Homeರಾಜ್ಯಎಐ ಕ್ಯಾಮೆರಾ ಎಡವಟ್ಟು : ಗಿಟಾರ್‌ಗೂ ಹಾಕಬೇಕಂತೆ ಹೆಲ್ಮೆಟ್‌..!

ಎಐ ಕ್ಯಾಮೆರಾ ಎಡವಟ್ಟು : ಗಿಟಾರ್‌ಗೂ ಹಾಕಬೇಕಂತೆ ಹೆಲ್ಮೆಟ್‌..!

ಬೆಂಗಳೂರು, ಸೆ.26- ಸಂಚಾರ ನಿಯಮ ಉಲ್ಲಂಘನೆ ತಡೆಗೆ ಸಿಗ್ನಲ್‌ಗಳಲ್ಲಿ ಅಳವಡಿಸಲಾಗಿರುವ ಎಐ ಕ್ಯಾಮೆರಾಗಳಿಂದ ಎಡವಟ್ಟಿನ ಮೇಲೆ ಎಡವಟ್ಟುಗಳು ನಡೆಯುತ್ತಿದ್ದು, ಇದೀಗ ಗಿಟಾರ್‌ ಅನ್ನು ಹಿಂಬದಿ ಸವಾರನೆಂದು ಪರಿಗಣಿಸಿ ಹೆಲ್ಮೆಟ್‌ ಧರಿಸಿಲ್ಲ ಎಂದು ಚಲನ್‌ ಕಳುಹಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹೆಬ್ಬಾಳದ ಸೌವಿಕ್‌ ದತ್‌ ಎಂಬುವರು ಸ್ಕೂಟರ್‌ನಲ್ಲಿ ಗಿಟಾರ್‌ ಅನ್ನು ಬೆನ್ನಿಗೆ ಹಾಕಿಕೊಂಡು ಟಿನ್‌ ಫ್ಯಾಕ್ಟರಿ ಕಡೆಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ಅಳವಡಿಸಲಾಗಿದ್ದ ಎಐ ಕ್ಯಾಮೆರಾ ಹಿಂಬದಿಯಲ್ಲಿದ್ದ ಗಿಟಾರ್‌ ಅನ್ನು ಹಿಂಬದಿ ಸವಾರನೆಂದು ಗುರುತಿಸಿ, ಹೆಲ್ಮೆಟ್‌ ಧರಿಸಿಲ್ಲ ಎಂದು ದಾಖಲಿಸಿದೆ.

ಇದಕ್ಕೆ ಸಂಬಂಧಿಸಿದ ಫೋಟೋ ಸಮೇತ ಆನ್‌ಲೈನ್‌ನಲ್ಲಿ ಸ್ಕೂಟರ್‌ ಸವಾರನಿಗೆ ಚಲನ್‌ ರವಾನೆಯಾಗಿದೆ. ಚಲನ್‌ ನೋಡಿ ಸೌವಿಕ್‌ ದತ್‌ ಅವರು ಕೆಲಕಾಲ ಅಚ್ಚರಿಗೊಂಡಿದ್ದು, ಎಐ ಕ್ಯಾಮೆರಾದ ಎಡವಟ್ಟಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು, ಸೌವಿಕ್‌ ದತ್‌ ಅವರನ್ನು ತಮ್ಮನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.

ಇದೇ ರೀತಿ ಈ ಹಿಂದೆ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಹೆಲ್ಮೆಟ್‌ ಧರಿಸಿಲ್ಲ ಎಂದು ಎಐ ಕ್ಯಾಮೆರಾ ಸೆರೆಹಿಡಿದು ಚಲನ್‌ ಕಳುಹಿಸಿತ್ತು ಎನ್ನಲಾಗಿದೆ. ಇದೀಗ ಗಿಟಾರ್‌ ಪ್ರಕರಣವೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಎಐ ಕ್ಯಾಮೆರಾದ ಎಡವಟ್ಟು ನಗೆಪಾಟಲಿಗೀಡಾಗಿದೆ.

RELATED ARTICLES
spot_img

Latest News