Homeರಾಜ್ಯರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ : ದರ್ಶನ್‌ ವಿರುದ್ಧ ಆರೋಪಿ ಪ್ರದೋಷ್‌ ಗಂಭೀರ ಆರೋಪ

ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ : ದರ್ಶನ್‌ ವಿರುದ್ಧ ಆರೋಪಿ ಪ್ರದೋಷ್‌ ಗಂಭೀರ ಆರೋಪ

Another twist in Renukaswamy murder case

ಬೆಂಗಳೂರು,ಆ.10- ರೇಣುಕಸ್ವಾಮಿ ಕೊಲೆ ಪ್ರಕರಣ ಇದೀಗ ಮತ್ತೊಂದು ಮಹತ್ವದ ಕಾನೂನು ತಿರುವು ಪಡೆದುಕೊಂಡಿದೆ. ಪ್ರಕರಣದ 14ನೇ ಆರೋಪಿಯಾದ ಪ್ರದೋಷ್‌, ತಾನು ಮಾಫಿ ಸಾಕ್ಷಿದಾರನಾಗಲು (ಅನುಮೋದಕ – ಅಪ್ರೂವರ್‌) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ರೇಣುಕಸ್ವಾಮಿ ಮೇಲೆ ನಡೆದ ಭೀಕರ ಹಲ್ಲೆ ಹಾಗೂ ಕೊಲೆಯ ಬಳಿಕ ಕೃತ್ಯವನ್ನು ಮುಚ್ಚಿಹಾಕಲು ನಡೆದ ಯತ್ನಗಳ ಕುರಿತು ಬೆಚ್ಚಿಬೀಳಿಸುವ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಪ್ರದೋಷ್‌ ಸಲ್ಲಿಸಿರುವ ಅರ್ಜಿಯ ಪ್ರಕಾರ, ನಟ ದರ್ಶನ್‌ ಹಾಗೂ ಇತರರು ರೇಣುಕಸ್ವಾಮಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಪವಿತ್ರಾ ಗೌಡಗೆ ಕಳುಹಿಸಲಾಗಿದೆ ಎನ್ನಲಾದ ವಾಟ್ಸಾಪ್‌ ಸಂದೇಶಗಳ ವಿಚಾರವಾಗಿ ರೇಣುಕಸ್ವಾಮಿಯನ್ನು ನಿಂದಿಸಿದ ದರ್ಶನ್‌, ಮೊದಲು ಹಲ್ಲೆ ನಡೆಸಿದ್ದಾರೆ. ಈ ವೇಳೆ ರೇಣುಕಸ್ವಾಮಿ ತಲೆಯಿಂದ ರಕ್ತಸುರಿದಿದೆ. ಪವಿತ್ರಾ ಗೌಡ ಕೂಡ ತಮ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ರೇಣುಕಸ್ವಾಮಿಯನ್ನು ಒಳಉಡುಪಿನವರೆಗೆ ವಿವಸ್ತ್ರಗೊಳಿಸಲಾಗಿದ್ದು, ನಂದೀಶ್‌, ಪವನ್‌ ಮತ್ತು ನಾಗರಾಜ್‌ ಮರದ ಕೋಲು ಹಾಗೂ ನೈಲಾನ್‌ ಹಗ್ಗದಿಂದ ಹಲ್ಲೆ ನಡೆಸಿದ್ದಾರೆ.

ದರ್ಶನ್‌ ಕ್ರೌರ್ಯ:
ನೈಲಾನ್‌ ಹಗ್ಗದಿಂದ ರೇಣುಕಸ್ವಾಮಿಯ ಕೈ ಹಾಗೂ ಬೆನ್ನಿಗೆ ದರ್ಶನ್‌ ಹಲವು ಬಾರಿ ಹೊಡೆದಿದ್ದಾರೆ. ಅಲ್ಲದೆ ಖಾಸಗಿ ಅಂಗಗಳಿಗೆ ಪದೇ ಪದೇ ಒದ್ದಿದ್ದಾರೆ. ಆಹಾರ ಮತ್ತು ನೀರು ನೀಡಿದ ಬಳಿಕವೂ ಕುತ್ತಿಗೆ ಹಾಗೂ ಎದೆಗೆ ಒದ್ದಿದ್ದರಿಂದ ರೇಣುಕಸ್ವಾಮಿ ಕುಸಿದು ಬಿದ್ದಿದ್ದಾರೆ. ದರ್ಶನ್‌ ತಮ ಎರಡೂ ಕಾಲುಗಳನ್ನು ರೇಣುಕಸ್ವಾಮಿ ಎದೆಯ ಮೇಲೆ ಇಟ್ಟು ಒತ್ತಿದ್ದಾರೆ ಎಂದು ಪ್ರದೋಷ್‌ ಆರೋಪಿಸಿದ್ದಾರೆ. ಹಲ್ಲೆ ಮಾರಕವಾಗಬಹುದು ಎಂದು ತಾನು ಹಲವು ಬಾರಿ ತಡೆದಿದ್ದಾಗಿಯೂ ಅವರು ತಿಳಿಸಿದ್ದಾರೆ.

