ಬಿಡದಿ,ಆ.10- ರೈತರ ಹೊಟ್ಟೆ ಮೇಲೆ ಹೊಡೆದು, ಜಮೀನು ಕಬಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದಿಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ನಡೆಸುತ್ತಿರುವ ಎರಡನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀವು ರಾಜ್ಯ ಆಳುತ್ತಿದ್ದೀರಿ ಅದಕ್ಕೆ ನಮ ಯಾವುದೇ ವಿರೋಧವಿಲ್ಲ. ಆದರೆ ರೈತರನ್ನು ಬೀದಿಗೆ ತಳ್ಳುವುದು, ಅವರ ಹೊಟ್ಟೆ ಮೇಲೆ ಹೊಡೆದು ಇಲ್ಲಿ ಲೇಔಟ್‌ಗಳನ್ನು ಮಾಡುತ್ತೇವೆ ಎಂದು ಹೇಳುತ್ತಿದ್ದೀರಲ್ಲಾ, ನಿಮಗೆ ಯಾರು ನಿವೇಶನ ಬೇಕು ಎಂದು ಅರ್ಜಿ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು.
ನೀವು ಮುಖ್ಯಮಂತ್ರಿಯಾಗಲು ದೆಹಲಿಗೆ ಹೋಗಿ ಯಾರ ಜೊತೆ ಚರ್ಚೆ ಮಾಡಿದ್ದೀರಿ, ಯಾವ ಸಹಾಯ ಮಾಡುತ್ತೇನೆ ಎಂದು ಮಾತು ಕೊಟ್ಟು ಬಂದಿದ್ದೀರಿ ಅದನ್ನು ಬಹಿರಂಗಪಡಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌ರವರಿಗೆ ಸವಾಲು ಹಾಕಿದರು.
ಸುಮಾರು 7,481 ಎಕರೆ ರೈತರ ಜಮೀನನ್ನು ಕಬಳಿಸುತ್ತಿರುವ ಹುನ್ನಾರದ ಹಿಂದೆ ಹಲವಾರು ಯೋಜನೆಗಳಿವೆ. ನೀವು ನಿನ್ನೆ ದೆಹಲಿಗೆ ಹೊರಡುವ ಮುನ್ನ ಯಾರಿಗೂ ಬಲವಂತ ಮಾಡುವುದಿಲ್ಲ ಮತ್ತು ಜಮೀನನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದೀರಿ. ಅದರಂತೆ ನಡೆದುಕೊಳ್ಳಿ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಅರ್ಧ ಎಕರೆ ಇರಲಿ, ಒಂದು ಎಕರೆ ಇರಲಿ, 20 ಗುಂಟೆ ಜಾಗ ಇರಲಿ ಅವರು ಬದುಕು ಕಟ್ಟಿಕೊಳ್ಳುತ್ತಾರೆ. ನೀವು ಅವರನ್ನು ಬೀದಿಗೆ ದೂಡಬೇಡಿ ಎಂದು ಒತ್ತಾಯಿಸಿದರು.
ರೈತರ ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಯೋಜನೆಯನ್ನು ನಾನು ಖಂಡಿಸುತ್ತೇನೆ ಮತ್ತು ನನ್ನ ದೇಹಕ್ಕೆ ವಯಸ್ಸಾಗಿರಬಹುದು. ಆದರೆ ನನ್ನ ಬುದ್ಧಿಗೆ ವಯಸ್ಸಾಗಿಲ್ಲ. ಹೋರಾಟಕ್ಕೆ ನಾನು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು. ಯಾರೂ ಕೂಡಾ ಧೃತಿಗೆಡಬಾರದು, ಎದೆಗುಂದಬಾರದು. ಈ ಹೋರಾಟ ರೈತರನ್ನು ಉಳಿಸುವ ಹೋರಾಟ. ಯಾವುದೇ ಕಾರಣಕ್ಕೂ ಬಿಡದಿ ಟೌನ್‌ಶಿಪ್‌ಗೆ ಅವಕಾಶ ನೀಡುವುದಿಲ್ಲ ಎಂದರು. ರೈತರ ಹೋರಾಟಕ್ಕೆ ನಾವು ಸದಾ ಸಿದ್ಧವಿದ್ದು, ಇದಕ್ಕೆ ಕುಮಾರಸ್ವಾಮಿ, ನಿಖಿಲ್‌ಕುಮಾರಸ್ವಾಮಿ ಸೇರಿದಂತೆ ನಮ ಅನೇಕ ಶಾಸಕರು, ಕಾರ್ಯಕರ್ತರು ಜೊತೆಗಿರುತ್ತಾರೆ ಎಂದು ಹೇಳಿದರು.
