Homeಬೆಂಗಳೂರುಜಿಬಿಎಯಲ್ಲಿ ನಡೆದಿದೆ ಕೋಟಿ ಕೋಟಿ ಲೂಟಿ

ಜಿಬಿಎಯಲ್ಲಿ ನಡೆದಿದೆ ಕೋಟಿ ಕೋಟಿ ಲೂಟಿ

ಬೆಂಗಳೂರು, ಆ.12- ಜಿಬಿಎಯಲ್ಲಿ ಇಬ್ಬರು ನೌಕರರು ತುರ್ತು ವೆಚ್ಚದ ಹೆಸರಿನಲ್ಲಿ ಕೇವಲ ಆರು ತಿಂಗಳಿನಲ್ಲಿ ಒಂದೇ ಕಚೇರಿಯ ಖರ್ಚಿಗೆಂದು 2.76 ಕೋಟಿ ರೂ. ಪಡೆದು ವಂಚಿಸಿರುವ ಘಟನೆಯನ್ನು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಬಹಿರಂಗಗೊಳಿಸಿದ್ದಾರೆ.

ಕಳೆದ 11 ತಿಂಗಳಿನಿಂದ ಅಸ್ತಿತ್ವದಲ್ಲೇ ಇಲ್ಲದ ಕಾರ್ಯಪಾಲಕ ಅಭಿಯಂತರರು (ಯೋಜನೆ) ಪಶ್ಚಿಮ ಎಂಬ ಹುದ್ದೆ ಈಗಾಗಲೇ ರದ್ದುಗೊಂಡಿದೆ. ಹಾಗಿದ್ದರೂ ಸಹ, ದಿನಾಂಕ 29/01/2026 ರಿಂದ 29/07/2026 ರವರೆಗಿನ 6 ತಿಂಗಳ ಅವಧಿಯಲ್ಲಿ ಕಾರ್ಯಪಾಲಕ ಅಭಿಯಂತರರು (ಯೋಜನೆ) ಪಶ್ಚಿಮ ಇವರ ಕಛೇರಿಗೆ ಸಂಬಂಧಿಸಿದಂತೆ ಇತರೆ ಸಾಮಾನ್ಯ ಅಥವಾ ತುರ್ತು ವೆಚ್ಛಗಳು ಹೆಸರಿನಲ್ಲಿ 2,61,63,634/- (ಎರಡು ಕೋಟಿ ಅರವತ್ತೊಂದು ಲಕ್ಷದ ಅರವತ್ತ ಮೂರು ಸಾವಿರದ ಆರು ನೂರಾ ಮೂವತ್ತ ನಾಲ್ಕು) ಗಳಷ್ಟು ಬೃಹತ್‌ ಪ್ರಮಾಣದ ಹಣವನ್ನು ವೆಚ್ಛ ಮಾಡಲಾಗಿದೆ ಎಂಬ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಷ್ಟೂ ಹಣವನ್ನು ನಕಲಿ ಸಂಸ್ಥೆ ಹೆಸರಿಗೆ ಬಿಡುಗಡೆ ಮಾಡಲಾಗಿದೆ ಎಂದು ರಮೇಶ್‌ ಅವರು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಹಾಗೂ ಪಶ್ಚಿಮ ವಲಯ ಆಯುಕ್ತ ಕೆ.ವಿ.ರಾಜೇಂದ್ರ ಅವರಿಗೆ ದೂರು ನೀಡಿದ್ದಾರೆ.

ಈ ಹಿಂದೆ ಇದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುನಿಯಪ್ಪ ಅವರು ನಿವೃತ್ತಿ ಹೊಂದಿದ್ದಾರೆ.ಅದೇ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಉಪ ಹಣಕಾಸು ನಿಯಂತ್ರಕರ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರವಿಕುಮಾರ್‌ ಎಂಬ ಮಹಾ ವಂಚಕ ತನ್ನ ಸೋದರ ಸಂಬಂಧಿಯ ಹೆಸರಿನಲ್ಲಿ ನಕಲಿ ಸಂಸ್ಥೆಗೆ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ.

ಅಲ್ಲದೇ ಇದೇ ರವಿಕುಮಾರ್‌ ಬೇನಾಮಿ ಮಾಲೀಕತ್ವದ ಸಂಸ್ಥೆಗೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಸಹಾಯಕ ಹಣಕಾಸು ನಿಯಂತ್ರಕರ ಕಛೇರಿಯ ಸಾಮಾನ್ಯ ವೆಚ್ಚಗಳು ಮತ್ತು ಗಣಕಯಂತ್ರಗಳ ದುರಸ್ತಿ ವೆಚ್ಛಗಳು ಎಂಬ ಹೆಸರಿನಲ್ಲಿ 17,28,654 ಹಣ ವೆಚ್ಛವಾಗಿದೆ ಎಂದು ದಾಖಲೆ ಸೃಷ್ಟಿಸಿ ಹಣ ಬಿಡುಗಡೆ ಮಾಡಲಾಗಿದೆ.

ಇದೆ ರವಿಕುಮಾರ್‌ ವಿರುದ್ಧ ಈಗಾಗಲೇ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿಯಿಂದ ತನ್ನ ವಂಚಕ ಸಂಸ್ಥೆಗೆ ಸುಮಾರು ಒಂಬತ್ತು ಕೋಟಿ ರೂಪಾಯಿಗಳಷ್ಟು ಬೃಹತ್‌ ಮೊತ್ತವನ್ನು ಬಿಡುಗಡೆ ಮಾಡಿರುವ ಸಂಬಂಧ ಕಳೆದ ವಾರವಷ್ಟೇ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿರುತ್ತದೆ.ಈಗ ಅಂಥದ್ದೇ ಬೃಹತ್‌ ವಂಚನೆಯ ಹಗರಣ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲೂ ಅಂತದ್ದೇ ವಂಚನೆ ಮಾಡಿರುವುದನ್ನು ರಮೇಶ್‌ ಪತ್ತೆ ಹಚ್ಚಿದ್ದಾರೆ.

ಮುನಿಯಪ್ಪ ಮತ್ತು ರವಿಕುಮಾರ್‌ ಅವರು ಸೇರಿಕೊಂಡು ಮಾಡಿರುವ ಕೋಟಿ ಕೋಟಿ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ವಂಚನೆಯಾಗಿರುವ ಹಣವನ್ನು ಅವರಿಂದಲೇ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಮೇಶ್‌ ಆಗ್ರಹಿಸಿದ್ದಾರೆ.

RELATED ARTICLES
spot_img

Latest News