ಬೆಂಗಳೂರು,ಜೂ.29- ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ರಮವು ನಾಳೆಯಿಂದ ರಾಜ್ಯಾದ್ಯಂತ ಏಕಕಾಲಕ್ಕೆ ಆರಂಭವಾಗಲಿದ್ದು, ಜುಲೈ 29 ರವರೆಗೆ ನಡೆಯಲಿದೆ.ಈ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಮನೆಗೆ ಭೇಟಿ ನೀಡಿ, ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ.
ಮತದಾರರು ಬಿಎಲ್‌ಒಗಳು ಮನೆಗೆ ಭೇಟಿ ನೀಡುವ ವೇಳೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಅರ್ಜಿಯನ್ನು ಪೂರ್ಣಗೊಳಿಸಿದರೆ, ಮತದಾರರ ಪಟ್ಟಿಯಲ್ಲಿ ತಮ ಹೆಸರು ಸರಿಯಾಗಿ ದಾಖಲಾಗಿ ಮತದಾನದ ಹಕ್ಕು ಮುಂದುವರಿಯಲಿದೆ.
ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸುವುದು, ಮೃತಪಟ್ಟಿರುವ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವುದು ಮತ್ತು ಅರ್ಹ ಹೊಸ ಮತದಾರರನ್ನು ಸೇರ್ಪಡೆ ಮಾಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ರಾಜ್ಯದಲ್ಲಿ ಸುಮಾರು 5.55 ಕೋಟಿಗೂ ಅಧಿಕ ಮತದಾರರಿದ್ದು, ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸುಮಾರು 59,050 ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ನಾಳೆ ಬಿಎಲ್‌ಒಗಳು ಎಸ್‌ಐಆರ್ ಅರ್ಜಿಯನ್ನು ನೀಡಲಿದ್ದು, ಮತದಾರರು ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪರಿಶೀಲನೆ, ತಿದ್ದುಪಡಿ, ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯೂ ಇದೇ ಅವಧಿಯಲ್ಲಿ ನಡೆಯಲಿದೆ.
ಈ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಬಲವರ್ಧನೆಗೆ ಸಹಕರಿಸಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ವಿನಂತಿಸಿದ್ದಾರೆ.
ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ನಿಖರಗೊಳಿಸುವುದು ಮತ್ತು ಪಾರದರ್ಶಕವಾದ ಮತದಾನ ಪ್ರಕ್ರಿಯೆಯನ್ನು ಖಾತ್ರಿಪಡಿಸುವುದು ಆಯೋಗದ ಆಶಯವಾಗಿದೆ. ಚುನಾವಣಾ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ, ಅಗತ್ಯವಿರುವ ದಾಖಲೆಗಳೊಂದಿಗೆ ಸಹಕರಿಸುವಂತೆ ಚುನಾವಣಾ ಆಯೋಗವು ಮನವಿ ಮಾಡಿದೆ.
ವಿಶೇಷ ಪರಿಷ್ಕರಣೆಯ ಮಹತ್ವ
ಪ್ರಜಾಪ್ರಭುತ್ವದ ಅಸ್ತಿಭಾರವೇ ಮತದಾನ. ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಮತದಾರರ ಪಟ್ಟಿಯನ್ನು ನಿಖರಗೊಳಿಸಲು ಭಾರತೀಯ ಚುನಾವಣಾ ಆಯೋಗವು ಕಾಲಕಾಲಕ್ಕೆ ೞಮತದಾರರ ಪಟ್ಟಿ ವಿಶೇಷ ಪರಿಷ್ಕರಣೆೞಯನ್ನು ಕೈಗೊಳ್ಳುತ್ತದೆ.ಸುಸ್ಥಿರ ಮತ್ತು ಪಾರದರ್ಶಕ ಚುನಾವಣಾ ಪ್ರಕ್ರಿಯೆಗೆ ಇದು ಅತೀ ಅಗತ್ಯವಾದ ಕಾರ್ಯಕ್ರಮವಾಗಿದೆ.
ಮತದಾರರ ಪಟ್ಟಿಯು ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ನವೀಕರಣಗೊಳ್ಳುವುದು ಅತ್ಯಗತ್ಯ.
ನಿಖರವಾದ ದತ್ತಾಂಶ: ಮೃತಪಟ್ಟವರು, ಸ್ಥಳಾಂತರಗೊಂಡವರು ಮತ್ತು ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿದವರನ್ನು ಪಟ್ಟಿಯಿಂದ ತೆಗೆದುಹಾಕಿ, ಪಟ್ಟಿಯನ್ನು ದೋಷರಹಿತವಾಗಿಸುವುದು.