ಒಕ್ಕಲಿಗರು ಮುಖ್ಯಮಂತ್ರಿಯಾದರೆ ಸಹಿಸುವುದಿಲ್ಲ, ಹೊಟ್ಟೆ ಉರಿ ಎಂದು ಹೇಳುತ್ತೀರ. ನಿಮಗೆ ಇನ್ನೂ ಒಂದೂವರೆ ವರ್ಷ ಅಧಿಕಾರ ಅವಧಿ ಇದೆ. ಒಳ್ಳೆಯ ಕೆಲಸ ಮಾಡಿ. ಅದಕ್ಕೆ ನಮ ಸಹಕಾರವಿರುತ್ತದೆ. ಆದರೆ ನೂರಾರು ರೈತರ ಜಮೀನನ್ನು ಕಬಳಿಸುತ್ತಿದ್ದೀರಲ್ಲಾ ಅದಕ್ಕೆ ನಮ ಹೊಟ್ಟೆ ಉರಿಯುತ್ತಿದೆ ಎಂದು ಲೇವಡಿ ಮಾಡಿದರು.
ಇದೇ ವೇಳೆ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಡಿ.ಕೆ.ಶಿವಕುಮಾರ್‌ರವರು ಪ್ರತಿ ಎಕರೆಗೆ 3 ಕೋಟಿ ರೂ. ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ನೀವು 2 ಕೋಟಿ ರೂ. ಕೊಡಿ. ಅದಕ್ಕೆ ಬೇಕಾಗುವ 11.50 ಸಾವಿರ ಕೋಟಿ ಪ್ರಾಧಿಕಾರದ ಬಳಿ ಇದೆಯೇ ಎಂಬುದನ್ನು ತೋರಿಸಿ ಎಂದು ಟೀಕಿಸಿದರು.
ಈಗಾಗಲೇ ಬಿಡಿಎ, ಬಿಎಂಆರ್‌ಡಿಎ ಸೇರಿದಂತೆ ಹಲವಾರು ಸಂಸ್ಥೆಗಳ ಮೂಲಕ ಖಾಲಿ ನಿವೇಶನಗಳನ್ನು ಮಾರಾಟ ಮಾಡುವ ಜಾಹೀರಾತುಗಳನ್ನು ನೀಡಿ ಹಣ ಶೇಖರಣೆಗೆ ಮುಂದಾಗುತ್ತಿದ್ದೀರಿ. ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡಿ ನಿಮ ಜೇಬು ತುಂಬಿಸಿಕೊಳ್ಳಲು ಯತ್ನಿಸುತ್ತಿದ್ದೀರಿ ಎಂದು ಆರೋಪಿಸಿದರು.
ಕನಕಪುರ ರೈತರಿಗೆ ಜಮೀನು ಮಾರಬೇಡಿ ಎನ್ನುತ್ತೀರ. ಆದರೆ ಇಲ್ಲಿ ನೀವು ರೈತರ ಜಮೀನನ್ನು ಕಬಳಿಸುತ್ತಿದ್ದೀರ. ಫ್ರೀಡಂ ಪಾರ್ಕ್‌ವರೆಗೂ ನಾವು ಹೋರಾಟ ನಡೆಸಲು ಮುಂದಾಗಿರುವಾಗ ಅದನ್ನು ತಡೆಯಲು ನೀವು ಯತ್ನಿಸುತ್ತಿದ್ದೀರ ಎಂದು ನೇರ ಆರೋಪ ಮಾಡಿದರು. ಪಾದಯಾತ್ರೆಯಲ್ಲಿ ಮಾಜಿ ಸಚಿವ ಪುಟ್ಟರಾಜು, ಹರೀಶ್‌ಗೌಡ, ಶರಣಗೌಡ ಕುಂದಪುರ, ಎ.ಮಂಜು, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ರಾಮನಗರ ತಾಲೂಕು ಅಧ್ಯಕ್ಷ ಶಿವಲಿಂಗಯ್ಯ, ಕರಿಯಮಾಜಿ, ರವಿಕುಮಾರ್, ಪೈಲ್ವಾನ್ ಪುಟ್ಟರಾಜು ಸೇರಿದಂತೆ ಹಲವಾರು ನಾಯಕರು, ಸಾವಿರಾರು ರೈತರು ಪಾಲ್ಗೊಂಡಿದ್ದರು.
