Homeರಾಜ್ಯನಾಡಿನಾದ್ಯಂತ ಸಂಭ್ರಮದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

ನಾಡಿನಾದ್ಯಂತ ಸಂಭ್ರಮದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

Nadaprabhu Kempegowda Jayanti celebrated with enthusiasm across the state

ಬೆಂಗಳೂರು, ಜೂ.27- ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಬೆಂಗಳೂರು ಸೇರಿದಂತೆ ನಾಡಿನಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಜಿಬಿಎ, ಬಿಡಿಎ, ನಾಡಪ್ರಭು ಕೆಂಪೇಗೌಡರ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಕಾರ್ಯಕ್ರಮಗಳ ಮೆರಗು ಹೆಚ್ಚಿಸಿದರು.

ಮುಖ್ಯಮಂತ್ರಿಯವರು ಬೆಳಗ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿರುವ ಪ್ರತಿಮೆಗೆ ಹಾಗೂ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ನಂತರ ಬೆಂಗಳೂರಿನ ಚಲ್ಲಘಟ್ಟ ಕೆಂಪೇಗೌಡ ಬಡಾವಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌‍.ಎಂ.ಕೃಷ್ಣ ದಶಪಥ ರಸ್ತೆ ಲೋಕಾರ್ಪಣೆ ಮಾಡಿದರು. 600 ಕೋಟಿ ರೂಪಾಯಿಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಿರುವ 10.7 ಕಿ.ಲೋ. ಮೀಟರ್‌ ಉದ್ಧದ ಈ ರಸ್ತೆಯಲ್ಲಿ ಸಂಪೂರ್ಣ ಉಚಿತ ಸಂಚಾರಕ್ಕೆ ಅವಕಾಶವಿದ್ದು, ಈವರೆಗೂ ಟೂಲ್‌ ನೀಡಿ ಪ್ರಯಾಣಿಸಬೇಕಾಗಿದ್ದ ನೈಸ್‌‍ ರಸ್ತೆಗೆ ಪರ್ಯಾಯವಾಗಿದೆ. ಮೂರು ಕೆಳಸೇತುವೆ, 11 ಮೇಲ್ಸೆತುವೆ, 270 ಮೀಟರ್‌ ಉದ್ಧದ ಸುರಂಗ ಮಾರ್ಗ ಹೊಂದಿದೆ. ಆರು ಪಥ ಮುಖ್ಯ ರಸ್ತೆ, ನಾಲ್ಕು ಪಥ ಸರ್ವಿಸ್‌‍ ರಸ್ತೆಗಳನ್ನು ಸೇರಿ ಒಟ್ಟು 10 ಪಥಗಳನ್ನು ಹೊಂದಿದೆ. ಇಂದು ಬೆಳಗ್ಗೆ ಆಯೋಜಿಸಲಾಗಿದ್ದ 10 ಕೆ ರನ್‌, 5ಕೆ ಮ್ಯಾರಥಾನ್‌ ಮೂಲಕ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ನಾಡಪ್ರಭು ಕೆಂಪೇಗೌಡ ಅವರ 517ನೇ ಜನ ದಿನಾಚರಣೆಯ ಅಂಗವಾಗಿ ಕೆಂಪೇಗೌಡರ ಸಾರಕ ಅನಾವರಣಗೊಳಿಸಲಾಗಿದೆ.ಚಲ್ಲಘಟ್ಟ ಸುತ್ತಮುತ್ತಾ 15 ಲಕ್ಷ ಸಸಿಗಳನ್ನು ನೆಟ್ಟು 250 ಎಕರೆಯನ್ನು ಅರಣ್ಯೀಕರಣಗೊಳಿಸುವ ಅಭಿಯಾನಕ್ಕೂ ಮುಖ್ಯಮಂತ್ರಿ ಚಾಲನೆ ನೀಡಿದರು.

