ಬೆಂಗಳೂರು, ಜೂ.23- ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸುವಂತೆ ರಾಷ್ಟ್ರೀಯ ನಾಯಕರಿಗೆ ರಾಜ್ಯ ಬಿಜೆಪಿ ಘಟಕ ಮನವಿ ಮಾಡಿದೆ.
ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರನ್ನು ಭೇಟಿ ಮಾಡಿದ ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಉಸ್ತುವಾರಿ ಡಾ.ಮೋಹನ್ ಅಗರ್ ವಾಲ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಿಧಾನಮಂಡಲದ ಉಭಯ ಸದನಗಳ ಮುಖ್ಯ ಸಚೇತಕರಾದ ದೊಡ್ಡನಗೌಡ ಪಾಟೀಲ್ ಹಾಗೂ ಎನ್.ರವಿಕುಮಾರ್ ಅವರುಗಳು ಭೇಟಿ ಮಾಡಿ ರಾಜ್ಯದ ವಸ್ತು ಸ್ಥಿತಿಯನ್ನು ವಿವರಿಸಿದ್ದಾರೆ.
ಕಳೆದ ಗುರುವಾರ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಏಳು ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿಯಿಂದ ಸುಮಾರು 4 ರಿಂದ 5 ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ ಎಂದು ರಾಷ್ಟ್ರೀಯ ಅಧ್ಯಕ್ಷರಿಗೆ ತಮದೇ ಮೂಲದಿಂದ ಸಂಗ್ರಹಿಸಿದ ಪ್ರಾಥಮಿಕ ವರದಿಯನ್ನು ನೀಡಿದ್ದಾರೆ.
ಈ ಪ್ರಕರಣ ಕುರಿತು ವಿಧಾನ ಪರಿಷತ್ ಸದಸ್ಯರಾದ ಸಿ.ಟಿ .ರವಿ ನೇತೃತ್ವದಲ್ಲಿ ಮೂವರ ತಂಡವನ್ನು ರಚಿಸಿದೆ.ಸಮಿತಿಯೂ ಇದೇ 25ರಂದು ವರದಿ ನೀಡಲಿದ್ದು ಕೆಲವು ಅನುಮಾನಾಸ್ಪದ ಶಾಸಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಘಟಕ ಒತ್ತಾಯ ಮಾಡಿದೆ.
ಇದು ಪಕ್ಷದ ಶಿಸ್ತಿನ ಉಲ್ಲಂಘನೆ ಮತ್ತು ನಂಬಿಕೆ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಅಡ್ಡ ಮತದಾನದ ಸಂಪೂರ್ಣ ವರದಿಯನ್ನು ವರಿಷ್ಠರಿಗೆ ರವಾನಿಸಿದೆ. ರಾಜ್ಯದ ನಾಯಕರು ದೆಹಲಿಯ ರಾಷ್ಟ್ರೀಯ ನಾಯಕರಿಗೆ ಸಂಬಂಧಪಟ್ಟ ಶಾಸಕರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕೇವಲ ಅಮಾನತು ಅಥವಾ ನೋಟಿಸ್ ನೀಡಿದರೆ ಸಾಲದು, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅವರನ್ನು ಉಚ್ಛಾಟಿಸಬೇಕು ಎಂದು ರಾಜ್ಯ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಅಡ್ಡ ಮತದಾನ ಮಾಡಿದವರಿಗೆ ತಕ್ಕ ಪಾಠ ಕಲಿಸದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದ ಶಿಸ್ತಿಗೆ ಧಕ್ಕೆ ಉಂಟಾಗಲಿದೆ ಎಂಬುದು ನಾಯಕರ ವಾದವಾಗಿದೆ.
ಪಕ್ಷದ ವೇದಿಕೆಯಲ್ಲಿ ಅಥವಾ ಸಭೆಗಳಲ್ಲಿ ಚರ್ಚಿಸದೆ, ನೇರವಾಗಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿರುದ್ಧವಾಗಿ ನಡೆದುಕೊಂಡಿರುವುದು ಶಿಸ್ತು ಉಲ್ಲಂಘನೆ ಎಂದು ರಾಜ್ಯ ನಾಯಕತ್ವ ಪರಿಗಣಿಸಿದೆ.
