ನವದೆಹಲಿ, ಸೆ.20 (ಪಿಟಿಐ): ದೇಶದ ಖ್ಯಾತ ಹಿರಿಯ ಪತ್ರಕರ್ತೆ ಪಾಯಲ್ ಮೆಹ್ತಾ ಅವರು ಇಂದು ಮುಂಜಾನೆ ಮುಂಬೈನಲ್ಲಿ ನಿಧನರಾದರು. ಮೆಹ್ತಾ (46) ಅವರು ಮುಂಬೈಗೆ ಭೇಟಿ ನೀಡಿದ್ದ ವೇಳೆ ಬೆಳಗಿನ ಜಾವ ಅಸ್ವಸ್ಥಗೊಂಡಿದ್ದರು.
ಅವರನ್ನು ರಾತ್ರಿ 2 ಗಂಟೆ ಸುಮಾರಿಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಯಾವುದೇ ಚಿಕಿತ್ಸೆ ನೀಡುವ ಮೊದಲೇ ಅವರ ನಾಡಿಮಿಡಿತ ನಿಂತಿತು ಎಂದು ಹಿರಿಯ ಪತ್ರಕರ್ತೆ ಶೀಲಾ ಭಟ್ ಅವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಮೆಹ್ತಾ ಅವರು ಸಂಸತ್ತು, ಸರ್ಕಾರ ಮತ್ತು ಬಿಜೆಪಿಗೆ ಸಂಬಂಧಿಸಿದ ವಿಷಯಗಳನ್ನು ವರದಿ ಮಾಡುವ ಮೂಲಕ ಗುರುತಿಸಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸೇರಿದಂತೆ ಹಲವು ಕೇಂದ್ರ ಸಚಿವರು ಮೆಹ್ತಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
‘ಪಾಯಲ್ ಮೆಹ್ತಾ ಅವರು ಶ್ರಮಶೀಲ ಪತ್ರಕರ್ತೆಯಾಗಿದ್ದರು. ನೆಲಮಟ್ಟದ ವಾಸ್ತವಾಂಶಗಳೊಂದಿಗೆ ದೃಢ ಸಂಪರ್ಕ ಹೊಂದಿದ್ದ ಅವರು, ರಾಷ್ಟ್ರೀಯ ಸಮಸ್ಯೆಗಳ ಕುರಿತ ಆಳವಾದ ತಿಳುವಳಿಕೆಯನ್ನು ತಮ್ಮ ವರದಿಗಾರಿಕೆಯಲ್ಲಿ ಅಳವಡಿಸಿಕೊಂಡಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಪೋಸ್ಟ್ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
