ಮೈಸೂರು,ಆ.9- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಕೊಂಡುಕೊಳ್ಳುವ ಸರಕಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಕೊಂಡುಕೊಳ್ಳುವವರು ಈ ರಾಜ್ಯದಲ್ಲಿ ಹುಟ್ಟಿಲ್ಲ. ನನ್ನ ದನಿಯನ್ನು ನಿಲ್ಲಿಸಲಾಗುವುದಿಲ್ಲ ಎಂದು ಹೇಳಿದರು.
ಡಿಎಲ್ಎಫ್ನಿಂದ ಕಿಕ್ಬ್ಯಾಕ್ ಪಡೆಯಲಾಗಿದೆ ಎಂಬ ಆರೋಪದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಅವರದೇ ಸರ್ಕಾರವಿದೆ. ತನಿಖೆ ನಡೆಸಲಿ. ಡಿಎಲ್ಎಫ್ಗೂ ಕಾಂಗ್ರೆಸ್ನ ಈಗಿನ ಮುಖ್ಯಮಂತ್ರಿಗೂ ಏನು ಸಂಬಂಧ ಎಂಬುದನ್ನು ತಿಳಿದುಕೊಳ್ಳಲಿ. ಮುಂದೆ ಪ್ರಧಾನಿ ಮಾಡಲು ಹೊರಟಿದ್ದಾರಲ್ಲಾ, ಅವರಿಗೂ ಡಿಎಲ್ಎಫ್ಗೂ ಏನು ಸಂಬಂಧ ಇದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು. ಲಾಟರಿ ನಿಷೇಧ ಮಾಡಿದಾಗ ಕೇರಳದ ವ್ಯಕ್ತಿಯೊಬ್ಬರು ನನ್ನನ್ನು ಭೇಟಿ ಮಾಡಲು ಬಂದಿದ್ದಾಗ ಅವರನ್ನು ನಿರ್ದಾಕ್ಷಿಣ್ಯವಾಗಿ ವಾಪಸ್ಸು ಕಳುಹಿಸಿದ್ದೇನೆ. ಸಿಂಗಾಪುರದಲ್ಲಿ ಅಧಿಕಾರಿಗಳ ನಿಯೋಗವನ್ನು ಕೊಂಡೊಯ್ದಿದ್ದಾಗ ನೈಸ್ ಕಂಪನಿಯವರು ಏನು ಮಾಡಿದ್ದರು ಎಂಬುದನ್ನು ತಿಳಿದುಕೊಳ್ಳಲಿ ಎಂದರು.
ದಲಿತರ ಭೂಮಿ ಪಡೆಯಲು ಮುಂದಾಗಿದ್ದಾರೆ ಎಂದ ಅವರು, ಬಿಡದಿ ಉಪನಗರ ಯೋಜನೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾ. ಗೋಪಾಲಗೌಡರು ಬಿಡದಿ ಭಾಗದ ರೈತರಿಂದ ಅಹವಾಲುಗಳನ್ನು ಸ್ವೀಕರಿಸಿ ಜನರ ಅಭಿಪ್ರಾಯ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. ಅವರನ್ನು ಕೇಳಿದರೆ ಜನಾಭಿಪ್ರಾಯ ಗೊತ್ತಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿ, ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ನಡೆಸಿದ ಸತ್ಯಶೋಧನಾ ವರದಿಯನ್ನು ಏನು ಮಾಡಿದ್ದಾರೆ? ಈಗಿನ ಮುಖ್ಯಮಂತ್ರಿಯೇ ಅದರ ಸದಸ್ಯರಾಗಿದ್ದರು. ವರದಿಯಲ್ಲಿ ಫಲವತ್ತಾದ ಭೂಮಿ, ತೆಂಗು, ಅಡಿಕೆ, ಬಾಳೆ, ಹಲಸು, ಮಾವು ಎಲ್ಲವೂ ಇದ್ದು ರೈತರ ವಿರೋಧವಿದೆ ಎಂದು ವರದಿ ಕೊಟ್ಟಿದ್ದರು. ಆ ವರದಿಯನ್ನು ಏನು ಮಾಡುತ್ತಾರೆ? ಎಂದು ವಾಗ್ದಾಳಿ ನಡೆಸಿದರು.
ರೈತರು, ರೈತ ಮಹಿಳೆಯರು ಉಪನಗರ ಯೋಜನೆಯ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.ಈ ಯೋಜನೆ ಕಾರ್ಯಗತವಾಗುವುದಿಲ್ಲ. ಕಮಿಷನ್ ಪಡೆಯಲಷ್ಟೇ ಸಾಧ್ಯವಾಗುತ್ತದೆ ಎಂದು ಆರೋಪಿಸಿದರು.
ಒಳಮೀಸಲಾತಿ ವರದಿ ಪಡೆಯಲು 86 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಭ್ರಷ್ಟ ಸರ್ಕಾರಕ್ಕೆ ನಾಡಿನ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.
ವಿಧಾನಸಭೆಯಲ್ಲೇ ಬಿಡದಿ ಉಪನಗರ ಯೋಜನೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಯಾಗಿ ಹೇಳಿದ್ದೇನೆ ಎಂದು ಹೇಳಿದರು. ಬಿಎಂಐಸಿ ಯೋಜನೆ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಹಗಲು ದರೋಡೆ ಮಾಡಲಾಗುತ್ತಿದೆ. ಇದು ರಾಜ್ಯದ ಇತಿಹಾಸದಲ್ಲೇ ದೊಡ್ಡ ಹಗರಣ ಎಂದು ಹೈಕೋರ್ಟ್ ಹೇಳಿದೆ. ಹೈಕೋರ್ಟ್ನಲ್ಲಿ ಸರ್ಕಾರದ ವಕೀಲರೇ ನೈಸ್ ರಸ್ತೆಯ ಟೋಲ್ ಸಂಗ್ರಹ ಕಾನೂನು ಬಾಹಿರ ಎಂದು ಹೇಳಿದ್ದಾರೆ. ಆದರೂ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಏಕೆ ಮೌನವಾಗಿದ್ದಾರೆ? ಕ್ರಮ ಏಕೆ ಕೈಗೊಳ್ಳುತ್ತಿಲ್ಲ? ಫುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಬಿಎಂಐಸಿ ವಿಚಾರದಲ್ಲಿ ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದರು.
ಈಗಾಗಲೇ 2 ಸಾವಿರ ಕೋಟಿ ರೂ.ಗಳಷ್ಟು ಟೋಲ್ ಸಂಗ್ರಹಿಸಲಾಗಿದೆ ಎಂದ ಅವರು, ನಿಮ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸರ್ವನಾಶವಾಗುತ್ತೀರಿ ಎಂದು ಹೇಳಿದರು.
ಜನರು ತೀರ್ಮಾನಿಸಿದಾಗ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
