Homeರಾಜ್ಯಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಆಧುನಿಕ ತಂತ್ರಜ್ಞಾನ ಬಳಕೆ : ಸಚಿವ ಪ್ರಿಯಾಂಕ್‌ ಖರ್ಗೆ

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಆಧುನಿಕ ತಂತ್ರಜ್ಞಾನ ಬಳಕೆ : ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು, ಜೂ.20- ಗ್ಯಾರಂಟಿ ಯೋಜನೆಗಳಷ್ಟೆ ಅಲ್ಲಾ ಸರ್ಕಾರದ ಎಲ್ಲಾ ಸೌಲಭ್ಯಗಳು ಅರ್ಹರಿಗೆ ಸಿಗಬೇಕು ಎಂಬ ಕಾರಣಕ್ಕೆ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ, ತಂತ್ರಜ್ಞಾನ ಹಾಗೂ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯಲ್ಲಿ ತಪ್ಪಿಲ್ಲ. ಮೇಲ್ನೋಟಕ್ಕೆ ಕೆಲ ಯೋಜನೆಗಳ ಬಗ್ಗೆ ಮಾತ್ರ ಹೆಚ್ಚು ಚರ್ಚೆಯಾಗುತ್ತಿದೆ. ಆದರೆ ಸರ್ಕಾರದ ಎಲ್ಲಾ ಯೋಜನೆಗಳಲ್ಲೂ ಅನರ್ಹರನ್ನು ಗುರುತಿಸಿ ತೆಗೆದು ಹಾಕಲು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಇ-ಆಡಳಿತ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳಲ್ಲಿ ಒಬ್ಬ ಫಲಾನುಭವಿಯ ನಾಲ್ಕೈದು ಖಾತೆಗಳಿಗೆ ಸೌಲಭ್ಯಗಳು ತಲುಪುತ್ತಿವೆ. ಮೃತಪಟ್ಟವರ ಖಾತೆಗಳಿಗೂ ಹಣ ಸಂದಾಯವಾಗಿದೆ. ಹೊರ ರಾಜ್ಯದವರ ಹೆಸರಿಗೆ ಸೌಲಭ್ಯಗಳು ಹೋಗಿವೆ. ಈ ಎಲ್ಲಾ ಲೋಪಗಳನ್ನು ಸರಿಪಡಿಸಿ ಯೋಜನೆಗಳನ್ನು ಪರಿಷ್ಕರಣೆ ಮಾಡಲಾಗುವುದು ಎಂದರು. ಮುಖ್ಯಮಂತ್ರಿಯವರು ಜನಸ್ಪಂದನ ಇಲಾಖೆಯ ಮೂಲಕ ಆಧುನಿಕ ತಂತ್ರಜ್ಞಾನದಲ್ಲಿ ಜನರ ಮನೆ ಬಾಗಿಲಿಗೆ ಆಡಳಿತ ತಲುಪಿಸಲಾಗುತ್ತದೆ. ತಾಲ್ಲೂಕು ಮಟ್ಟದಲ್ಲೇ ಜನರ ಸಮಸ್ಯೆ ಪರಿಹಾರಬೇಕು ಎಂಬ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿಯವರ ಕಚೇರಿ ಹಾಗೂ ಇ-ಆಡಳಿತ ಜಂಟಿಯಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಬಿಡದಿ ಉಪನಗರ ನಿರ್ಮಾಣ ಯೋಜನೆಯಲ್ಲಿ ಜೆಡಿಎಸ್‌‍-ಬಿಜೆಪಿ ರಾಜಕೀಯ ಮಾಡುತ್ತಿವೆ. ಏಳುವರೆ ಸಾವಿರ ಎಕರೆಯಲ್ಲಿ ಈಗಾಗಲೇ ಆರು ಸಾವಿರ ಎಕರೆಯ ಭೂ ಮಾಲೀಕರು ಭೂಸ್ವಾಧೀನಕ್ಕೆ ತಮ್ಮ ಸಹಮತ ವ್ಯಕ್ತ ಪಡಿಸಿದ್ದಾರೆ. 1,340 ಎಕರೆಯಷ್ಟು ಮಾತ್ರ ಬಾಕಿ ಇದೆ. ಸರ್ಕಾರ ದಬ್ಬಾಳಿಕೆ ಮಾಡಿ ಯಾರಿಂದಲೂ ಭೂಮಿ ಕಸಿದುಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ದೇವನಹಳ್ಳಿಯ ಬಳಿಯ ಭೂ ಸ್ವಾಧೀನವಾದಾಗ ಪ್ರತಿಭಟನೆಗಳಾದವು. ಸರ್ಕಾರ ರೈತರ ಅಭಿಪ್ರಾಯದಂತೆ ಭೂ ಸ್ವಾಧೀನವನ್ನು ಕೈ ಬಿಡುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿತ್ತು. ಈಗ ಅಲ್ಲಿ ವಿಶೇಷ ಕೃಷಿ ವಲಯವನ್ನು ಮುಂದುವರೆಸಬೇಕೋ ಬೇಡವೋ ಎಂಬ ಚರ್ಚೆ ನಡೆಯುತ್ತಿದೆ. ಕೆಲವು ರೈತರು ಕೃಷಿ ವಲಯವನ್ನೇ ಮುಂದುವರೆಸಿ ಎಂದಿದ್ದರು. ಇನ್ನೂ ಕೆಲವು ರೈತರು ಮುಂದಿನ ಪೀಳಿಗೆಗೆ ಕೈಗಾರಿಕೆ ಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಅವರ ಮನವಿ ಆಧರಿಸಿ ಇಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು, ಜನಾಭಿಪ್ರಾಯದಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಬಿಡದಿ ಬಳಿ ಪ್ರತಿಭಟನೆ ನಡೆಸುವ ಬಿಜೆಪಿ-ಜೆಡಿಎಸ್‌‍ ನವರು ಕೇಂದ್ರ ಸರ್ಕಾರ 100 ಸಾರ್ಟ್‌ ಸಿಟಿಗಳನ್ನು ಹೇಗೆ ಮಾಡಲು ಮುಂದಾಗಿದೆ ಎಂದು ಹೇಳುತ್ತಾರೆಯೇ ? ರಾಜಸ್ತಾನದಲ್ಲಿ ಅರಾವಳಿಯನ್ನೇ ಅದಾನಿಗೆ ಮಾರಲು ಮುಂದಾಗಿದ್ದರು. ಅಂಡಾಮಾನ್‌ ನಿಕೋಬಾರ್‌ ನ ವಿಚಾರವನ್ನು ಬಿಡದಿಗೆ ಹೋಲಿಸುತ್ತಿದ್ದಾರೆ. ಜೀವ ವೈವಿಧ್ಯತೆ ಹೊಂದಿದ್ದ ಅಂಡೋಮಾನ್‌-ನಿಕೋಬಾರ್‌ ಅನ್ನು ಸಂಪೂರ್ಣ ನಾಶ ಮಾಡಲು ಹೊರಟ್ಟಿದ್ದು ಯಾರು ಎಂದು ಪ್ರಿಯಾಂಕ್‌ ಪ್ರಶ್ನಿಸಿದರು.

