ಬೆಂಗಳೂರು, ಸೆ.26- ಪ್ರತಿ ಲೀ. ನಂದಿನಿ ಹಾಲಿಗೆ 10 ರೂ. ಬೆಲೆ ಏರಿಸಬೇಕೆಂಬ ಒಕ್ಕೂಟಗಳ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ಮೂಲಕ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿಯೋಗಕ್ಕೆ ಭರವಸೆ ನೀಡಿದ್ದಾರೆ.ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಗೂ ಕೆಎಂಎಫ್‌ನ ನಿರ್ದೇಶಕರ ನಿಯೋಗ ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದೆ.
ಈ ಸಂದರ್ಭದಲ್ಲಿನ ಮಾತುಕತೆಯಲ್ಲಿ ಮುಖ್ಯಮಂತ್ರಿಯವರು ಒಕ್ಕೂಟಗಳ ಪ್ರಸ್ತಾವನೆ ಕುರಿತು ಸಕಾರಾತಕ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ ಏಕಾಏಕಿ 10 ರೂ.ನಷ್ಟು ದರ ಹೆಚ್ಚಿಸಲು ಸಾಧ್ಯವಿಲ್ಲ. ಸಂಪುಟದಲ್ಲಿ ಚರ್ಚಿಸಿ ಗ್ರಾಹಕರಿಗೂ ಹೊರೆಯಾಗದಂತೆ ಹಾಗೂ ಒಕ್ಕೂಟಗಳ ನಷ್ಟವನ್ನು ಸರಿದೂಗಿಸುವ ಪ್ರಮಾಣದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇಂದು ಮಾಜಿ ಸಂಸದ ಹಾಗೂ ಬಮೂಲ್‌ನ ಅಧ್ಯಕ್ಷ ಡಿ.ಕೆ.ಸುರೇಶ್ ನೇತೃತ್ವದಲ್ಲಿ, ಕೋಲಾರದ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಕೆ.ವೈ. ನಂಜೇಗೌಡ, ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್, ಪಾವಗಡದ ಶಾಸಕ ಹಾಗೂ ಕೆಎಂಎಫ್‌ನ ನಿರ್ದೇಶಕ ವೆಂಕಟೇಶ್ ಸೇರಿದಂತೆ ಒಕ್ಕೂಟದ ಪ್ರಮುಖರು ಇಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು. ಸುದೀರ್ಘ ಚರ್ಚೆಯಲ್ಲಿ ಪ್ರತಿ ಲೀ.ನಂದಿನಿ ಹಾಲಿಗೆ ಸರಾಸರಿ 10 ರೂ.ನಷ್ಟು ಬೆಲೆ ಹೆಚ್ಚಿಸಬೇಕು. ಅದರಲ್ಲಿ 7 ರೂ.ಗಳನ್ನು ರೈತರಿಗೆ ನೀಡಿ, ಇನ್ನೂ 3 ರೂ.ಗಳನ್ನು ಒಕ್ಕೂಟದ ಆರ್ಥಿಕ ನಷ್ಟ ಸರಿದೂಗಿಸಲು ಹಂಚಿಕೆ ಮಾಡಬೇಕೆಂದು ಒತ್ತಾಯಿಸಲಾಗಿದೆ.
ಖಾಸಗಿ ಹಾಲು ಮಾರಾಟ ಮಾಡುವ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಶೇ.40ರಷ್ಟು ಪಾಲು ಹೊಂದಿವೆ. ಅವುಗಳ ಬೆಲೆ ನಂದಿನಿ ಹಾಲಿಗಿಂತಲೂ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸಾಗಾಣಿಕೆ ವೆಚ್ಚ, ಜೋಳ, ಹಿಂಡಿ-ಬೂಸಾ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ದುಬಾರಿಯಾಗಿದೆ. ಹೀಗಾಗಿ ಅನಿವಾರ್ಯವಾಗಿ ಹಾಲಿನ ಬೆಲೆ ಏರಿಸಲೇಬೇಕೆಂಬ ಒತ್ತಾಯವನ್ನು ನಿಯೋಗ ಮಾಡಿದೆ.
ಈ ಮೊದಲು 3ರೂ. ಹಾಗೂ 4 ರೂ.ಗಳಂತೆ ಎರಡು ಬಾರಿ ಪ್ರತ್ಯೇಕವಾಗಿ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದೆ. ಆದರೆ ಅದನ್ನು ನೇರವಾಗಿ ರೈತರಿಗೆ ಪಾವತಿಸಲಾಗಿದೆ. ಇದರಿಂದ ಒಕ್ಕೂಟಗಳಿಗೆ ಆಗುತ್ತಿರುವ ನಷ್ಟ ಮುಂದುವರೆದಿದೆ. ಆರ್ಥಿಕ ಸಮಸ್ಯೆಯಿಂದ ಒಕ್ಕೂಟಗಳು ಬಳಲುತ್ತಿವೆ. ಆದನ್ನು ಸರಿದೂಗಿಸಬೇಕಾದರೆ ಹಾಲಿನ ದರವನ್ನು ಹೆಚ್ಚಿಸಿ, ಒಕ್ಕೂಟ ಮತ್ತು ಉತ್ಪಾದಕರಿಗೆ ಹಂಚಿಕೆ ಮಾಡಬೇಕೆಂದು ಸಲಹೆ ನೀಡಲಾಗಿದೆ.
