Homeಬೆಂಗಳೂರುಡ್ರೋನ್‌ ತಪಾಸಣೆಯಿಂದ ಬೆಂಗಳೂರಲ್ಲಿ ವಿದ್ಯುತ್‌ ವ್ಯತ್ಯಯ ಪ್ರಮಾಣದಲ್ಲಿ ಶೇ.85ರಷ್ಟು ಕುಸಿತ

ಡ್ರೋನ್‌ ತಪಾಸಣೆಯಿಂದ ಬೆಂಗಳೂರಲ್ಲಿ ವಿದ್ಯುತ್‌ ವ್ಯತ್ಯಯ ಪ್ರಮಾಣದಲ್ಲಿ ಶೇ.85ರಷ್ಟು ಕುಸಿತ

Drone inspections reduce power outages in Bengaluru by 85%

ಬೆಂಗಳೂರು, ಜೂ.26- ಹೈ-ವೋಲ್ಟೇಜ್‌ ಮತ್ತು ಎಕ್ಸ್ಟ್ರೀಮ್‌ ಹೈ ವೋಲ್ಟೇಜ್‌ ವಿದ್ಯುತ್‌ ಪ್ರಸರಣ ಮಾರ್ಗಗಳ ತಪಾಸಣೆಯಲ್ಲಿ ಸಿಬ್ಬಂದಿ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ನಿಖರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಅತ್ಯಾಧುನಿಕ ಡ್ರೋನ್‌ ತಂತ್ರಜ್ಞಾನ ಅಳವಡಿಸಿಕೊಂಡಿರುವ ಕೆಪಿಟಿಸಿಎಲ್‌, 11 ಸಾವಿರಕ್ಕೂ ಹೆಚ್ಚು ಟವರ್‌ಗಳನ್ನು ತಪಾಸಣೆ ನಡೆಸಿದೆ. 1.5 ಲಕ್ಷಕ್ಕೂ ಹೆಚ್ಚು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿದೆ. ಈ ಮೂಲಕ ಶೇ.85ರಷ್ಟು ವಿದ್ಯುತ್‌ ವ್ಯತ್ಯಯ ಕಡಿಮೆ ಮಾಡಲಾಗಿದೆ.

ಈ ಮೂಲಕ ಡಿಜಿಟಲ್‌ ತಂತ್ರಜ್ಞಾನದ ಅಳವಡಿಕೆಯಲ್ಲಿ ಕೆಪಿಟಿಸಿಎಲ್‌ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ರಾಜ್ಯಾದ್ಯಂತ ಇರುವ ಹೈ-ವೋಲ್ಟೇಜ್‌ ಮತ್ತು ಅತಿ-ಹೆಚ್ಚಿನ ವೋಲ್ಟೇಜ್‌ ವಿದ್ಯುತ್‌ ಪ್ರಸರಣ ಮಾರ್ಗಗಳ ತಪಾಸಣೆ ಮತ್ತು ನಿರ್ವಹಣೆಗಾಗಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
ಈ ವಿಶೇಷ ಡ್ರೋನ್‌ಗಳು ಹೈ-ರೆಸಲ್ಯೂಶನ್‌ ಕ್ಯಾಮೆರಾಗಳು, ಥರ್ಮಲ್‌ ಇಮೇಜಿಂಗ್‌ ಮತ್ತು ಲಿಡಾರ್‌ ಸೆನ್ಸಾರ್‌ಗಳನ್ನು ಹೊಂದಿವೆ. ದಟ್ಟವಾದ ಅರಣ್ಯಗಳು, ಗುಡ್ಡಗಾಡು ಪ್ರದೇಶಗಳು ಹಾಗೂ ಜನನಿಬಿಡ ನಗರ ಪ್ರದೇಶಗಳಲ್ಲಿ ಹಾದುಹೋಗಿರುವ ಪ್ರಸರಣ ಟವರ್‌ಗಳು, ವಾಹಕಗಳು ಮತ್ತು ಇನ್ಸುಲೇಟರ್‌ಗಳನ್ನು ಅತಿ ಸಮೀಪದಿಂದ ಹಾಗೂ ನಿಖರವಾಗಿ ತಪಾಸಣೆ ಮಾಡಲು ಈ ಡ್ರೋನ್‌ಗಳು ನೆರವಾಗಿವೆ.