ನಗರೀಕರಣ ವೇಗವಾಗಿ ಬೆಳೆಯುತ್ತಿದೆ. ಪರಿಸರ ಹಾಗೂ ನಗರೀಕರಣ ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳಲು ತಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಜೆಡಿಎಸ್‌‍-ಬಿಜೆಪಿ ನಾಯಕರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಸರಿ ಇಲ್ಲ ಎಂದು ಆ ಪಕ್ಷಗಳ ಶಾಸಕರೆ ಬೇಸತ್ತು ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಗಳಿಗೆ ಅಡ್ಡ ಮತದಾನ ಮಾಡಿದ್ದಾರೆ. ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ ಹಾಕದೆ ಇದ್ದಿದ್ದರೆ ಬಿಜೆಪಿ ಅಭ್ಯರ್ಥಿಯೇ ಸೋಲು ಕಾಣುತ್ತಿದ್ದರು ಎಂದರು.

ಹಿಂದೆ ಅಸ್ಸಾಂ, ಜಾರ್ಖಾಂಡ್‌, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಹೇಗೆ ಅಧಿಕಾರ ಹಿಡಿದಿದೆ ಎಂದು ನಮಗೆ ಗೊತ್ತಿದೆ. ಕರ್ನಾಟಕದಲ್ಲಿ ಆಪರೇಷನ್‌ ಕಮಲದ ಮೂಲಕ ದೇಶಕ್ಕೆ ಹೊಸ ರಾಜಕೀಯ ಪಿಡುಗನ್ನು ಪರಿಚಯಿಸಿದವರಿಂದ ಕಾಂಗ್ರೆಸ್‌‍ ನವರು ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.

RELATED ARTICLES

Latest News