ಬೆಂಗಳೂರು, ಆ.11- ಬರ ನಿರ್ವಹಣೆ ಹಾಗೂ ಜನಪರ ಆಡಳಿತ ಕುರಿತಂತೆ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದ ಮೂಲಕ ಡಿ.ಕೆ.ಶಿವಕುಮಾರ್ ಅವರು ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳ ಜೊತೆ ಸಂವಾದ ನಡೆಸಿದರು.ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿ ಗಳು ಉಪಸ್ಥಿತರಿದ್ದರು.
ಜಿಲ್ಲಾ ಕೇಂದ್ರಗಳಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲೆ, ತಾಲ್ಲೂಕು, ಹೊಬಳ್ಳಿ ಗ್ರಾಮ ಮಟ್ಟದಿಂದ ಅಧಿಕಾರಿ, ಸಿಬ್ಬಂದಿಗಳು ಆಯಾ ಸ್ಥಳಗಳಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿಯವರೊಂದಿಗೆ ಸಂವಾದ ನಡೆಸಿದರು.
ಈವರೆಗೂ ಡಿ.ಕೆ.ಶಿವಕುಮಾರ್ ಅವರು ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರ ಜೊತೆ ಮೂರು ಬಾರಿ ಸಭೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು, ಸಿಇಓ ಜೊತೆ ಮೊನ್ನೆ ನೇರವಾಗಿ ಎರಡು ಬಾರಿ ವರ್ಚ್ಯುವಲ್ ಮೂಲಕ ಚರ್ಚೆ ನಡೆಸಿದ್ದಾರೆ.ಇದೇ ಮೊದಲ ಬಾರಿಗೆ ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆಗೂ ಮುಖ್ಯಮಂತ್ರಿಯವರು ಸಂವಾದ ನಡೆಸುವ ಮೂಲಕ ಆಡಳಿತ ಸುಧಾರಣೆಗೆ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ರಾಜ್ಯ ಸರ್ಕಾರದ ಪಂಚಖಾತ್ರಿ ಯೋಜನೆಗಳು ಮಹತ್ವಕಾಂಕ್ಷಿ ಯಿಂದ ಕೂಡಿವೆ. ಅವು ಅರ್ಹರಿಗೂ ತಲುಪಬೇಕು. ಅನರ್ಹರನ್ನು ಗುರುತಿಸಿ ಸಮರ್ಪಕ ದಾಖಲೆಗಳ ಮೂಲಕ ಸೌಲಭ್ಯ ಪಡೆಯದಂತೆ ಮನವರಿಕೆ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ. ಬರ ಪರಿಸ್ಥಿತಿ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಕುಡಿಯುವ ನೀರು, ಮೇವು, ಉದ್ಯೋಗದ ಸಮಸ್ಯೆಗಳಾಗದಂತೆ ಕಾಳಜಿವಹಿಸಬೇಕು.
ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ವಿಬಿ-ಜಿರಾಮ್‌ಜಿ ಯೋಜನೆಯನ್ನು ಸಮರ್ಪಕ ವಾಗಿ ಬಳಸಿಕೊಳ್ಳಬೇಕು. ಕೆಲವು ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಯಾಗದೆ, ಜನರು ಬೇರೆ ಕಡೆಗೆ ವಲಸೆ ಹೋಗುತ್ತಿರುವುದು ಕಂಡು ಬರುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಉದ್ಯೋಗ ಸೃಷ್ಟಿಸದ ಪಿಡಿಒಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
ಸಾರ್ವಜನಿಕರ ದಾಖಲೆ ಪತ್ರಗಳ ವಿತರಣೆಯಲ್ಲಿ ವಿಳಂಬ ಮಾಡಬಾರದು. ಭ್ರಷ್ಟಾಚಾರಕ್ಕೆ ಯಾವುದೇ ರೀತಿಯ ಆಸ್ಪದ ಇರುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಕೆಲವು ಜಿಲ್ಲೆಗಳ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸ್ಥಳೀಯ ಸಮಸ್ಯೆಗಳ ಬಗ್ಗೆ ವಿವರಣೆ ಪಡೆದುಕೊಂಡಿದ್ದಾರೆ.