ಪ್ರಸ್ತುತ ಸಂಗ್ರಹವಾಗುತ್ತಿರುವ 1 ಕೋಟಿ ಲೀ. ಹಾಲಿನಲ್ಲಿ 60 ಲಕ್ಷ ಲೀ. ಮಾತ್ರ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲಾಗುತ್ತಿದೆ. ಉಳಿದ 40 ಲಕ್ಷ ಲೀ.ನಲ್ಲಿ ಉಪ ಉತ್ಪನ್ನಗಳನ್ನು ತಯಾರಿಸಿ ನಿಧಾನವಾದ ಮಳಿಗೆ ವ್ಯವಸ್ಥೆಯಿಂದ ಹಣ ಸಂಗ್ರಹಿಸಿ ರೈತರಿಗೆ ನೀಡುತ್ತಿರುವುದಾಗಿ ವಿವರಿಸಿದ್ದಾರೆ.
ನಿಯೋಗದರೊಂದಿಗಿನ ಚರ್ಚೆಯ ವೇಳೆಯಲ್ಲಿ ಮುಖ್ಯಮಂತ್ರಿಯವರು ಸಕಾರಾತಕವಾಗಿ ಸ್ಪಂದಿಸಿದ್ದು, ಇತ್ತೀಚೆಗೆ ನಡೆಸಲಾದ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಎಲ್ಲಾ ಪಕ್ಷದ ಶಾಸಕರು ಹಾಲಿನ ಬೆಲೆ ಹೆಚ್ಚಿಸುವಂತೆ ಒತ್ತಡ ಹೇರಿದ್ದಾರೆ. ಇದರಿಂದ ತಮಗೆ ಒಂದಿಷ್ಟು ನೈತಿಕ ಬಲ ಬಂದಿದೆ. ಗ್ರಾಹಕರಿಗೂ ಹೊರೆಯಾಗದಂತೆ ಹಾಗೂ ಒಕ್ಕೂಟ ಮತ್ತು ರೈತರ ನಷ್ಟ ಸರಿದೂಗಿಸಲು ಮುಂದಿನ ಸಂಪುಟದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್ ಪೆಟ್ರೋಲ್, ಡೀಸೆಲ್ ಬೆಲೆ ದಿನೇ ದಿನೇ ಹೆಚ್ಚಾಗಿದೆ. ಇದಕ್ಕೆ ಯಾರೂ ಪ್ರತಿಭಟನೆ ಮಾಡುವುದಿಲ್ಲ, ಆಕ್ಷೇಪವನ್ನು ವ್ಯಕ್ತಪಡಿಸುವುದಿಲ್ಲ. ಕುಡಿಯುವ ನೀರಿನ ಬೆಲೆ ಲೀ.20 ರೂ.ಗಳಾಗಿದೆ. ಜನ ಅದನ್ನು ಸಹಿಸಿಕೊಳ್ಳುತ್ತಾರೆ. ಆದರೆ ಹಾಲಿನ ಬೆಲೆ ಹೆಚ್ಚಾದಾಗ ಮಾತ್ರ ಗ್ರಾಹಕರಿಗೆ ಹೊರೆ ಎಮದು ಬೊಬ್ಬೆ ಹಾಕಲಾಗುತ್ತದೆ. ರೈತರ ಹಿತದೃಷ್ಟಿಯಿಂದ ಹಾಲಿನ ಬೆಲೆ ಏರಿಕೆ ಅನಿವಾರ್ಯ. ಜನ ಸಹಕರಿಸಬೇಕೆಂದು ಮನವಿ ಮಾಡಿದರು.
ಇಸ್ರೇಲ್ ಮತ್ತು ಇರಾನ್ ಯುದ್ಧದ ಸಂದರ್ಭದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಒಕ್ಕೂಟಗಳು ನಷ್ಟದಲ್ಲಿವೆ. ನಾಲ್ಕೈದು ತಿಂಗಳಿನಿಂದಲೂ ಹಾಲಿನ ಬೆಲೆ ಹೆಚ್ಚಿಸಬೇಕೆಂಬ ಒತ್ತಾಯಗಳು ಕೇಳಿ ಬರುತ್ತಲೇ ಇವೆ. ರಾಜ್ಯಾದ್ಯಂತ ಹಾಲು ಉತ್ಪಾದಕರು ಬೆಂಗಳೂರಿಗೆ ಬಂದು ಪ್ರತಿಭಟನೆ ಮಾಡಿ, 224 ಶಾಸಕರಿಗೆ, 75 ವಿಧಾನಪರಿಷತ್ ಸದಸ್ಯರಿಗೆ ಮನವಿ ನೀಡಿ, ರೈತರ ಬೆಂಬಲಕ್ಕೆ ನಿಲ್ಲುವಂತೆ ಒತ್ತಾಯಿಸಿದರು. ಅದರ ಪರಿಣಾಮವಾಗಿಯೇ ಶಾಸನ ಸಭೆಯಲ್ಲಿ ಚರ್ಚೆ ಮಾಡಿದ ಎಲ್ಲಾ ಶಾಸಕರು ಪಕ್ಷಾತೀತವಾಗಿ ಹಾಲಿನ ಬೆಲೆ ಏರಿಸುವಂತೆ ಒತ್ತಡ ಹಾಕಿದ್ದಾರೆ ಎಂದು ಹೇಳಿದರು.
ಹಾಲಿಗೆ ನೀಡಲಾಗುತ್ತಿರುವ 5 ರೂ.ಗಳ ಬೆಲೆಯನ್ನು ಹೆಚ್ಚಿಸಬೇಕೆಂಬ ವಿಚಾರ ಇಂದು ಚರ್ಚೆಯಾಗಲಿಲ್ಲ ಎಂದು ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದರು.