ವಿದ್ಯುತ್‌ ತಂತಿಗಳು ಅಥವಾ ಉಪಕರಣಗಳಲ್ಲಿ ಸಡಿಲವಾದ ಸಂಪರ್ಕದಿಂದ ಉಂಟಾಗುವ ವಿಪರೀತ ಶಾಖ ಅಥವಾ ಹಾಟ್‌ಸ್ಪಾಟ್‌ಗಳನ್ನು ಥರ್ಮಲ್‌ ಕ್ಯಾಮೆರಾಗಳು ತಕ್ಷಣವೇ ಪತ್ತೆಹಚ್ಚುತ್ತವೆ. ಡ್ರೋನ್‌ನಿಂದ ಸಂಗ್ರಹಿಸಲಾದ ಈ ದತ್ತಾಂಶವು ಕೆಪಿಟಿಸಿಎಲ್‌ ನ ಇಂಜಿನೀಯರ್‌ಗಳಿಗೆ ಲಭ್ಯವಾಗುತ್ತಿದೆ. ಅಲ್ಲದೇ, ಮುಂಬರುವ ಡಿಜಿಟಲ್‌ ಟ್ವಿನ್‌ ಪ್ಲಾಟ್‌ಫಾರ್ಮ್‌ನೊಂದಿಗೆ ಸಂಯೋಜನೆಗೊಳ್ಳಲಿದ್ದು, ನೂತನ ಇಂಧನ ಭವನದ ನಿಯಂತ್ರಣ ಕೊಠಡಿಯಿಂದಲೇ ಸಂಪೂರ್ಣ ಜಾಲದ ಮೇಲ್ವಿಚಾರಣೆ ನಡೆಸಲು ಅನುವು ಮಾಡಿಕೊಟ್ಟಿವೆ.

ಈ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯು ಕೇವಲ ದೋಷಗಳನ್ನು ಪತ್ತೆಹಚ್ಚುವುದಕ್ಕೆ ಸೀಮಿತವಾಗಿಲ್ಲ, ಬದಲಾಗಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದೆ. ಡ್ರೋನ್‌ ತಪಾಸಣೆಯ ಕಾರ್ಯಾಚರಣೆಯು ಮೂಲಸೌಕರ್ಯ ನಿರ್ವಹಣೆಯಲ್ಲಿ ಹೊಸ ದಾಖಲೆಗಳನ್ನು ಬರೆದಿದೆ.

ಇಂಧನ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ರಾಜ್ಯಾದ್ಯಂತ ಇರುವ 45,000 ಕಿ.ಮೀ. ಉದ್ದದ ವಿದ್ಯುತ್‌ ಮಾರ್ಗಗಳನ್ನು ಸಿಬ್ಬಂದಿಯೇ ಖುದ್ದಾಗಿ ಪರಿಶೀಲಿಸುವುದು ಹೆಚ್ಚು ಸಮಯ ತೆಗೆದುಕೊಳ್ಳುವ ಹಾಗೂ ಅಪಾಯಕಾರಿ ಕೆಲಸವಾಗಿದೆ. ಥರ್ಮಲ್‌ ಮತ್ತು ಲಿಡಾರ್‌ ತಂತ್ರಜ್ಞಾನ ಹೊಂದಿದ ಡ್ರೋನ್‌ಗಳನ್ನು ಬಳಸುವ ಮೂಲಕ, ನಾವು ಈಗ ಅತಿ ಕಡಿಮೆ ಸಮಯದಲ್ಲಿ ನಮ ಬೃಹತ್‌ ಟವರ್‌ಗಳ 360-ಡಿಗ್ರಿ ತಪಾಸಣೆ ನಡೆಸಬಹುದು. ಬರಿಗಣ್ಣಿಗೆ ಕಾಣಿಸದ ಸಣ್ಣ ದೋಷಗಳನ್ನೂ ಗುರುತಿಸಲು ಈ ತಂತ್ರಜ್ಞಾನ ನಮ ಎಂಜಿನಿಯರ್‌ಗಳಿಗೆ ಶಕ್ತಿ ನೀಡುತ್ತದೆ ಎಂದರು.

ಕೆಪಿಟಿಸಿಎಲ್‌ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್‌ ಪ್ರಸಾತ್‌ ಮನೋಹರ್‌ ಮಾತನಾಡಿ, ಸಮಸ್ಯೆ ಎದುರಾದಾಗ ದುರಸ್ತಿ ಮಾಡುವುದಕ್ಕಿಂತ, ಸಮಸ್ಯೆ ಬರುವ ಮುನ್ನವೇ ಎಚ್ಚೆತ್ತುಕೊಳ್ಳುವ ಈ ವ್ಯವಸ್ಥೆಯಿಂದಾಗಿ ನಮ ವಿದ್ಯುತ್‌ ಗ್ರಿಡ್‌ ಮತ್ತಷ್ಟು ಸದೃಢವಾಗಿದೆ. ಹೊಸ ತಂತ್ರಜ್ಞಾನದ ಅಳವಡಿಕೆಯ ಮೂಲಕ ರಾಜ್ಯದ ರೈತರು, ಕೈಗಾರಿಕೆಗಳು ಮತ್ತು ಸಾರ್ವಜನಿಕರಿಗೆ ನಿರಂತರ ವಿದ್ಯುತ್‌ ಪೂರೈಕೆಯನ್ನು ಖಾತರಿಪಡಿಸುವುದರ ಜೊತೆಗೆ, ನಮ ಲೈನ್‌ಮನ್‌ಗಳ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.

RELATED ARTICLES

Latest News