ಬೆಂಗಳೂರು, ಜೂ. 25- ಬಿಡದಿ ಟೌನ್‌ಶಿಪ್ ವಿಚಾರವಾಗಿ ಪ್ರತಿಭಟನಾ ನಿರತ ಸ್ಥಳದಲ್ಲಿ ಚರ್ಚೆ ನಡೆಸುವುದು ಸೂಕ್ತ ಅಲ್ಲ, ವಿಧಾನಸೌಧದಲ್ಲೇ ಸಭೆ ಮಾಡಿ ಇತ್ಯರ್ಥಪಡಿಸುವುದು ಸೂಕ್ತ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಯಾವುದೇ ವಿವಾದಗಳು ಪ್ರತಿಭಟನೆ, ಗಲಾಟೆ, ಗದ್ದಲ, ಧರಣಿಯ ಸ್ಥಳದಲ್ಲಿ ಇತ್ಯರ್ಥವಾಗಿಲ್ಲ. ಈ ಹಿಂದೆ ಕಾವೇರಿ ಗಲಾಟೆಯಂತಹ ಸಂದರ್ಭದಲ್ಲಿ ವಿಧಾನಸೌಧದಲ್ಲೇ ಸರ್ವ ಪಕ್ಷ ಸಭೆಯಾಗಿದೆ. ಕೆಂಪೇಗೌಡ ಬಡಾವಣೆಯ ವಿವಾದದ ಸಂದರ್ಭದಲ್ಲೂ ವಿಧಾನಸೌಧದಲ್ಲಿ ಸಭೆಯಾಗಿತ್ತು ಎಂದರು.
ಬಿಡದಿಯ ಉಪನಗರ ವಿವಾದದ ವಿಚಾರವಾಗಿಯೂ ವಿಧಾನಸೌಧದಲ್ಲೇ ಚರ್ಚೆಯಾಗಬೇಕು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು 5 ಜನ ಪ್ರತಿನಿಧಿಗಳ ಜೊತೆ ವಿಧಾನಸೌಧದ ಸಭೆಗೆ ಆಗಮಿಸುವುದು ಒಳ್ಳೆಯದು. ಎಲ್ಲಾ ರೈತರ ಸಮುಖದಲ್ಲಿ ಬಗೆ ಹರಿಯಬೇಕೆಂಬುದು ಸೂಕ್ತ ಅಲ್ಲ ಎಂದರು.
ನೈಸ್ ರಸ್ತೆಗೆ 1,900 ಎಕರೆಗೆ ಭೂಮಿ ಕೊಟ್ಟಿದ್ದಾರೆ. ಅದರಲ್ಲಿ 40 ಎಕರೆಯನ್ನು ಉಪನಗರಕ್ಕೆ ನೀಡಿದ್ದಾರೆ. ಪ್ರತಿ ಎಕರೆಗೆ 6 ಕೋಟಿ ರೂ. ಬೆಲೆ ಇದೆ. ನೈಸ್ ಸಂಸ್ಥೆಯವರು 40 ಲಕ್ಷಕ್ಕೆ ಕೊಡುತ್ತಿದ್ದಾರೆ. ಅದನ್ನು ಏಕೆ? ಬಗೆಹರಿಸಲಿಲ್ಲ ಎಂದು ಪ್ರಶ್ನಿಸಿದರು.
ವಿಧಾನಸಭೆಯಿಂದ ವಿಧಾನಪರಿಷತ್ತಿನ 7 ಸದಸ್ಯರ ಆಯ್ಕೆ ಚುನಾವಣೆಯಲ್ಲಿ ಅಡ್ಡ ಮತದಾನವಾಗಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ನಡುವಿನ ಒಳ ಜಗಳವೇ ಕಾರಣ. ಇಬ್ಬರಿಗೂ ಪರಸ್ಪರ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂಬ ಪೈಪೋಟಿ ಇದೆ.
ಹೀಗಾಗಿ ವಿಜಯೇಂದ್ರ ಮತ್ತು ಅಶೋಕ್ ಅವರು ಇಬ್ಬರೇ ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡಿದರೆ ಸಾಕು. ಬಿಜೆಪಿಯ 63 ಮಂದಿ ಶಾಸಕರೂ ಹೋಗಿ ಪ್ರಮಾಣ ಮಾಡುವ ಅಗತ್ಯ ಇಲ್ಲ ಎಂದರು.ಅಡ್ಡ ಮತದಾನದ ಕಾರಣಕ್ಕೆ ಬೇರೆ ಯಾರನ್ನೋ ಅಮಾನತು ಮಾಡಿ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಅಡ್ಡ ಮತದಾನಕ್ಕೆ ಅಶೋಕ್ ಮತ್ತು ವಿಜಯೇಂದ್ರ ನಡುವಿನ ಸಂಘರ್ಷವೇ ಕಾರಣ. 63 ಶಾಸಕರನ್ನು ಮೊದಲೇ ಸಭೆ ಕರೆದು, ಚರ್ಚಿಸಿ ಬಿಗಿ ಮಾಡಬೇಕಿತ್ತು. ಕಾಂಗ್ರೆಸ್ ಅವರು ಮೊದಲೇ ಎಚ್ಚೆತ್ತುಕೊಂಡು 135 ಜನರನ್ನು ಒಂದು ಕಡೆ ಸೇರಿಸಿ, ತರಬೇತಿ ಕೊಟ್ಟಿದ್ದರು. ಅಡ್ದ ಮತದಾನವಾದರೆ ಅಥವಾ ಮತ ಅಸಿಂಧುವಾದರೆ ಏನೆಲ್ಲಾ ಸಮಸ್ಯೆಗಳಾಗುತ್ತದೆ ಎಂದು ಜಾಗೃತಿ ಮೂಡಿಸಿದರು. ಬಿಜೆಪಿಯವರು ಆ ರೀತಿ ಯಾವ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಂಡಿಲ್ಲ. 9 ಗಂಟೆಗೆ ಮತದಾನ ಇದ್ದಾಗ 7 ಗಂಟೆಗೆ ಯಾರಿಗೆ ಮತದಾನ ಮಾಡಬೇಕೆಂದು ಹೇಳಿದ್ದಾರೆ. ವಿಪ್ ಕೂಡ ಜಾರಿ ಮಾಡಲಿಲ್ಲ ಎಂದು ಹೇಳಿದರು.
