Homeರಾಜ್ಯRSS ಲೆಕ್ಕ ಕೇಳಿದ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಪ್ರಮೋದ್‌ ಮುತಾಲಿಕ್‌ ವಾಗ್ದಾಳಿ

RSS ಲೆಕ್ಕ ಕೇಳಿದ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಪ್ರಮೋದ್‌ ಮುತಾಲಿಕ್‌ ವಾಗ್ದಾಳಿ

Pramod Muthalik attacks Minister Priyank Kharge for asking for RSS accounts

ಚಿಕ್ಕಮಗಳೂರು, ಜೂ.26- ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಹಾಗೂ ಲೆಕ್ಕ ಕೇಳಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ವಾಗ್ದಾಳಿ ನಡೆಸಿದ್ದಾರೆ.

ಮೂಡಿಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಖರ್ಗೆ ಅವರಿಗೆ ಅವರ ಜವಾಬ್ದಾರಿಯ ಪಾಠವನ್ನು ನೆನಪಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರ ಸಿಕ್ಕ ಕೆಲವೇ ದಿನಗಳಲ್ಲಿ ಪ್ರಿಯಾಂಕ್‌ ಖರ್ಗೆ ಅವರು ಆರ್‌.ಎಸ್‌‍.ಎಸ್‌‍. ರಿಜಿಸ್ಟ್ರೇಷನ್‌ ಹಾಗೂ ಲೆಕ್ಕದ ವಿಚಾರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮುತಾಲಿಕ್‌ ಆರೋಪಿಸಿದರು.

ನೀವು ಕರ್ನಾಟಕದ ಏಳು ಕೋಟಿ ಜನರಿಗೆ ಸಚಿವರಾಗಿದ್ದೀರಿ, ಆದರೆ ಆರ್‌.ಎಸ್‌‍.ಎಸ್‌‍. ದೇಶದ 140 ಕೋಟಿ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಂದು ನೆನಪಿಸಿದ ಅವರು, ನೂರು ವರ್ಷಗಳಿಂದ ಬೆಳೆದು ನಿಂತಿರುವ ಆನೆಯಂತಹ ಸಂಘಟನೆಯ ಮುಂದೆ ನಿಂತು ನೀವು ಹೀಗೆ ಮಾಡು, ಹಾಗೆ ಮಾಡು ಎಂದು ಹೇಳಲು ನೀವು ಯಾರು? ಎಂದು ಪ್ರಶ್ನಿಸಿದ್ದಾರೆ.

ಆರ್‌.ಎಸ್‌‍.ಎಸ್‌‍. ಒಂದು ಅಂತಾರಾಷ್ಟ್ರೀಯ ಸಂಘಟನೆಯಾಗಿದ್ದು, ವಿಶ್ವದ ಸುಮಾರು 140 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾವಿರಾರು ಅನಾಥಶ್ರಮಗಳು, ಶಾಲೆಗಳು ಹಾಗೂ ಗೋಶಾಲೆಗಳ ಮೂಲಕ ನಿರಂತರವಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಸಂಘವು ಎಲ್ಲೂ ನೋಂದಣಿ ಆಗಿಲ್ಲ ಮತ್ತು ಅದನ್ನು ಮಾಡುವ ಅಗತ್ಯವೂ ಇಲ್ಲ, ಇದರಿಂದ ನಿಮಗೇನು ತೊಂದರೆ ಎಂದು ಮುತಾಲಿಕ್‌ ಖಾರವಾಗಿ ಪ್ರಶ್ನಿಸಿದರು.

ಆರ್‌.ಎಸ್‌‍.ಎಸ್‌‍. ಎಲ್ಲಾದರು ಕಾನೂನು ಬಾಹಿರ ಅಥವಾ ದೇಶದ್ರೋಹದ ಚಟುವಟಿಕೆಗಳನ್ನು ನಡೆಸುತ್ತಿದೆಯೇ ಎಂಬುದಕ್ಕೆ ಸಚಿವ ಖರ್ಗೆ ಒಂದೇ ಒಂದು ಉದಾಹರಣೆ ನೀಡಲಿ ಎಂದು ಸವಾಲು ಹಾಕಿದ ಮುತಾಲಿಕ್‌, ಸಂಘಟನೆಯು ಶುದ್ಧ, ಶಾಂತ ಹಾಗೂ ಶಿಸ್ತುಬದ್ಧವಾದ ಸ್ವದೇಶಿ ಚಳುವಳಿಯ ಮೂಲಕ ದೇಶಭಕ್ತಿಯನ್ನು ನಿರ್ಮಿಸುತ್ತಿದೆ ಎಂದರು.

ಸಚಿವರ ಇಂತಹ ಟೀಕೆಗಳು ಮತ್ತು ಬೇಡಿಕೆಗಳು ಅತ್ಯಂತ ಅಸಹ್ಯವಾಗಿದ್ದು, ಪ್ರತಿಯೊಬ್ಬರಿಗೂ ಒಂದು ಮಿತಿ ಇರುತ್ತದೆ ಎಂಬುದನ್ನು ಅರಿತು ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ಹರಿಸುವುದು ಒಳಿತು ಎಂದು ಅವರು ಮೂಡಿಗೆರೆಯಲ್ಲಿ ಕಿಡಿಕಾರಿದ್ದಾರೆ.

RELATED ARTICLES

Latest News