ಟೆಹ್ರಾನ್, ಸೆ.20: ಸೇನಾ ಸಂಘರ್ಷವನ್ನು ಅಂತ್ಯಗೊಳಿಸಿ ರಾಜತಾಂತ್ರಿಕ ಮಾತುಕತೆ ಪುನರಾರಂಭಿಸಲು ಇರಾನ್ ಕತಾರ್ ಮಧ್ಯಸ್ಥಿಕೆಯ ಮೂಲಕ ಅಮೆರಿಕಕ್ಕೆ ಏಳು ಪ್ರಮುಖ ಷರತ್ತುಗಳನ್ನು ವಿಧಿಸಿದೆ.
ಅಮೆರಿಕ ಈ ಷರತ್ತುಗಳನ್ನು ಒಪ್ಪಿಕೊಳ್ಳದಿದ್ದರೆ ಇರಾನ್ ನಿರ್ಣಾಯಕ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಮೊಹ್ಸಿನ್ ರೆಝಾಯಿ ಎಚ್ಚರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿಕ್ರಿಯೆಗಾಗಿ ಟೆಹ್ರಾನ್ ಕಾಯುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಏನು ಷರತ್ತುಗಳು?
ಇರಾನ್ ವಿಧಿಸಿರುವ ಪ್ರಮುಖ ಷರತ್ತುಗಳಲ್ಲಿ ಎಲ್ಲಾ ರಂಗಗಳಲ್ಲಿನ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸುವುದು, ಸ್ಥಗಿತಗೊಳಿಸಲಾಗಿರುವ ಇರಾನ್‌ನ ಶತಕೋಟಿ ಡಾಲರ್ ಆರ್ಥಿಕ ನಿಧಿಯನ್ನು ಮುಕ್ತಗೊಳಿಸುವುದು ಹಾಗೂ ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕ ಹೇರಿರುವ ನೌಕಾ ದಿಗ್ಬಂಧನವನ್ನು ರದ್ದುಗೊಳಿಸುವುದು ಸೇರಿವೆ.
ಅಮೆರಿಕ ಮತ್ತೊಮ್ಮೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿರುವ ರೆಝಾಯಿ, ಟೆಹ್ರಾನ್ ತನ್ನ ರಕ್ಷಣಾ ತಂತ್ರಗಳನ್ನು ಬಲಪಡಿಸಿಕೊಂಡಿದೆ ಎಂದಿದ್ದಾರೆ. ಅಮೆರಿಕದ ವಿಮಾನವಾಹಕ ಯುದ್ಧನೌಕೆಗಳನ್ನು ಗುರಿಯಾಗಿಸಬಲ್ಲ ಬಹು-ವಾರ್‌ಹೆಡ್ ಹಡಗು ವಿರೋಧಿ ಕ್ಷಿಪಣಿಯನ್ನು ಇತ್ತೀಚೆಗಷ್ಟೇ ಪರೀಕ್ಷಿಸಲಾಗಿದೆ. ಯುದ್ಧ ಮುಂದುವರಿದರೆ ಅಮೆರಿಕದ ಸೇನಾ ನೆಲೆಗಳಷ್ಟೇ ಅಲ್ಲದೆ ಅಲ್ಲಿನ ಕಂಪನಿಗಳೂ ಗುರಿಯಾಗಲಿವೆ ಎಂದು ಅವರು ಎಚ್ಚರಿಸಿದ್ದಾರೆ.
ಪರಮಾಣು ನೀತಿ
ಇರಾನ್ ಪರಮಾಣು ಪ್ರಸರಣ ನಿರೋಧಕ ಒಪ್ಪಂದದಿಂದ (NPT) ತಕ್ಷಣ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿಲ್ಲ. ಇರಾನ್‌ನ ಸರ್ವೋಚ್ಚ ನಾಯಕನ ಧಾರ್ಮಿಕ ಫತ್ವಾದಂತೆ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆ ನಿಷೇಧಿತವಾಗಿಯೇ ಉಳಿದಿದೆ. ಆದರೆ ಅಮೆರಿಕದ ಪ್ರಚೋದನೆ ಮುಂದುವರಿದರೆ ನಿಲುವು ಬದಲಾಗಬಹುದು ಎಂದು ಇರಾನ್ ಸ್ಪಷ್ಟಪಡಿಸಿದೆ.
ವಿಶ್ವಸಂಸ್ಥೆ ಸಭೆಗೆ ಇರಾನ್ ನಿಯೋಗ
ಈ ಉದ್ವಿಗ್ನತೆಯ ನಡುವೆಯೂ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಲು ಇರಾನ್ ನಿಯೋಗಕ್ಕೆ ಅಮೆರಿಕದ ವಿದೇಶಾಂಗ ಇಲಾಖೆಯು ವೀಸಾ ಮಂಜೂರು ಮಾಡಿದೆ.
ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಸ್ಥಿರತೆಗಾಗಿ ಇರಾನ್ ಮತ್ತು ಒಮಾನ್ ಸಿದ್ಧಪಡಿಸಿರುವ ಪ್ರಾದೇಶಿಕ ಭದ್ರತಾ ಒಪ್ಪಂದದ ಚೌಕಟ್ಟು ಅಂತಿಮ ಹಂತದಲ್ಲಿದೆ.
ಇನ್ನೊಂದೆಡೆ, ಬಾಬ್ ಅಲ್-ಮಂಡೇಬ್ ಜಲಸಂಧಿಯ ಮಾರ್ಗವು ಯೆಮೆನ್‌ನ ಹೌತಿ ಬಂಡುಕೋರರಿಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ.
ಮಧ್ಯಸ್ಥಿಕೆಯಲ್ಲಿ ಕತಾರ್, ಪಾಕಿಸ್ತಾನ
ಅಮೆರಿಕ ಮತ್ತು ಇರಾನ್ ನಡುವೆ ನೇರ ರಾಜತಾಂತ್ರಿಕ ಸಂಬಂಧವಿಲ್ಲದ ಹಿನ್ನೆಲೆಯಲ್ಲಿ, ಕತಾರ್ ಹಾಗೂ ಪಾಕಿಸ್ತಾನಗಳು ಸಂಘರ್ಷ ಶಮನಕ್ಕಾಗಿ ದೂತರಾಗಿ ಕಾರ್ಯನಿರ್ವಹಿಸುತ್ತಿವೆ.