ನಾಡಪ್ರಭು ಕೆಂಪೇಗೌಡರ ಸಮಾಧಿ-ಕೆಂಪಾಪುರ-ಮಾಗಡಿ, ಕೆಂಪಾಂಬುಧಿ ಕೆರೆ ಗಡಿಗೋಪುರ, ಲಾಲ್‌ ಬಾಗ್‌ ಗಡಿ ಗೋಪುರ, ಮೇಖ್ರಿ ವೃತ್ತ ಗಡಿ ಗೋಪುರ, ಹಲಸೂರು ಕೆರೆಗಡಿ ಗೋಪುರ, ಅವರಿ ಚೆನ್ನಕೇಶವ ದೇವಾಲಯ, ಹುತ್ರಿದುರ್ಗದ ಬಯಲು ಬಿಸಿಲು ಬಸವಣ್ಣನ ಸ್ಥಳ ಸೇರಿದಂತೆ ಏಳು ಕಡೆಗಳಿಂದ ಆಗಮಿಸಿದ ಪುರಜ್ಯೋತಿಗಳನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಸ್ವೀಕರಿಸಿದರು.

ನಂತರ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಅಂಗವಾಗಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದರು.ನಾಡಿನ ಹಲವೆಡೆ ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಾಡಪ್ರಭು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕೆಂಪೇಗೌಡರ ಆಡಳಿತದಲ್ಲಿ ಜಾರಿಗೊಂಡ ಪ್ರಗತಿ ಪರ ಯೋಜನೆಗಳು ಹಾಗೂ ದೂರದೃಷ್ಟಿ ಕಾರ್ಯಕ್ರಮಗಳ ಕುರಿತು ಗಣ್ಯರು ವಿವರಣೆ ನೀಡಿದರು.ಆದರ್ಶಪ್ರಾಯ ಆಡಳಿತ ನೀಡಿ, ಬೆಂಗಳೂರು ನಿರ್ಮಾಣಕ್ಕೆ ಬುನಾದಿ ಹಾಕಿದ ಕೆಂಪೇಗೌಡರ ಗುಣಗಾನ ಮಾಡಲಾಯಿತು.

ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಪುಷ್ಪ ನಮನ
ಬೆಂಗಳೂರು,ಜೂ.27- ನಾಡಪ್ರಭು ಕೆಂಪೇಗೌಡರ ಆದರ್ಶ, ಮೌಲ್ಯಗಳು ಮತ್ತು ಸೇವಾ ಮನೋಭಾವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎಸ್‌‍.ಆರ್‌. ವಿಶ್ವನಾಥ್‌ ಕರೆ ನೀಡಿದರು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಯಲಹಂಕ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಕ್ಷೇತ್ರದ ಮುಖಂಡರೊಂದಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಬೆಂಗಳೂರು ನಿರ್ಮಾತೃ, ಯಲಹಂಕ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಅಂಗವಾಗಿ ಯಲಹಂಕ ಕ್ಷೇತ್ರದಲ್ಲಿ ಇಂದು ಹಲವಾರು ಕಾರ್ಯಕ್ರಮಗಳನ್ನು ಹಮಿಕೊಳ್ಳಲಾಗಿತ್ತು.

ಕೆಂಪೇಗೌಡರ ದೂರದೃಷ್ಟಿಯ ನಾಯಕತ್ವ, ಆಡಳಿತ ವೈಖರಿ ಹಾಗೂ ಬೆಂಗಳೂರು ನಗರ ನಿರ್ಮಾಣಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸರಿಸಲಾಯಿತು. ಅವರ ಆದರ್ಶ, ಮೌಲ್ಯಗಳು ಮತ್ತು ಸೇವಾ ಮನೋಭಾವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಾಯಕರು ಕರೆ ನೀಡಿದರು.ಈ ಸಂದರ್ಭದಲ್ಲಿ ಯಲಹಂಕ ಕ್ಷೇತ್ರದ ಪ್ರಮುಖ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನಾಡಪ್ರಭು ಕೆಂಪೇಗೌಡರ ಕೊಡುಗೆಗಳು ಸದಾ ಸ್ಮರಣೀಯ : ದೇವೇಗೌಡರು
ಬೆಂಗಳೂರು, ಜೂ.27- ಸರ್ವಧರ್ಮ ಸಮನ್ವಯತೆ ಮೂಲಕ ರಾಜ್ಯದ ರಾಜಧಾನಿ ಬೆಂಗಳೂರಿಗೆ ಭದ್ರ ಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರ ಕೊಡುಗೆಗಳು ಸದಾ ಸ್ಮರಣೀಯ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಶ್ಲಾಘಿಸಿದ್ದಾರೆ.

