗಳ ಮೇಲೆ ನಿಗಾ ಇಡುವುದು ಅವರ ಪ್ರಮುಖ ಕಾರ್ಯವಾಗಿತ್ತು.
ಗಡಿಯಲ್ಲಿ ಮಾಹಿತಿ ಕಲೆಹಾಕಲು ಕಳುಹಿಸಲಾಗಿದ್ದ ಗುಪ್ತಚರ ತಂಡ 8 ದಿನಗಳಲ್ಲಿ ಮರಳಬೇಕಿತ್ತು. ಆದರೆ ದಿನಗಳು ಉರುಳಿದರೂ ಅವರಿಂದ ಯಾವುದೇ ಸಂದೇಶ ಬಾರದೆ ಹೋದಾಗ, ತಂಡದ ಸದಸ್ಯರು ಜೀವಂತವಾಗಿದ್ದಾರೋ ಅಥವಾ ಹಿಮಪಾತಕ್ಕೆ ಬಲಿಯಾದರೋ ಎಂಬ ತೀವ್ರ ಆತಂಕ ಕಾಡತೊಡಗಿತು ಎಂದು ದೋವಲ್ ಸ್ಮರಿಸಿದರು.
ಕೆಲವು ದಿನಗಳ ನಂತರ ಪ್ರಧಾನ ಕಚೇರಿಯಿಂದ ಕರೆ ಬಂದಾಗ, ಇಡೀ ತಂಡವನ್ನು ಚೀನಾ ಸೇನೆ ಸೆರೆಹಿಡಿದು ವಿಚಾರಣೆ ನಡೆಸುತ್ತಿರುವುದು ಗೊತ್ತಾಯಿತು. ರಾಜತಾಂತ್ರಿಕ ಮಟ್ಟದ ಮಾತುಕತೆಗಳ ನಂತರ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು. ಕಾರ್ಯಾಚರಣೆಯ ವೈಫಲ್ಯದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಯಿತು.
ಆರಂಭಿಕ ಹಂತದಲ್ಲೇ ತನ್ನ ವೃತ್ತಿಜೀವನ ಅಂತ್ಯವಾಯಿತು ಎಂದು ದೋವಲ್ ಭಾವಿಸಿದ್ದರು. ಆದರೆ ವಿಚಾರಣೆಯ ನಂತರ, ದೋವಲ್ ಕಡೆಯಿಂದ ಯಾವುದೇ ತಪ್ಪಾಗಿಲ್ಲ, ಬದಲಾಗಿ ಪ್ರಧಾನ ಕಚೇರಿಯಿಂದ ನೀಡಲಾಗಿದ್ದ ಗಡಿ ನಕ್ಷೆಗಳಲ್ಲಿನ ದೋಷವೇ ತಂಡ ದಾರಿ ತಪ್ಪಿ ಚೀನಾ ಗಡಿ ದಾಟಲು ಕಾರಣ ಎಂಬುದು ಸಾಬೀತಾಗಿ ಅವರು ದೋಷಮುಕ್ತರಾದರಂತೆ.
1975 ರವರೆಗೆ ಚೋಗ್ಯಾಲ್ ರಾಜಮನೆತನದ ಆಳ್ವಿಕೆಯಲ್ಲಿದ್ದ ಸ್ವತಂತ್ರ ಸಂಸ್ಥಾನವಾಗಿದ್ದ ಸಿಕ್ಕಿಂ ಅನ್ನು ಭಾರತದ 22 ನೇ ರಾಜ್ಯವನ್ನಾಗಿ ವಿಲೀನಗೊಳಿಸುವಲ್ಲಿ ಭಾರತೀಯ ಗುಪ್ತಚರ ಸಂಸ್ಥೆ ರಾ ಮತ್ತು ಗುಪ್ತಚರ ಬ್ಯೂರೋ (ಐಬಿ) ಮಹತ್ವದ ಪಾತ್ರ ವಹಿಸಿದ್ದವು. ಆ ಸಂಕೀರ್ಣ ಪ್ರಕ್ರಿಯೆಯಲ್ಲಿ ಅಜಿತ್ ದೋವಲ್ ಅವರಂತಹ ಯುವ ಅಧಿಕಾರಿಗಳು ನೆಲಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದರು.
ಈ ಸಿಕ್ಕಿಂ ಕಾರ್ಯಾಚರಣೆಯಷ್ಟೇ ಅಲ್ಲದೆ, ಪಾಕಿಸ್ತಾನದಲ್ಲಿ 7 ವರ್ಷಗಳ ಕಾಲ ರಹಸ್ಯ ಗೂಢಚಾರನಾಗಿ ಕಳೆದಿದ್ದು, 1988ರ ಆಪರೇಷನ್ ಬ್ಲ್ಯಾಕ್ ಥಂಡರ್ ವೇಳೆ ಐಎಸ್‌ಐ ಏಜೆಂಟ್ ಸೋಗಿನಲ್ಲಿ ಅಮೃತಸರದ ಸ್ವರ್ಣ ಮಂದಿರ ಪ್ರವೇಶಿಸಿದ್ದು ಹಾಗೂ ಮಿಜೋರಾಂ ಶಾಂತಿ ಒಪ್ಪಂದದಲ್ಲಿ ಬಂಡುಕೋರರ ಮನವೊಲಿಸಿದ್ದು ಇವರ ವೃತ್ತಿಜೀವನದ ಮೈಲಿಗಲ್ಲುಗಳಾಗಿವೆ.
ಎಷ್ಟೇ ದೊಡ್ಡ ಸಂಕಷ್ಟ ಅಥವಾ ಅನಿರೀಕ್ಷಿತ ಹಿನ್ನಡೆ ಎದುರಾದರೂ ಪ್ರಾಮಾಣಿಕತೆ, ವೃತ್ತಿಪರತೆ ಮತ್ತು ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಿದರೆ ಸತ್ಯ ಗೆಲ್ಲುತ್ತದೆ ಮತ್ತು ವೈಫಲ್ಯಗಳು ಮುನ್ನಡೆಯ ಮೆಟ್ಟಿಲಾಗುತ್ತವೆ ಎಂದು ದೋವಲ್ ಐಐಟಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
