ಬೆಂಗಳೂರು, ಆ.9- ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ಕೇವಲ ಮೂರು ದಿನಗಳು ಬಾಕಿ ಇದ್ದರೂ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗದಿರುವುದು ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ಸಂಪುಟ ವಿಸ್ತರಣೆ ನಡೆದು ಒಂದು ವಾರ ಕಳೆದರೂ ಖಾತೆ ಹಂಚಿಕೆಯಾಗಿಲ್ಲ. ರಾಜ್ಯದಲ್ಲಿ ಬಲಿಷ್ಠ ನಾಯಕತ್ವ ಹೊಂದಿರುವ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಹುದ್ದೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗದೆ ಸವಾಲು ಎದುರಿಸುತ್ತಿದ್ದಾರೆ.
ಸುಮಾರು ಎರಡು ತಿಂಗಳ ವಿಳಂಬದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗಿತ್ತು. ಇದೀಗ ಖಾತೆ ಹಂಚಿಕೆಯೂ ವಿಳಂಬವಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಅಧಿಕಾರ ಕೇಂದ್ರಗಳಿರುವ ಹಿನ್ನೆಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಖಾತೆ ಹಂಚಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರೊಂದಿಗೆ ಈಗಾಗಲೇ ಎರಡು ಸುತ್ತಿನ ಸಭೆ ನಡೆಸಿದ್ದಾರೆ. ಪಕ್ಷದ ಹಿರಿಯ ನಾಯಕರ ಅಭಿಪ್ರಾಯವನ್ನೂ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಸಂಪುಟದಲ್ಲಿ ಖಾಲಿ ಇರುವ ಒಂದು ಸ್ಥಾನಕ್ಕೆ ಸಚಿವರನ್ನು ನೇಮಕ ಮಾಡಲು ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆ ಕುರಿತು ಚರ್ಚಿಸಲು ಡಿ.ಕೆ.ಶಿವಕುಮಾರ್ ಮತ್ತೆ ಇಂದು ದೆಹಲಿಗೆ ತೆರಳುತ್ತಿದ್ದಾರೆ. ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಿದ ಬಳಿಕ ನಾಳೆ ಖಾತೆ ಹಂಚಿಕೆ ಅಂತಿಮಗೊಳ್ಳಲಿದೆ ಎನ್ನಲಾಗಿದೆ. ಆಗಸ್ಟ್ 13ರಿಂದ ಹತ್ತು ದಿನಗಳ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಇದು ದೊಡ್ಡ ಸವಾಲಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ, ಬರ ಪರಿಸ್ಥಿತಿ, ಕಾವೇರಿ ನೀರು, ರೈತರ ಬೆಳೆಗಳಿಗೆ ನೀರಿನ ಕೊರತೆ, ಬೆಳೆ ವಿಮೆ ಸರಿಯಾಗಿ ತಲುಪದಿರುವ ಆರೋಪ ಸೇರಿದಂತೆ ಹಲವು ವಿಚಾರಗಳು ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಇದೆ.
ಇದರ ಜೊತೆಗೆ ಬಿಡದಿ ಉಪನಗರ ಯೋಜನೆಯೂ ಸರ್ಕಾರಕ್ಕೆ ಮತ್ತೊಂದು ಸವಾಲಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಯೋಜನೆಯನ್ನು ವಿರೋಧಿಸಿದ್ದು, ಜೆಡಿಎಸ್ ಪಾದಯಾತ್ರೆಯನ್ನೂ ನಡೆಸಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಘಟನೆಗಳು, ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ವಲಸೆ ಆರೋಪ, ಆರ್ಎಸ್ಎಸ್ ನೋಂದಣಿ ಕುರಿತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರ ಸೇರಿದಂತೆ ಹಲವು ವಿಚಾರಗಳು ಅಧಿವೇಶನದಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. ಈ ನಡುವೆ ಮೊದಲ ಹಂತದಲ್ಲಿ ಸಂಪುಟ ಸೇರಿದ 13 ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಆದರೆ ಎರಡನೇ ಹಂತದಲ್ಲಿ ಸಂಪುಟ ಸೇರಿದ 19 ಸಚಿವರಿಗೆ ಒಂದು ವಾರ ಕಳೆದರೂ ಖಾತೆಗಳ ಹಂಚಿಕೆಯಾಗಿಲ್ಲ.
ಖಾತೆ ಹಂಚಿಕೆಯಾದ ಬಳಿಕವೂ ಹೊಸ ಸಚಿವರು ತಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಲಾಖೆಯ ಕಾರ್ಯವೈಖರಿ, ಯೋಜನೆಗಳು ಹಾಗೂ ಬಾಕಿ ಇರುವ ವಿಷಯಗಳ ಕುರಿತು ಮಾಹಿತಿ ಪಡೆಯಲು ಸಮಯ ಬೇಕಾಗುತ್ತದೆ. ವಿಧಾನಮಂಡಲ ಅಧಿವೇಶನದಲ್ಲಿ ಸಚಿವರು ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಚರ್ಚೆ, ನಿಲುವಳಿ ಸೂಚನೆ ಸೇರಿದಂತೆ ವಿವಿಧ ವಿಷಯಗಳಿಗೆ ಉತ್ತರ ನೀಡಬೇಕಾಗುತ್ತದೆ.
