ಸಿಯೋಲ್, ಜೂ.26- ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರು ದೇಶದ ಸೇನೆಯ ಮಾರಕ ಮತ್ತು ವಿನಾಶಕಾರಿ ಆಕ್ರಮಣಕಾರಿ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವಂತೆ ಕರೆ ನೀಡಿರುವ ಬೆನ್ನಲ್ಲೇ, ದಕ್ಷಿಣ ಕೊರಿಯಾ ತನ್ನ ಡ್ರೋನ್ ಯುದ್ಧ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವುದಾಗಿ ಘೋಷಿಸಿದೆ.
ಕೊರಿಯಾ ಪರ್ಯಾಯ ದ್ವೀಪದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಮತ್ತು ಸಾಂಪ್ರದಾಯಿಕ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ವಿಸ್ತರಿಸುತ್ತಿದ್ದು, ಅಮೆರಿಕ ಮತ್ತು ದಕ್ಷಿಣ ಕೊರಿಯಾದೊಂದಿಗೆ ಮಾತುಕತೆ ನಡೆಸಲು ನಿರಾಕರಿಸುತ್ತಿದೆ. ಉತ್ತರ ಕೊರಿಯಾದ ಅಧಿಕೃತ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆ ಸಿ ಎನ್ ಎ) ಪ್ರಕಾರ, ಕಿಮ್ ಜಾಂಗ್ ಉನ್ ಗುರುವಾರ ಹಲವು ಪ್ರಮುಖ ಶಸಾ್ತ್ರಸ್ತ್ರಗಳ ಪರೀಕ್ಷೆಯನ್ನು ವೀಕ್ಷಿಸಿದರು.
ಈ ಪರೀಕ್ಷೆಗಳಲ್ಲಿ ವಿಶೇಷ ಕಾರ್ಯಾಚರಣೆಗಾಗಿ ರೂಪಿಸಲಾದ ಟ್ಯಾಕ್ಟಿಕಲ್ ಬ್ಯಾಲಿಸ್ಟಿಕ್ ಕ್ಷಿಪಣಿಯ ವಾರ್ಹೆಡ್, ಸುಧಾರಿತ ಬಹು ರಾಕೆಟ್ ಉಡಾವಣಾ ವ್ಯವಸ್ಥೆ ಹಾಗೂ ದೂರದ ಗುರಿಗಳನ್ನು ನಿಖರವಾಗಿ ಹೊಡೆಯಬಲ್ಲ ಸ್ವಯಂ ಚಾಲಿತ ಹೊವಿಟ್ಜರ್ ಗನ್ನ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು.
ಶತ್ರುಗಳಲ್ಲಿ ಭಯ ಮೂಡಿಸುವ ಸಾಮರ್ಥ್ಯ ಬೇಕು:
ಪರೀಕ್ಷೆಗಳು ದಕ್ಷಿಣ ಗಡಿ ಪ್ರದೇಶಗಳಲ್ಲಿ ಉತ್ತರ ಕೊರಿಯಾದ ದಾಳಿ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ತಾಂತ್ರಿಕ ಪ್ರಗತಿ ಸಾಧಿಸಿರುವುದನ್ನು ಸಾಬೀತುಪಡಿಸಿವೆ ಎಂದು ಕಿಮ್ ಹೇಳಿದ್ದಾರೆ. ಯಾವುದೇ ಶತ್ರು ಎದುರಿಸಲು ಧೈರ್ಯ ಮಾಡದಂತಹ ಮಾರಕ ಮತ್ತು ವಿನಾಶಕಾರಿ ಆಕ್ರಮಣಕಾರಿ ಸಾಮರ್ಥ್ಯವನ್ನು ಹೊಂದಿರುವುದು ನಮ ಆತರಕ್ಷಣಾ ನೀತಿಯ ಪ್ರಮುಖ ಗುರಿಯಾಗಿದೆ. ಶತ್ರುಗಳಲ್ಲಿ ಸದಾ ಭಯ ಮತ್ತು ಆತಂಕವನ್ನು ಮೂಡಿಸುವುದೇ ಯುದ್ಧ ನಿರೋಧಕ ತಂತ್ರದ ಪ್ರಮುಖ ಭಾಗ ಎಂದು ಕಿಮ್ ಹೇಳಿರುವುದಾಗಿ ಕೆಸಿಎನ್‌ಎ ವರದಿ ಮಾಡಿದೆ.
