ಮುಂಬೈ, ಆ. 12 -ಇಲ್ಲಿನ ವಿಲೆ ಪಾರ್ಲೆ ಪ್ರದೇಶದ 12 ಅಂತಸ್ತಿನ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮಗು ಮತ್ತು ಮಹಿಳೆ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.ಕಳೆದ ರಾತ್ರಿ ಸುಮಾರ ಶಾಂತಾಭವನ ಕಟ್ಟಡದ 11ನೇ ಮಹಡಿಯಲ್ಲಿರುವ ಎರಡು ಫ್ಲ್ಯಾಟ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ಸುಮಾರು 4,000 ಚದರ ಅಡಿ ಪ್ರದೇಶದಲ್ಲಿದ್ದ ಎರಡು ಮನೆಗಳ ವಿದ್ಯುತ್ ತಂತಿಗಳು, ವಿದ್ಯುತ್ ಉಪಕರಣಗಳು, ಹವಾನಿಯಂತ್ರಣ ಘಟಕ (ಎಸಿ) ಹಾಗೂ ಇತರ ಗೃಹೋಪಯೋಗಿ ವಸ್ತುಗಳಿಗೆ ಬೆಂಕಿ ವ್ಯಾಪಿಸಿತ್ತು ಎಂದು ಬೃಹನುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿ ಅವಘಡದಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದು, ಅವರನ್ನು ಎರಡು ಆಸ್ಪತ್ರೆಗಳಿಗೆ ದಾಖಲಿಸಲಾಯಿತು.ಎರಡೂವರೆ ವರ್ಷದ ಅಬೀರ್ ಎಂಬ ಮಗು ಹಾಗೂ ಅಂಕಿತಾ (23) ಎಂಬ ಮಹಿಳೆಯನ್ನು ನಾನಾವತಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡಿದ್ದ ಇತರ ನಾಲ್ವರಿಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ.
ಗಾಯಗೊಂಡ ಅಗ್ನಿಶಾಮಕ ಸಿಬ್ಬಂದಿ ಮನೋಜ್ ಸೋನವಣೆ (30) ಮತ್ತು ಶಿವ ದ್ವಿವೇದಿ (29) ಅವರನ್ನು ಸಮೀಪದ ಕೂಪರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಬಳಿಕ ಇಬ್ಬರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿ ಅವಘಡದ ಮಾಹಿತಿ ದೊರೆತ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಇಂದು ಮುಂಜಾನೆ 1 ಗಂಟೆ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು.ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