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಆ ಮಹಾನ್‌ಚೇತನಕ್ಕೆ ನನ್ನ ಪ್ರಣಾಮಗಳು ಎಂದಿದ್ದಾರೆ.ಕೆಂಪೇಗೌಡರ ಜನಪರ ಆಡಳಿತ, ವೈಜ್ಞಾನಿಕ ನಗರ ನಿರ್ಮಾಣ, ಕಲ್ಯಾಣಿ-ಕೆರೆಗಳನ್ನು ಕಟ್ಟಿ ಜಲಸಂರಕ್ಷಣೆಯ ಕಾರ್ಯಗಳು ಅವರ ದೂರದೃಷ್ಟಿಯ ಯೋಜನೆಗಳಿಂದ ಇಂದು ಬೆಂಗಳೂರು ಮಹಾನಗರವನ್ನು ಜಾಗತಿಕ ಭೂಪಟದಲ್ಲಿ ಪ್ರಜ್ವಲಿಸುವಂತೆ ಮಾಡಿದೆ ಎಂದು ಅವರು ಬಣ್ಣಿಸಿದ್ದಾರೆ. ಬೆಂಗಳೂರು ನಿರ್ಮಾತೃ, ಧೀಮಂತ ದೊರೆ ನಾಡಪ್ರಭು ಕೆಂಪೇಗೌಡರ 517ನೇ ಜಯಂತ್ಯೋತ್ಸವದ ಶುಭಾಶಯಗಳನ್ನು ನಾಡಿನ ಸಮಸ್ತರಿಗೆ ಕೋರಿದ್ದಾರೆ.

ದಕ್ಷ ಆಡಳಿತಗಾರ ಕೆಂಪೇಗೌಡ :
ವಿಶ್ವ ವಿಖ್ಯಾತ ಬೆಂಗಳೂರು ನಗರದ ನಿರ್ಮಾತೃ ದಕ್ಷ ಆಡಳಿತಗಾರರೂ ಆಗಿದ್ದ ಕೆಂಪೇಗೌಡರನ್ನು ಅತ್ಯಂತ ಭಕ್ತಿ ಹಾಗೂ ಹೆಮೆಯಿಂದ ಸರಿಸಿ ಗೌರವಿಸುತ್ತೇನೆ ಎಂದು ಹೇಳಿರುವ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿಯವರು ನಾಡಿನ ಸಮಸ್ತ ಜನತೆಗೆ ಕೆಂಪೇಗೌಡರ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ.5 ನೇ ಶತಮಾನಗಳ ಹಿಂದೆ ನಾಡಪ್ರಭುಗಳು ನೆಟ್ಟ ಅಭಿವೃದ್ಧಿಯ ಮರ ಇಂದು ಮಹಾವೃಕ್ಷವಾಗಿ ಬೆಳೆದು ನಿಂತಿದೆ. ಕೃಷಿ, ನೀರಾವರಿ, ನಗರ ನಿರ್ಮಾಣ ಸೇರಿ ಸಮಗ್ರ ಅಭಿವೃದ್ಧಿ ಕುರಿತ ಅವರ ಚಿಂತನೆ, ಆಡಳಿತ, ದೂರದೃಷ್ಟಿ ನಮಗೆ ಸದಾ ಪ್ರೇರಣೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

RELATED ARTICLES

Latest News