Homeಇದೀಗ ಬಂದ ಸುದ್ದಿಜಿಬಿಎ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಭರ್ಜರಿ 'ಬೋನಸ್‌‍' ಸುದ್ದಿ

ಜಿಬಿಎ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಭರ್ಜರಿ ‘ಬೋನಸ್‌‍’ ಸುದ್ದಿ

ಬೆಂಗಳೂರು, ಆ.12- ಕಳೆದ ಮೂರು ವರ್ಷಗಳಿಂದ ಬೋನಸ್‌‍ ಇಲ್ಲದೆ ನಿರಾಸೆಯಲ್ಲಿದ್ದ ಪೌರಕಾರ್ಮಿಕರಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸಿಹಿಸುದ್ದಿ ನೀಡಿದೆ.ಜಿಬಿಎ ವ್ಯಾಪ್ತಿಯ ಐದು ನಗರಪಾಲಿಕೆಗಳಲ್ಲಿ ಒಟ್ಟು ಸುಮಾರು 14 ಸಾವಿರ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಸುಮಾರು 12,600 ಖಾಯಂ ಪೌರಕಾರ್ಮಿಕರು ಹಾಗೂ 1,500 ಗುತ್ತಿಗೆ ಪೌರಕಾರ್ಮಿಕರಿಗೆ ಬೋನಸ್‌‍ ನೀಡಲು ತೀರ್ಮಾನಿಸಲಾಗಿದೆ.

ಪ್ರತಿ ಪೌರಕಾರ್ಮಿಕನಿಗೆ ಸುಮಾರು 22 ಸಾವಿರ ರೂಪಾಯಿ ಬೋನಸ್‌‍ ನೀಡುವ ಪ್ರಸ್ತಾವನೆ ಇದ್ದು, ಇದಕ್ಕಾಗಿ ಜಿಬಿಎಗೆ ಸುಮಾರು 30 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದೆ.
ಕಳೆದ ಎರಡು ತಿಂಗಳಿಂದ ಪೌರಕಾರ್ಮಿಕರು ಜಿಬಿಎ ಮುಖ್ಯ ಆಯುಕ್ತರಿಗೆ ಬೋನಸ್‌‍ ನೀಡುವಂತೆ ಮನವಿ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಬೋನಸ್‌‍ ಸಿಗದ ಹಿನ್ನೆಲೆಯಲ್ಲಿ ಈ ಬಾರಿ ಬೋನಸ್‌‍ ನೀಡಲೇಬೇಕು ಎಂದು ಮನವಿ ಸಲ್ಲಿಸಿದ್ದರು.

ಪೌರಕಾರ್ಮಿಕರ ಮನವಿ ಬೆನ್ನಲ್ಲೇ ಜಿಬಿಎ ಮುಖ್ಯ ಆಯುಕ್ತರು ಹಾಗೂ ಐದು ನಗರಪಾಲಿಕೆಗಳ ಆಯುಕ್ತರು ಸಭೆ ನಡೆಸಿದ್ದು, ಬೋನಸ್‌‍ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ ಹಾಗೂ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಇದೇ ತಿಂಗಳ ಕೊನೆಯ ವಾರದಲ್ಲಿ ಕಾರ್ಯಕ್ರಮ ಆಯೋಜಿಸಲು ಜಿಬಿಎ ಸಿದ್ಧತೆ ನಡೆಸಿದೆ.

ಜಿಬಿಎ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ರಾಜಕುಮಾರ್‌ ಗಾಜಿನಮನೆಯಲ್ಲಿ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದ್ದು, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕೂಡ ಆಗಮಿಸುವ ಸಾಧ್ಯತೆ ಇದೆ.

ಪೌರಕಾರ್ಮಿಕರ ಒಳಿತಿಗಾಗಿ ಈಗಾಗಲೇ ಪಾಲಿಕೆ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದೀಗ ಮೂರು ವರ್ಷಗಳ ಬಳಿಕ ಬೋನಸ್‌‍ ನೀಡಲು ಮುಂದಾಗಿರುವ ಜಿಬಿಎ ಮುಖ್ಯ ಆಯುಕ್ತರ ನಡೆಗೆ ಪೌರಕಾರ್ಮಿಕರು ಫುಲ್‌ ಖುಷಿಯಾಗಿದ್ದಾರೆ.ನಗರದ ಸ್ವಚ್ಛತೆಗಾಗಿ ಹಗಲಿರುಳು ದುಡಿಯುವ ಪೌರಕಾರ್ಮಿಕರಿಗೆ ಮೂರು ವರ್ಷಗಳ ಬಳಿಕ ಬೋನಸ್‌‍ ಸಿಗುವ ನಿರೀಕ್ಷೆ ಮೂಡಿದ್ದು, ಈ ಸಿಹಿಸುದ್ದಿ ಪೌರಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

RELATED ARTICLES
spot_img

Latest News