Homeಬೆಂಗಳೂರುಮರದ ಒಣಗಿದ ಕೊಂಬೆ ಬಿದ್ದು ಕೋಮಾ ಸೇರಿದ ಬೈಕ್ ಸವಾರ..!

ಮರದ ಒಣಗಿದ ಕೊಂಬೆ ಬಿದ್ದು ಕೋಮಾ ಸೇರಿದ ಬೈಕ್ ಸವಾರ..!

Biker falls into coma after falling from a dry tree branch

ಬೆಂಗಳೂರು,ಜೂ.26- ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ ನಡೆದ ದುರ್ಘಟನೆಯಲ್ಲಿ ದ್ವಿಚಕ್ರವಾಹನ ಸವಾರನ ತಲೆಯ ಮೇಲೆ ರಸ್ತೆಬದಿಯ ಮರದ ಒಣಕೊಂಬೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ದೃಶ್ಯಗಳು ಬೆಚ್ಚಿಬೀಳಿಸುವಂತಿವೆ. ಸತೀಶ್‌(52) ಅವರು ಫೈನಾನ್‌್ಸ ಕಲೆಕ್ಷನ್‌ ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಗಾಳಿಯ ಪರಿಣಾಮ ಮರದ ಒಣಗಿದ ಕೊಂಬೆ ಇವರ ತಲೆ ಮೇಲೆ ಬಿದ್ದಿದೆ. ಅವರು ಬೈಕ್‌ ಸಮೇತ ರಸ್ತೆಗೆ ಉರುಳಿ ಬಿದ್ದಿದ್ದಾರೆ.

ಘಟನೆ ಕಂಡ ಸ್ಥಳೀಯರು ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಯಶವಂತಪುರದ ಮಣಿಪಾಲ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರು ತಲೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಮೊದಲ 48 ಗಂಟೆಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಕುಟುಂಬಕ್ಕೆ ತಿಳಿಸಿರುವುದಾಗಿ ತಿಳಿದುಬಂದಿದೆ. ಸತೀಶ್‌ ಅವರು ಸದ್ಯ ಕೋಮಾ ಸ್ಥಿತಿಯಲ್ಲಿದ್ದಾರೆ.

ಘಟನೆಯ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯ ನಿವಾಸಿಗಳು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿರುವ ಒಣಗಿದ ಮರದ ಕೊಂಬೆಗಳ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಸಂಬಂಧಪಟ್ಟ ಅರಣ್ಯ ವಿಭಾಗ ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.

ಸ್ಥಳೀಯರು ರಸ್ತೆ ಬದಿಯ ಅಪಾಯಕಾರಿ ಮರಗಳ ಪರಿಶೀಲನೆ ನಡೆಸಿ, ಒಣಗಿದ ರೆಂಬೆ-ಕೊಂಬೆಗಳನ್ನು ತಕ್ಷಣ ತೆರವುಗೊಳಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

RELATED ARTICLES

Latest News