ಪರೀಕ್ಷಿಸಲಾದ ವಿಶೇಷ ಯುದ್ಧ ಸಲಕರಣೆಗಳನ್ನು ಶತ್ರುಗಳ ವಾಯುನೆಲೆಗಳು, ಬಂದರುಗಳು ಹಾಗೂ ವಿದ್ಯುತ್ ಉತ್ಪಾದನಾ ಕೇಂದ್ರಗಳಂತಹ ಪ್ರಮುಖ ಗುರಿಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ ಎಂದು ಉತ್ತರ ಕೊರಿಯಾ ತಿಳಿಸಿದೆ.
ಡ್ರೋನ್ ಪಡೆ ಬಲಪಡಿಸಲು ದಕ್ಷಿಣ ಕೊರಿಯಾ ಯೋಜನೆ:
ಇದರ ಬೆನ್ನಲ್ಲೇ ದಕ್ಷಿಣ ಕೊರಿಯಾ ರಕ್ಷಣಾ ಸಚಿವಾಲಯವು ತನ್ನ ಡ್ರೋನ್ ಯುದ್ಧ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ವಿಸ್ತರಿಸುವ ಯೋಜನೆ ಪ್ರಕಟಿಸಿದೆ. ರಕ್ಷಣಾ ಸಚಿವ ಆನ್ ಗ್ಯೂ-ಬ್ಯಾಕ್ ಅವರ ಪ್ರಕಾರ, ಯೋಜನೆಯಡಿ, ದೀರ್ಘ ವ್ಯಾಪ್ತಿಯ ಸ್ಫೋಟಕ ಡ್ರೋನ್‌ಗಳ ಅಭಿವೃದ್ಧಿ, 20 ಸಾವಿರಕ್ಕೂ ಹೆಚ್ಚು ಕಡಿಮೆ ವೆಚ್ಚದ ಕಣ್ಗಾವಲು ಮತ್ತು ದಾಳಿ ಡ್ರೋನ್‌ಗಳ ಖರೀದಿ, ಸೇನೆ, ನೌಕಾಪಡೆ, ವಾಯುಪಡೆ ಹಾಗೂ ನೌಕಾ ಕಮಾಂಡೋ ಸೇರಿ 5 ಲಕ್ಷ ಸೈನಿಕರಿಗೆ ಡ್ರೋನ್ ಯೋಧರು ಎಂಬ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ.
ಉತ್ತರ ಕೊರಿಯು ರಷ್ಯಾದಿಂದ ಡ್ರೋನ್ ಹಾಗೂ ಇತರ ಯುದ್ಧ ತಂತ್ರಜ್ಞಾನ ಸಹಾಯ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಬದಲಾಗುತ್ತಿರುವ ಯುದ್ಧ ತಂತ್ರಕ್ಕೆ ತಕ್ಕಂತೆ ದಕ್ಷಿಣ ಕೊರಿಯೂ ಸಜ್ಜಾಗಬೇಕಿದೆ ಎಂದು ಅವರು ಹೇಳಿದ್ದಾರೆ.ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕಡಿಮೆ ವೆಚ್ಚದ ಡ್ರೋನ್‌ಗಳು ಅತ್ಯಂತ ಪರಿಣಾಮಕಾರಿ ಶಸ್ತ್ರಾಸ್ತ್ರಗಳಾಗಿ ಹೊರಹೊಮಿವೆ. ಇದೇ ಅನುಭವವನ್ನು ಆಧರಿಸಿ ದಕ್ಷಿಣ ಕೊರಿಯಾ ತನ್ನ ಪ್ರತಿಯೊಬ್ಬ ಸೈನಿಕನಿಗೂ ವೈಯಕ್ತಿಕ ಶಸ್ತ್ರಾಸ್ತ್ರ ಬಳಸುವಷ್ಟೇ ಸುಲಭವಾಗಿ ಡ್ರೋನ್ಗಳನ್ನು ನಿರ್ವಹಿಸುವ ತರಬೇತಿ ನೀಡಲು ಮುಂದಾಗಿದೆ.
