ಬೆಂಗಳೂರು,ಜೂ.27- ರೈತರ ಸಮುಖದಲ್ಲೇ ಬಿಡದಿ ಟೌನ್ಶಿಪ್ ಯೋಜನೆ ವಿಚಾರ ಇತ್ಯರ್ಥವಾಗಬೇಕು ಎಂದು ಪಟ್ಟು ಹಿಡಿದಿರುವ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಶಿವಕುಮಾರ್ ಅವರಿಗಾಗಿ ಬೈರಮಂಗಲದಲ್ಲಿ ಕಾದು ಕುಳಿತರು.
ಬೈರಮಂಗಲದಲ್ಲಿ ಆಯೋಜಿಸಿದ್ದ ವೇದಿಕೆಯಲ್ಲಿ ಮುಖ್ಯಮಂತ್ರಿಗೆ ಒಂದು ಆಸನ ಕಾಯ್ದಿರಿಸಲಾಗಿತ್ತು. ಮತ್ತೊಂದು ಆಸನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹಸಿರು ಶಾಲು ಹಾಕಿಕೊಂಡು ಆಸೀನರಾಗಿ ದ್ದರು. ಮುಖ್ಯಮಂತ್ರಿಗಾಗಿ ಮೀಸಲಿಟ್ಟ ಆಸನವನ್ನು ವೇದಿಕೆಯಲ್ಲಿ ಖಾಲಿ ಉಳಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಇಂದು ನಾಡಪ್ರಭು ಕೆಂಪೇಗೌಡ ಜಯಂತಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ರೈತರ ಸಮುಖದಲ್ಲಿ ಚರ್ಚೆಗೆ ಬೈರಮಂಗಲಕ್ಕೆ ಆಗಮಿಸಲಿರಲಿಲ್ಲ.
ಚರ್ಚೆಗೆ ಸಿದ್ಧ :
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಡದಿ ಟೌನ್ಶಿಪ್ ವಿಚಾರದಲ್ಲಿ ಪ್ರತಿಷ್ಠೆ ಇಲ್ಲ. ಎಲ್ಲಿಗೆ ಬೇಕಾದರೂ ಚರ್ಚೆಗೆ ಕರೆಯಲಿ ನಾನು ರೈತರನ್ನು ಕರೆದುಕೊಂಡು ಹೋಗುತ್ತೇನೆ ಎಂದರು. ಭೈರಮಂಗಲಕ್ಕೆ ಚರ್ಚೆಗೆ ಬರುವಂತೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದೆ. ಆದರೆ ಅವರು ಇಂದು ಇಲ್ಲಿಗೆ ಇರುವುದಿಲ್ಲ ಎಂಬುದು ಗೊತ್ತಾಗಿದೆ. ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರೂ ರೈತರನ್ನು ಕರೆದುಕೊಂಡು ಹೋಗುತ್ತೇನೆ. ರೈತರ ಸಮುಖದಲ್ಲೇ ಚರ್ಚೆಯಾಗಿ ತೀರ್ಮಾನವಾಗಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ಹೇಳಿದ ಕಡೆ ರೈತರನ್ನು ಕರೆದುಕೊಂಡು ಹೋಗುತ್ತೇನೆ. ಯಾವಾಗ ಬೇಕಾದರೂ ಅವರು ರೈತರೊಂದಿಗಿನ ಸಭೆಗೆ ಆಹ್ವಾನಿಸಲಿ. 2007ರಲ್ಲೇ ರೈತರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡಲಾಗಿದೆ ಎಂದು ಅವರು ಹೇಳಿದರು.
ಕಳೆದ 470 ದಿನಗಳಿಗೂ ಹೆಚ್ಚು ಕಾಲದಿಂದ ಟೌನ್ಶಿಪ್ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶೇ.80ರಷ್ಟು ರೈತರು ಯೋಜನೆಯ ವಿರುದ್ದವಾಗಿದ್ದಾರೆ. ಹೀಗಾಗಿ ರೈತರ ಸಮುಖದಲ್ಲೇ ಯೋಜನೆ ಕುರಿತಂತೆ ಸೂಕ್ತ ನಿರ್ಧಾರವಾಗಬೇಕೆಂಬುದು ಕುಮಾರಸ್ವಾಮಿಯವರ ಒತ್ತಾಯವಾಗಿದೆ.