ಈ ವಿಚಾರವು ಈಗ ರಾಷ್ಟ್ರೀಯ ನಾಯಕರ ಅಂಗಳದಲ್ಲಿದೆ. ಅಡ್ಡ ಮತದಾನ ಮಾಡಿದ ಶಾಸಕರಿಗೆ ನೋಟಿಸ್ ಜಾರಿ ಮಾಡುವುದೇ ಅಥವಾ ತಕ್ಷಣದ ಉಚ್ಚಾಟನೆ ಕೈಗೊಳ್ಳುವುದೇ ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ.
ಪಕ್ಷದ ವರಿಷ್ಠರು ಈ ವಿಷಯದಲ್ಲಿ ಜೀರೋ ಟಾಲರೆನ್ಸ್ ನೀತಿಯನ್ನು ಅನುಸರಿಸಲು ಮುಂದಾಗಿರುವುದರಿಂದ, ಅಡ್ಡ ಮತದಾನ ಮಾಡಿದ ಶಾಸಕರಲ್ಲಿ ಈಗ ಡವ ಡವ ಶುರುವಾಗಿದೆ.
ದೆಹಲಿ ನಾಯಕರು ಯಾವ ಕ್ಷಣದಲ್ಲಿ ಏನಾದರೂ ಕಠಿಣ ನಿರ್ಧಾರ ಕೈಗೊಳ್ಳಬಹುದು ಎಂಬ ಆತಂಕದಲ್ಲಿ ಆ ಶಾಸಕರಿದ್ದಾರೆ. ಪಕ್ಷದ ತೀರ್ಮಾನವು ಅಂತಿಮವಾಗಿದ್ದು, ಅಡ್ಡ ಮತದಾನ ಮಾಡಿದ ಶಾಸಕರು ತಮ ಶಾಸಕ ಸ್ಥಾನಕ್ಕೆ ಅಥವಾ ಮುಂದಿನ ರಾಜಕೀಯ ಭವಿಷ್ಯಕ್ಕೆ ಕುತ್ತು ಬರುವ ಸಾಧ್ಯತೆಯನ್ನು ಎದುರಿಸುತ್ತಿದ್ದಾರೆ.
ರಾಜ್ಯ ಘಟಕವು ಈ ಮೂಲಕ ಭವಿಷ್ಯದಲ್ಲಿ ನಡೆಯುವ ಚುನಾವಣೆಗಳಲ್ಲಿ ಯಾವುದೇ ರೀತಿಯ ಒಳಜಗಳ ಅಥವಾ ಪಕ್ಷ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸಲು ಪ್ರಯತ್ನಿಸುತ್ತಿದೆ. ಈ ಪ್ರಕರಣದಲ್ಲಿ ಮುಂದೆ ರಾಷ್ಟ್ರೀಯ ನಾಯಕತ್ವವು ಕೈಗೊಳ್ಳುವ ನಿರ್ಧಾರವು ರಾಜ್ಯ ಬಿಜೆಪಿಯ ಆಂತರಿಕ ಸಮೀಕರಣದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.
ಈ ಪ್ರಕರಣವು ಇದೀಗ ಹೈಕಮಾಂಡ್ ಅಂಗಳದಲ್ಲಿದೆ. ಬಿಜೆಪಿ ರಾಷ್ಟ್ರೀಯ ನಾಯಕರು ಶಾಸಕರಿಗೆ ನೋಟಿಸ್ ನೀಡುತ್ತಾರೋ ಅಥವಾ ನೇರವಾಗಿ ಉಚ್ಛಾಟನೆಯಂತಹ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ರಾಜ್ಯ ರಾಜಕೀಯದಲ್ಲಿ ಈ ಘಟನೆಯು ಶಿಸ್ತು ಮತ್ತು ಪಕ್ಷ ನಿಷ್ಠೆಯ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