ಅಣ್ವಸ್ತ್ರ ಸಾಮರ್ಥ್ಯ ವಿಸ್ತರಣೆಗೆ ಒತ್ತು:
2019ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಅವರೊಂದಿಗಿನ ಮಾತುಕತೆ ವಿಫಲವಾದ ಬಳಿಕ ಕಿಮ್ ಜಾಂಗ್ ಉನ್ ಅಣ್ವಸ್ತ್ರ ಹಾಗೂ ಕ್ಷಿಪಣಿ ಸಾಮರ್ಥ್ಯವನ್ನು ವೇಗವಾಗಿ ವಿಸ್ತರಿಸುವತ್ತ ಗಮನಹರಿಸಿದ್ದಾರೆ. ಜೊತೆಗೆ ಅತ್ಯಾಧುನಿಕ ಸಾಂಪ್ರದಾಯಿಕ ಶಸಾ್ತ್ರಸ್ತ್ರಗಳ ಅಭಿವೃದ್ಧಿಗೂ ಆದ್ಯತೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಉತ್ತರ ಕೊರಿಯಾ 5 ಸಾವಿರ ಟನ್ ಸಾಮರ್ಥ್ಯದ ಚೋಯೆ ಹ್ಯೋನ್ ಯುದ್ಧನೌಕೆಯನ್ನು ಸೇವೆಗೆ ಸೇರ್ಪಡೆಗೊಳಿಸಿದ್ದು, ಇದನ್ನು ದೇಶದ ಅತ್ಯಾಧುನಿಕ ಯುದ್ಧನೌಕೆ ಎಂದು ಕಿಮ್ ಬಣ್ಣಿಸಿದ್ದಾರೆ.
ಅಮೆರಿಕದೊಂದಿಗೆ ಮಾತುಕತೆಗೆ ಷರತ್ತು:
ಅಮೆರಿಕದೊಂದಿಗೆ ಮಾತುಕತೆ ಪುನರಾರಂಭಿಸಲು ಸಿದ್ಧವಿದ್ದರೂ, ಉತ್ತರ ಕೊರಿಯಾ ಅಣ್ವಸ್ತ್ರ ತ್ಯಜಿಸಬೇಕು ಎಂಬ ಷರತ್ತನ್ನು ಅಮೆರಿಕ ಕೈಬಿಟ್ಟರೆ ಮಾತ್ರ ಸಂವಾದ ಸಾಧ್ಯ ಎಂದು ಕಿಮ್ ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಕೊರಿಯಾವನ್ನು ತಮ ದೇಶದ ಪ್ರಮುಖ ಶತ್ರು ಎಂದು ಘೋಷಿಸಿರುವ ಅವರು, ಉಭಯ ದೇಶಗಳ ಗಡಿಯುದ್ದಕ್ಕೂ ಹೊಸ ಸೇನಾ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಉಕ್ರೇನ್ ಯುದ್ಧದಲ್ಲಿ ರಷ್ಯಾಕ್ಕೆ ಬೆಂಬಲ ನೀಡುವ ಮೂಲಕ ಕಿಮ್ ಜಾಂಗ್ ಉನ್ ರಷ್ಯಾದೊಂದಿಗೆ ಸಂಬಂಧವನ್ನು ಮತ್ತಷ್ಟು ಬಲಪಡಿಸಿದ್ದಾರೆ. ಇತ್ತೀಚೆಗಷ್ಟೇ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಕೂಡ ಏಳು ವರ್ಷಗಳ ಬಳಿಕ ಉತ್ತರ ಕೊರಿಯಾಕ್ಕೆ ಭೇಟಿ ನೀಡಿ ಕಿಮ್ ಅವರೊಂದಿಗೆ ಮಾತುಕತೆ ನಡೆಸಿದ್ದರು.
