Homeರಾಷ್ಟ್ರೀಯRSS ಹೊಗಳಿದ ಐಪಿಎಸ್‌‍ ಅಧಿಕಾರಿ ವಿರುದ್ಧ ತನಿಖೆಗೆ ಕಾಂಗ್ರೆಸ್‌‍ ಆಗ್ರಹ

RSS ಹೊಗಳಿದ ಐಪಿಎಸ್‌‍ ಅಧಿಕಾರಿ ವಿರುದ್ಧ ತನಿಖೆಗೆ ಕಾಂಗ್ರೆಸ್‌‍ ಆಗ್ರಹ

Congress seeks probe into IPS officer Vishwas Nangare Patil's speech at RSS event

ಮುಂಬೈ, ಜೂ.26- ಹಿಂದೂ ಸಕಲ್‌ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐಪಿಎಸ್‌‍ ಅಧಿಕಾರಿ ವಿಶ್ವಾಸ್‌‍ ನಾಂಗ್ರೆ ಪಾಟೀಲ್‌ ಅವರು ಆರ್ಎಸ್‌‍ಎಸ್‌‍ ಅನ್ನು ಪ್ರಶಂಸಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಕಾಂಗ್ರೆಸ್‌‍ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ನಾಗ್ಪುರ ಪೊಲೀಸ್‌‍ ಆಯುಕ್ತರಾಗಿ ವಾರದ ಹಿಂದಷ್ಟೆ ನೇಮಕಗೊಂಡಿರುವ ವಿಶ್ವಾಸ್‌‍ ನಾಂಗ್ರೆ ಪಾಟೀಲ್‌ ಅವರು ಸಕಲ್‌ ಹಿಂದೂ ಸಮಾಜ ಆಯೋಜಿಸಿದ್ದ ಹಿಂದೂ ಸಮೇಳನದಲ್ಲಿ ಮಾಡಿದ ಭಾಷಣದ ವಿಡಿಯೊ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌‍, ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌‍ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲು ನಾಂಗ್ರೆ ಪಾಟೀಲ್‌ ಸರ್ಕಾರದ ಪೂರ್ವಾನುಮತಿ ಪಡೆದಿದ್ದರೇ ಎಂಬುದನ್ನು ಮುಖ್ಯಮಂತ್ರಿ ತಿಳಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.

ಅಖಿಲ ಭಾರತ ಸೇವೆಗಳ (ನಡವಳಿಕೆ) ನಿಯಮಗಳ ಪ್ರಕಾರ, ಐಪಿಎಸ್‌‍ ಅಧಿಕಾರಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೊದಲು ಸರ್ಕಾರದ ಅನುಮತಿ ಪಡೆಯಬೇಕು ಎಂದು ಕಾಂಗ್ರೆಸ್‌‍ ಹೇಳಿದೆ.ನಾಂಗ್ರೆ ಪಾಟೀಲ್‌ ಅವರು ಅಂತಹ ಅನುಮತಿ ಪಡೆದಿದ್ದರೆ ಅದರ ವಿವರ ಬಹಿರಂಗಪಡಿಸಬೇಕು. ಅನುಮತಿ ಪಡೆಯದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆಯೇ ಎಂದು ಪ್ರಶ್ನಿಸಿದೆ.

ಭಾಷಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌‍ಎಸ್‌‍), ಹಿಂದೂತ್ವ ಹಾಗೂ ಆರ್‌ಎಸ್‌‍ಎಸ್‌‍ ಸಂಸ್ಥಾಪಕ ಡಾ. ಕೆ.ಬಿ. ಹೆಡ್ಗೇವಾರ್‌ ಅವರನ್ನು ಪ್ರಶಂಸಿಸಿರುವುದು, ಅಖಿಲ ಭಾರತ ಸೇವೆಗಳ ಅಧಿಕಾರಿಗಳು ರಾಜಕೀಯ ತಟಸ್ಥತೆಯನ್ನು ಕಾಪಾಡಬೇಕೆಂಬ ನಿಯಮಗಳಿಗೆ ವಿರುದ್ಧವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಕಾಂಗ್ರೆಸ್‌‍ ಹೇಳಿದೆ.

ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗಳೊಂದಿಗೆ ಅಧಿಕಾರಿಗಳು ಯಾವುದೇ ರೀತಿಯ ಸಂಬಂಧ ಹೊಂದಬಾರದು ಎಂಬ ಸೇವಾ ನಿಯಮಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್‌‍, ಅಂತಹ ಸಂಘಟನೆಯ ವೇದಿಕೆಯಲ್ಲಿ ಭಾಷಣ ಮಾಡಿ ಅದನ್ನು ಪ್ರಶಂಸಿಸುವುದು ಆ ಸಂಘಟನೆಯೊಂದಿಗಿನ ಸಂಬಂಧವೆಂದು ಪರಿಗಣಿಸಬೇಕಲ್ಲವೇ ಎಂದು ಪ್ರಶ್ನಿಸಿದೆ.

ಇದು ಕೇವಲ ಒಬ್ಬ ಐಪಿಎಸ್‌‍ ಅಧಿಕಾರಿಯ ವಿಷಯವಲ್ಲ. ನಾಗರಿಕ ಸೇವೆಗಳ ವಿಶ್ವಾಸಾರ್ಹತೆ, ಸಂವಿಧಾನಾತಕ ರಾಜಕೀಯ ತಟಸ್ಥತೆ ಹಾಗೂ ಪೊಲೀಸ್‌‍ ಆಡಳಿತದ ಮೇಲಿನ ಸಾರ್ವಜನಿಕ ನಂಬಿಕೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ ಎಂದು ಕಾಂಗ್ರೆಸ್‌‍ ಹೇಳಿದೆ.

ಮತ್ತೊಂದು ಪೋಸ್ಟ್‌ನಲ್ಲಿ ಕಾಂಗ್ರೆಸ್‌‍, ಪೊಲೀಸರ ಜವಾಬ್ದಾರಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದೇ ಹೊರತು ಸಮಾಜದಲ್ಲಿ ವಿಭಜನೆ ಉಂಟುಮಾಡುತ್ತಿದೆ ಎಂಬ ಆರೋಪ ಎದುರಿಸುತ್ತಿರುವ ಸಂಘಟನೆಗಳನ್ನು ವೈಭವೀಕರಿಸುವುದಲ್ಲ ಎಂದು ಟೀಕಿಸಿದೆ.

ಇತ್ತೀಚೆಗೆ ವಿಶ್ವಾಸ್‌‍ ನಾಂಗ್ರೆ ಪಾಟೀಲ್‌ ಅವರನ್ನು ನಾಗ್ಪುರ ಪೊಲೀಸ್‌‍ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ನಾಗ್ಪುರದಲ್ಲೇ ಆರ್‌ಎಸ್‌‍ಎಸ್‌‍ನ ಕೇಂದ್ರ ಕಚೇರಿ ಇರುವುದನ್ನು ಉಲ್ಲೇಖಿಸಿದ ಕಾಂಗ್ರೆಸ್‌‍, ಅವರು ಮೆಚ್ಚಿಸಲು ಪ್ರಯತ್ನಿಸುತ್ತಿರುವವರನ್ನು ಈಗ ನೇರವಾಗಿ ಸೇವೆ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ ಎಂದು ವ್ಯಂಗ್ಯವಾಡಿದೆ.ಕಾಂಗ್ರೆಸ್‌‍ನ ಈ ಆರೋಪಗಳಿಗೆ ಸಂಬಂಧಿಸಿದಂತೆ ವಿಶ್ವಾಸ್‌‍ ನಾಂಗ್ರೆ ಪಾಟೀಲ್‌ ಅಥವಾ ಮಹಾರಾಷ್ಟ್ರ ಸರ್ಕಾರದಿಂದ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

RELATED ARTICLES

Latest News