ಯೋಜನೆ ಕುರಿತ ಚರ್ಚೆಗೆ ವಿಧಾನಸೌಧಕ್ಕೆ ಬರುವಂತೆ ಮುಖ್ಯಮಂತ್ರಿ ಅವರು ಕುಮಾರಸ್ವಾಮಿಗೆ ಆಹ್ವಾನ ನೀಡಿದ್ದರು. ಜೂ.26ರಂದು ತಮಗೆ ಪೂರ್ವ ನಿಯೋಜಿತ ಕಾರ್ಯಕ್ರಮವಿದ್ದು, ವಿಧಾನಸೌಧಕ್ಕೆ ಬರಲಾಗುವುದಿಲ್ಲ. ಇಂದು ಬೈರಮಂಗಲಕ್ಕೆ ಬರುವಂತೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಮುಖ್ಯಮಂತ್ರಿಗಳಿಂದ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಮತ್ತೊಂದು ಪತ್ರ ಬರೆದು ತಮ ಇಂದಿನ ಕಾರ್ಯಕ್ರಮದ ವಿವರವನ್ನು ಕಳುಹಿಸಿದ್ದರು.
ಮುಖ್ಯಮಂತ್ರಿಗಳು ಬರಲು ಸಾಧ್ಯವಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನಾದರೂ ಬೈರಮಂಗಲಕ್ಕೆ ಕಳುಹಿಸಿಕೊಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದರು. ಈ ನಡುವೆ ಕಳೆದೆರಡು ಮೂರು ದಿನಗಳಿಂದ ಬಿಡದಿ ಟೌನ್ಶಿಪ್ ಅನುಷ್ಠಾನವಾಗಬೇಕೆಂದು ಆಗ್ರಹಿಸಿ ಕೆಲವು ರೈತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಬೈರಮಂಗಲದಲ್ಲಿ ಟೌನ್ಶಿಪ್ ಪರ-ವಿರೋಧದ ಪ್ರತಿಭಟನೆಗಳು ಕಾವೇರತೊಡಗಿತ್ತು. ಹೀಗಾಗಿ ಬೈರಮಂಗಲದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕುಮಾರಸ್ವಾಮಿ ಬೈರಮಂಗಲಕ್ಕೆ ಆಗಮನಕ್ಕೂ ಮುಂದೆ ಟೌನ್ಶಿಪ್ ಪರ-ವಿರೋಧದ ಘೋಷಣೆಗಳನ್ನು ಪ್ರತ್ಯೇಕವಾಗಿ ಕೂಗುತ್ತಿದ್ದರು. ಕುಮಾರಸ್ವಾಮಿ ಆಗಮದ ವೇಳೆ ಕೆಲವು ರೈತರು ಹಸಿರು ಬಾವುಟ ತೋರಿಸಿ ಸ್ವಾಗತಿಸಿದರು. ಇನ್ನು ಕೆಲವು ರೈತರು ಕೆಂಪು ಬಾವುಟ ಪ್ರದರ್ಶಿಸಿದರು.
ಯೋಜನೆ ಪರವಾಗಿರುವ ಕೆಲವು ರೈತರು ಪರಿಹಾರಧನ ಹೆಚ್ಚಳ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಬೈರಮಂಗಲದಲ್ಲಿ ಕುಮಾರಸ್ವಾಮಿ ಅವರಿಗೆ ಮಾಜಿ ಶಾಸಕರಾದ ಎ.ಮಂಜುನಾಥ್, ಎಚ್.ಎಂ.ರಮೇಶ್ ಗೌಡ, ಜೆಡಿಎಸ್ ಮುಖಂಡರಾದ ಎಚ್.ಸಿ.ಜಯಮುತ್ತು, ಆರ್.ಪ್ರಕಾಶ್ ಸಾಥ್ ನೀಡಿದರು.
ಟೌನ್ಶಿಪ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ಈಗಾಗಲೇ ಜೆಡಿಎಸ್ ಪಾದಯಾತ್ರೆ ನಡೆಸಿ ಬೆಂಬಲ ಸೂಚಿಸಿತ್ತು. ರೈತರ ಬೆಂಬಲಕ್ಕೆ ನಿಂತಿರುವ ಜೆಡಿಎಸ್ ಕಾನೂನು ಹೋರಾಟ ನಡೆಸುವುದಾಗಿ ಈಗಾಗಲೇ ಘೋಷಿಸಿದೆ.