ಕೃತ್ಯ ಮುಚ್ಚಿಹಾಕಲು ಸಂಚು :
ಪರಿಸ್ಥಿತಿ ಕೈಮೀರಿದ ಬಳಿಕ, ತಕ್ಕ ಪರಿಣಾಮಗಳನ್ನು ಎದುರಿಸಲು ಸಹಾಯ ಮಾಡದಿದ್ದರೆ ತಾನು ಬಂದೂಕಿನಿಂದ ಆತಹತ್ಯೆ ಮಾಡಿಕೊಳ್ಳುವುದಾಗಿ ದರ್ಶನ್‌ ಬೆದರಿಕೆ ಹಾಕಿದ್ದರು ಎಂದು ಪ್ರದೋಷ್‌ ಅರ್ಜಿಯಲ್ಲಿ ತಿಳಿಸಿದ್ದಾರೆ.

ತನಿಖೆಯನ್ನು ದಾರಿ ತಪ್ಪಿಸಲು, ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಚಿತ್ರದುರ್ಗದಿಂದ ಕರೆತರಲಾದ ರೇಣುಕಸ್ವಾಮಿಯನ್ನು ಜಗಳದ ಸಮಯದಲ್ಲಿ ಕೊಲೆ ಮಾಡಲಾಗಿದೆ ಎಂದು ಬಿಂಬಿಸಲು ಪರ್ಯಾಯ ಕಥೆಯನ್ನು ಸೃಷ್ಟಿಸಲು ಗುಂಪು ಚರ್ಚಿಸಿದೆ.ರಾಘವೇಂದ್ರ, ಕಪ್ಪೆ ಅಲಿಯಾಸ್‌‍ ಕಾರ್ತಿಕ್‌ ಮತ್ತು ನಿಖಿಲ್‌ ಶರಣಾಗಲು ಒಪ್ಪಿಕೊಂಡಿದ್ದು, ದರ್ಶನ್‌ ನಗದು ಚೀಲದಿಂದ ನಾಗರಾಜ್‌ಗೆ 5 ಲಕ್ಷ ರೂ. ಮತ್ತು ವಿನಯ್‌ಗೆ 10 ಲಕ್ಷ ರೂ.ಗಳನ್ನು ನೀಡಿದ್ದಾರೆ. ಸುಮನಹಳ್ಳಿ ಬಳಿಯ ಚರಂಡಿಯಲ್ಲಿ ಶವವನ್ನು ಎಸೆಯಲು ಬಿಳಿ ಸ್ಕಾರ್ಪಿಯೋ ವಾಹನ ಬಳಸಲಾಗಿದ್ದು, ಪೊಲೀಸರ ಕಣ್ಣು ತಪ್ಪಿಸಲು ವಾಹನದ ನಂಬರ್‌ ಪ್ಲೇಟ್‌ಗಳನ್ನು ತೆಗೆದುಹಾಕಲಾಗಿತ್ತು.

ಕ್ಷಮಾದಾನ ಮತ್ತು ರಕ್ಷಣೆಗಾಗಿ ಮನವಿ :
ಕೊಲೆ ಮತ್ತು ಇತರ ಆರೋಪಿಗಳ ಪಾತ್ರದ ಬಗ್ಗೆ ತನಗೆ ತಿಳಿದಿರುವ ಎಲ್ಲಾ ಸತ್ಯಗಳನ್ನು ಬಹಿರಂಗಪಡಿಸುವುದಾಗಿ ತಿಳಿಸಿರುವ ಪ್ರದೋಷ್‌, ಕಾನೂನುಬದ್ಧ ಕ್ಷಮಾದಾನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ ಮೊದಲ ಆರೋಪಿ ಇವರಾಗಿದ್ದಾರೆ. ಇವರ ಜತೆಗೆ ಆರೋಪಿಗಳಾದ ರವಿಶಂಕರ್‌ ಮತ್ತು ವಿನಯ್‌ ಕೂಡ ಅನುಮೋದಕ ಸ್ಥಾನಮಾನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಜೈಲಿನಲ್ಲಿ ಸಹ-ಆರೋಪಿಗಳಿಂದ ಜೀವ ಬೆದರಿಕೆ ಅಥವಾ ಒತ್ತಡ ಎದುರಾಗಬಹುದು ಎಂಬ ಕಾರಣಕ್ಕೆ, ತನ್ನನ್ನು ಪ್ರತ್ಯೇಕ ಸೆಲ್‌ನಲ್ಲಿಡಬೇಕು ಮತ್ತು ವಿಚಾರಣೆ ವೇಳೆ ಪ್ರತ್ಯೇಕವಾಗಿ ಹಾಜರುಪಡಿಸಬೇಕು ಎಂದು ಕೋರಿ ಪ್ರದೋಷ್‌ ಪ್ರತ್ಯೇಕ ರಕ್ಷಣಾ ಅರ್ಜಿಯನ್ನೂ ಸಲ್ಲಿಸಿದ್ದಾರೆ.ಪ್ರಾಸಿಕ್ಯೂಷನ್‌ ಪರ ವಕೀಲರು ಪ್ರದೋಷ್‌ ಅವರ ಅನುಮೋದಕ ಸ್ಥಾನಮಾನದ ಅರ್ಜಿಯನ್ನು ಬೆಂಬಲಿಸಿದ್ದು, ಎಲ್ಲಾ ಕಡೆಯ ವಾದಗಳನ್ನು ಆಲಿಸಿರುವ 59ನೇ ಸೆಷನ್‌್ಸ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದೆ. ನ್ಯಾಯಾಲಯದ ಅಂತಿಮ ನಿರ್ಧಾರವು ಈ ಹೈಪೊಫೈಲ್‌ ಕೊಲೆ ಪ್ರಕರಣದ ತೀರ್ಪಿನ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿದೆ.

RELATED ARTICLES
spot_img

Latest News