ಹಿಂದೆ ಸಚಿವರಾಗಿದ್ದವರಿಗೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಸ್ವಲ್ಪ ಅನುಭವವಿದ್ದರೂ, ಹೊಸದಾಗಿ ಸಚಿವರಾಗಿರುವವರಿಗೆ ಇಲಾಖೆಯ ಸಂಪೂರ್ಣ ಮಾಹಿತಿ ಪಡೆಯಲು ಹೆಚ್ಚಿನ ಸಮಯದ ಅಗತ್ಯವಿದೆ. ಕೆ.ಎಂ.ಶಿವಲಿಂಗೇಗೌಡ, ಕೆ.ಎನ್. ರಾಜಣ್ಣ, ಹೆಚ್.ಸಿ.ಬಾಲಕೃಷ್ಣ, ವಿಜಯಾನಂದ ಕಾಶಪ್ಪನವರ್, ಕೆ.ಎಸ್. ಬಸವಂತಪ್ಪ, ರುದ್ರಪ್ಪ ಲಮಾಣಿ, ತಿಮಾಪುರ್, ರಿಜ್ವಾನ್ ಅರ್ಷದ್, ಯತೀಂದ್ರ ಸಿದ್ದರಾಮಯ್ಯ, ಅಜಯ್ ಸಿಂಗ್ ಸೇರಿದಂತೆ ಹಲವು ನೂತನ ಸಚಿವರು ತಮ ಇಲಾಖೆಯ ಕುರಿತು ವಿಧಾನಸಭೆಯಲ್ಲಿ ಉತ್ತರ ನೀಡಲು ಸಿದ್ಧರಾಗಬೇಕಿದೆ.
ಯತೀಂದ್ರ ಅವರನ್ನು ಹೊರತು ಪಡಿಸಿದರೆ ಉಳಿದ ನೂತನ ಸಚಿವರಿಗೆ ಈವರೆಗೂ ಖಾತೆ ಹಂಚಿಕೆಯಾಗದಿರುವುದರಿಂದ ಅನಿಶ್ಚಿತತೆ ಮುಂದುವರಿದಿದೆ. ಅಧಿವೇಶನ ಆರಂಭವಾದ ಬಳಿಕ ಸರ್ಕಾರವನ್ನು ಎದುರಿಸಲು ವಿರೋಧ ಪಕ್ಷಗಳು ಈಗಾಗಲೇ ಹಲವು ಅಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳುತ್ತಿವೆ. ಮತ್ತೊಂದೆಡೆ ಸಚಿವ ಸ್ಥಾನ ಸಿಗದಿರುವ ಅಸಮಾಧಾನದಿಂದ ಆಡಳಿತ ಪಕ್ಷದ ಹಲವು ಶಾಸಕರೂ ಸರ್ಕಾರದ ವಿರುದ್ಧವೇ ಧ್ವನಿ ಎತ್ತುವ ಸಾಧ್ಯತೆ ಇದೆ. ಹೀಗಾಗಿ ವಿರೋಧ ಪಕ್ಷಗಳಿಗಿಂತಲೂ ಆಡಳಿತ ಪಕ್ಷದೊಳಗಿನ ಅಸಮಾಧಾನವೇ ಸರ್ಕಾರಕ್ಕೆ ಮತ್ತೊಂದು ಸವಾಲಾಗುವ ಸಾಧ್ಯತೆಯಿದೆ.
ಇಂತಹ ಸವಾಲಿನ ಸಂದರ್ಭದಲ್ಲೂ ಖಾತೆ ಹಂಚಿಕೆ ವಿಳಂಬವಾಗಿರುವುದು ನೂತನ ಸಚಿವರನ್ನು ಗೊಂದಲಕ್ಕೆ ಸಿಲುಕಿಸಿದೆ. ಪ್ರಬಲ ನಾಯಕತ್ವದ ಹೆಗ್ಗಳಿಕೆ ಹೊಂದಿರುವ ಡಿ.ಕೆ.ಶಿವಕುಮಾರ್ ಅವರಿಂದಲೇ ಖಾತೆ ಹಂಚಿಕೆ ಏಕೆ ವಿಳಂಬವಾಗುತ್ತಿದೆ ಎಂಬ ಪ್ರಶ್ನೆಯನ್ನು ಇದೀಗ ಜನಸಾಮಾನ್ಯರು ಹಾಗೂ ರಾಜಕೀಯ ವಲಯ ಕೇಳುವಂತಾಗಿದೆ.
