Homeರಾಜ್ಯಬಿಡದಿ ಟೌನ್‌ಶಿಪ್‌ ಕುರಿತು ರೈತರ ಸಮುಖದಲ್ಲೇ ಚರ್ಚೆಯಾಗಲಿ : ಹೆಚ್ಡಿಕೆ

ಬಿಡದಿ ಟೌನ್‌ಶಿಪ್‌ ಕುರಿತು ರೈತರ ಸಮುಖದಲ್ಲೇ ಚರ್ಚೆಯಾಗಲಿ : ಹೆಚ್ಡಿಕೆ

Let the discussion on Bidadi Township be held in the presence of the farmers: HDK

ಬೆಂಗಳೂರು, ಜೂ.23- ಬಿಡದಿ ಟೌನ್‌ಶಿಪ್‌ ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಭೂಮಿಯನ್ನು ಕಳೆದುಕೊಳ್ಳುವ ರೈತರ ಸಮುಖದಲ್ಲೇ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರತಿಪಾದಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಸವಾಲು ಅಲ್ಲ. ಪಂಥಾಹ್ವಾನದ ಪ್ರಶ್ನೆಯೂ ಅಲ್ಲ. ರೈತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಸರ್ಕಾರ ಕೃಷಿಭೂಮಿಯನ್ನು ಸ್ವಾದೀನಪಡಿಸಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ 450ಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಸಮಸ್ಯೆಗೆ ಪರಿಹಾರ ದೊರೆಯಬೇಕು ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಜೂ.26 ರಂದು ವಿಧಾನಸೌಧದಲ್ಲಿ ಚರ್ಚೆಗೆ ಆಹ್ವಾನಿಸಿದ್ದಾರೆ. ಆದರೆ ಕುಣಿಗಲ್‌, ಶ್ರೀರಂಗಪಟ್ಟಣ, ಕೆ.ಆರ್‌.ನಗರ ಸೇರಿದಂತೆ ಅಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಹಲವು ಕಾರ್ಯಕ್ರಮಗಳು ನಿಗದಿಯಾಗಿವೆ.

ಹೀಗಾಗಿ ಜೂ.27 ರಂದು ಭೈರಮಂಗಲದಲ್ಲಿ ರೈತರ ಸಮುಖದಲ್ಲಿ ಚರ್ಚೆ ಮಾಡಬೇಕು. ವಿಧಾನಸೌಧದಲ್ಲಿ ಈ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಸರ್ಕಾರ ಶೇ.80 ರಷ್ಟು ರೈತರು ಭೂಸ್ವಾಧೀನಕ್ಕೆ ಒಪ್ಪಿದ್ದಾರೆ ಎನ್ನುತ್ತಿದೆ. ಆದರೆ ಧರಣಿನಿರತ ರೈತರು ಶೇ.80ರಷ್ಟು ರೈತರು ಒಪ್ಪಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ರೈತರ ಸಮುಖದಲ್ಲೇ ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ.

ಯಾವುದೇ ತಂಡವಿಲ್ಲ :
ಮುಖ್ಯಮಂತ್ರಿಗಳು ನಿಮ ಐದು ಜನರ ತಂಡದೊಂದಿಗೆ ವಿಧಾನಸೌಧಕ್ಕೆ ಚರ್ಚೆಗೆ ಬನ್ನಿ ಎಂದು ಪತ್ರ ಬರೆದಿದ್ದಾರೆ. ತಂಡವನ್ನು ಅವರು ಕಟ್ಟಿಕೊಂಡಿರಬೇಕು. ನನಗೆ ಯಾವುದೇ ತಂಡವಿಲ್ಲ. ಇರುವುದು ರೈತರ ಪರ ತಂಡ ಎಂದು ವಾಗ್ದಾಳಿ ನಡೆಸಿದರು.

ಟೌನ್‌ಶಿಪ್‌ಗೆ ಚರ್ಚೆಗೆ ಕರೆದಂತೆಯೂ ಇರಬೇಕು, ಆ ಚರ್ಚೆಯು ಆಗಲೂಬಾರದು ಎಂಬ ಅಭಿಪ್ರಾಯದಿಂದ ವಿಧಾನಸೌಧದಲ್ಲಿ ಚರ್ಚೆಗೆ ಆಹ್ವಾನಿಸಿರಬೇಕು. ಸಮಸ್ಯೆಗೆ ಒಳಗಾದವರನ್ನು ಹೊರತುಪಡಿಸಿ ಮಾತನಾಡುವುದರಲ್ಲಿ ಅರ್ಥವಿಲ್ಲ. ಬಿಜೆಪಿ-ಜೆಡಿಎಸ್‌‍ ಸರ್ಕಾರವಿದ್ದಾಗ ಕಾಂಗ್ರೆಸ್‌‍ನ ಎಲ್ಲಾ ನಾಯಕರು ಏನೇನು ವಾಗ್ದಾಳಿ ನಡೆಸಿದ್ದರು, ಈಗ ಏನು ಮಾತನಾಡುತ್ತಿದ್ದಾರೆ ಎಂಬುದಕ್ಕೆ ಹಲವು ದಾಖಲೆಗಳಿವೆ. ಇವರು ಸರ್ಕಾರ ನಡೆಸುವುದು ನಾಡಿನ ಅಭಿವೃದ್ಧಿಗಲ್ಲ, ಅವರವರ ಅಭಿವೃದ್ಧಿ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ವಿಧಾನಸೌಧದಲ್ಲಿ ಚರ್ಚೆ ಮಾಡಿದರೆ ತಾರ್ಕಿಕ ಅಂತ್ಯ ಕಾಣುವುದಿಲ್ಲ. ಭೂಮಿ ಕಳೆದುಕೊಳ್ಳುವ ರೈತರ ಸಮುಖದಲ್ಲಿ ಚರ್ಚಿಸಿ ಯೋಜನೆಯಿಂದ ಸಮಸ್ಯೆಗೆ ಒಳಗಾಗುತ್ತಿರುವ ರೈತರ ಜೊತೆ ನೇರಾನೇರ ಚರ್ಚೆ ಮಾಡಿದರೆ ಮುಗಿಯಲಿದೆ. ಈ ಟೌನ್‌ಶಿಪ್‌ ಯಾರಿಂದಾಯಿತು, ಹೀಗೇಕಾಯಿತು ಎಂಬುದು ಮುಖ್ಯ ಅಲ್ಲ. ಸರ್ಕಾರದ ವಿರುದ್ಧ ದನಿಯೆತ್ತಿರುವ ರೈತರಿಗೆ ಬೆಂಬಲ ನೀಡುತ್ತಿದ್ದೇನೆ. ಈ ವಿಚಾರದಲ್ಲಿ ಯಾವುದೇ ಪ್ರತಿಷ್ಠೆಯೂ ಇಲ್ಲ. ಯಾರ ಹೆಸರನ್ನೂ ಹಾಳು ಮಾಡುವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ರೈತರನ್ನು ಉಳಿಸಲು ಕಾನೂನು ವ್ಯಾಪ್ತಿಯಲ್ಲಿ ನಡೆಸುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.

ವಿಶೇಷ ಅರ್ಥ ಬೇಡ :
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿರುವುದಕ್ಕೆ ವಿಶೇಷ ಅರ್ಥ ಬೇಡ. ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಧರ್ಮಗುರುಗಳನ್ನು ಭೇಟಿ ಮಾಡಿದ್ದಾರೆ. ಯಾವುದೇ ರಾಜಕೀಯ ಚರ್ಚೆಯಾಗಿಲ್ಲ ಎಂಬುದನ್ನು ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

RELATED ARTICLES

Latest News