ಬೆಂಗಳೂರು, ಸೆ.26- ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ. ಇದರ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ದೂರು ನೀಡುವುದಾಗಿ ಕಾಂಗ್ರೆಸ್‌ಪಕ್ಷದ ಶಾಸಕ ಬಿ.ಆರ್.ಪಾಟೀಲ್ ದೂರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮದೇ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ರೂಪಿಸಿದ್ದ ಬಜೆಟ್ ಅನ್ನು ಬದಲಾವಣೆ ಮಾಡುವಲ್ಲಿಯೂ ಕೆಲವು ಕಾಣದ ಕೈಗಳು ಕೆಲಸ ಮಾಡಿದ್ದವು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತಾನು ಯೋಜನಾ ಆಯೋಗದ ಉಪಾಧ್ಯಕ್ಷನಾಗಿದ್ದೆ. ಬಜೆಟ್ ತಯಾರಿಕೆಯ ಸಭೆಯಲ್ಲಿ ಭಾಗವಹಿಸಿದ್ದೆ.ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ 79ಎ, ಬಿ, ಸಿ ಸೆಕ್ಷನ್‌ಗಳನ್ನು ತೆಗೆದು ಹಾಕುವುದಾಗಿ ಭರವಸೆ ನೀಡಲಾಗಿತ್ತು.
ಈ ಸೆಕ್ಷನ್‌ಗಳಿಂದ ಕೃಷಿಕಲ್ಲದವರು ಭೂಮಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಶ್ರೀಮಂತರು ರೈತರ ಭೂಮಿ ಕಸಿಯುತ್ತಿದ್ದಾರೆ. ಬಡವರು ಭೂಮಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ತಿದ್ದುಪಡಿಯನ್ನು ರದ್ದು ಪಡಿಸಿ ಮೂಲ ಕಾನೂನನ್ನು ಮರು ಸ್ಥಾಪಿಸಲಾಗುತ್ತದೆ ಎಂದು ಕಾಂಗ್ರೆಸ್ ಹೇಳಿತ್ತು.
ಸಿದ್ದರಾಮಯ್ಯ ಬಜೆಟ್ ತಯಾರಿಕೆಯ ವೇಳೆ ಈ ಬಗ್ಗೆ ಚರ್ಚೆಯಾಗಿತ್ತು. ಸಿದ್ದರಾಮಯ್ಯ ಅವರು ಕಾನೂನು ತಿದ್ದುಪಡಿಗೆ ಒಪ್ಪಿದ್ದರು. ಬಜೆಟ್ ಭಾಷಣದ ಪ್ರತಿಯಲ್ಲಿ ಸೇರ್ಪಡೆಯಾಯಿತು. ಸರಿ-ತಪ್ಪುಗಳನ್ನು ಪರಾಮರ್ಶಿಸುವ ಪ್ರೂಫ್ ರೀಡಿಂಗ್ ಮುಗಿಯಿತು. ಕೊನೇ ಕ್ಷಣದಲ್ಲಿ ಮುದ್ರಣಕ್ಕೂ ಹೋಗಿತ್ತು. ಆದರೆ ಬೆಳಗ್ಗೆ ಮಂಡನೆಯಾದ ಬಜೆಟ್‌ನಲ್ಲಿ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಅಂಶ ಇರಲಿಲ್ಲ. ರಾತ್ರೋರಾತ್ರಿ ಕಾಣದ ಕೈಗಳು ಪ್ರಭಾವ ಬೀರಿ ಬದಲಾವಣೆ ಮಾಡಿದ್ದವು ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಸಿದ್ಧಪಡಿಸಿದ್ದ ಬಜೆಟ್ ಅನ್ನು ಬದಲಾವಣೆ ಮಾಡಿದ್ದರ ಹಿಂದೆ ಪ್ರಭಾವಿಗಳ ಕೈವಾಡ ಇತ್ತು ಎಂದು ದೂರಿದರು. ನಂತರ ನಾನು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನಿಡಿದ್ದೆ. ಅದನ್ನು ವಾಪಸ್ ಪಡೆಯಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲ ತಮ ಮನವೊಲಿಸುವ ಪ್ರಯತ್ನ ಮಾಡಿದ್ದರು. ಯಾವ ಪುರುಷಾರ್ಥಕ್ಕೆ ತಾವು ಆಯೋಗದ ಉಪಾಧ್ಯಕ್ಷರಾಗಿರಬೇಕೆಂದು ತಾವು ಅವರನ್ನು ಪ್ರಶ್ನಿಸಿದ್ದಾಗಿ ತಿಳಿಸಿದರು.
ಇದನ್ನು ತಾವು ಇಲ್ಲಿಗೇ ಬಿಡುವುದಿಲ್ಲ, ಎಐಸಿಸಿ ಮುಖಂಡರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿಯವರಿಗೆ ಪತ್ರ ಬರೆಯುತ್ತೇನೆ ಎಂದು ಎಚ್ಚರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಅವರು ಪುನರುಚ್ಚರಿಸಿದರು.