ಅರ್ಹತೆ ಪಡೆದ ಯುವ ಮತದಾರರು ಮತ್ತು ವಲಸಿಗರು ತಮ ಹೆಸರನ್ನು ನೋಂದಾಯಿಸಿಕೊಳ್ಳಲು ಇದು ಸುವರ್ಣ ಅವಕಾಶವಾಗಿದೆ.
ವಿವಾಹವಾದ ಮಹಿಳೆಯರು ಅಥವಾ ಸ್ಥಳಾಂತರಗೊಂಡ ವ್ಯಕ್ತಿಗಳು ತಮ ಹೊಸ ವಿಳಾಸಕ್ಕೆ ಅನುಗುಣವಾಗಿ ಮಾಹಿತಿ ಬದಲಾಯಿಸಿಕೊಳ್ಳಲು ಸಹಕಾರಿಯಾಗುತ್ತದೆ.ಮತದಾರರ ಪಟ್ಟಿ ನಿಖರವಾಗಿದ್ದಾಗ ಮಾತ್ರ ನೈಜ ಮತದಾನ ನಡೆಯಲು ಸಾಧ್ಯ, ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ.?ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ತನ್ನ ಜವಾಬ್ದಾರಿಯನ್ನು ಅರಿತು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸಬೇಕು:
ಆಯೋಗದ ಅಧಿಕೃತ ವೆಬ್‌ಸೈಟ್ ಅಥವಾ ಮೂಲಕ ತಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.18 ವರ್ಷ ತುಂಬಿದ ಪ್ರತಿಯೊಬ್ಬ ಅರ್ಹ ನಾಗರಿಕನು ತಪ್ಪದೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಅಪೂರ್ಣ ಮಾಹಿತಿ ಸರಿಪಡಿಸುವುದು:
ತಮ ಹೆಸರು, ವಿಳಾಸ ಅಥವಾ ವಯಸ್ಸಿನಲ್ಲಿ ಯಾವುದೇ ತಪ್ಪುಗಳಿದ್ದಲ್ಲಿ, ಸೂಕ್ತ ದಾಖಲೆಗಳನ್ನು ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳಬೇಕು.ತಮ ಬೂತ್ ವ್ಯಾಪ್ತಿಯಲ್ಲಿ ಮೃತಪಟ್ಟವರು ಅಥವಾ ಅರ್ಹತೆಯಿಲ್ಲದವರು ಹೆಸರು ಹೊಂದಿದ್ದರೆ, ಆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಪಟ್ಟಿಯನ್ನು ಶುದ್ಧೀಕರಿಸಲು ಸಹಕರಿಸಬೇಕು.
ಜಾಗೃತಿ ಮೂಡಿಸುವುದು:
ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ನೆರೆಹೊರೆಯವರಿಗೆ ವಿಶೇಷ ಪರಿಷ್ಕರಣೆಯ ಕುರಿತು ಮಾಹಿತಿ ನೀಡಿ, ಅವರನ್ನು ನೋಂದಾಯಿಸಲು ಪ್ರೇರೇಪಿಸಬೇಕು.
ಚುನಾವಣಾ ಆಯೋಗವು ತಂತ್ರಜ್ಞಾನದ ಮೂಲಕ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಮತದಾರರು voters.eci.gov.in ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅಥವಾ Voter Helpline App ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಆನ್‌ಲೈನ್‌ನಲ್ಲಿಯೇ ಅಗತ್ಯ ಅರ್ಜಿಗಳನ್ನು ಸಲ್ಲಿಸಬಹುದು.
ಒಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಭಾಗವಹಿಸಿ, ತಮ ಪ್ರಜಾಸತ್ತಾತಕ ಹಕ್ಕನ್ನು ಕಾಪಾಡಿಕೊಳ್ಳಬೇಕು.ಚುನಾವಣಾ ಆಯೋಗದ ಸೂಚನೆಯಂತೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಯನ್ನು ಸಲ್ಲಿಸುವುದು ಅತ್ಯಂತ ಮುಖ್ಯವಾಗಿದೆ. ಅರ್ಜಿ ಸಲ್ಲಿಸದಿದ್ದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಯದಿರುವ ಸಾಧ್ಯತೆ ಇರುವುದರಿಂದ, ಮತದಾನದ ಹಕ್ಕಿನ ಮೇಲೂ ಪರಿಣಾಮ ಬೀಳಬಹುದು.
ಪರಿಷ್ಕರಣೆ ವೇಳಾಪಟ್ಟಿ
ಜೂನ್ 30-ಜುಲೈ 29: ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ
ಆಗಸ್ಟ್ 5: ಕರಡು ಮತದಾರರ ಪಟ್ಟಿ ಪ್ರಕಟಣೆ
ಆಗಸ್ಟ್ 5- ಸೆಪ್ಟೆಂಬರ್ 4: ಕರಡು ಪಟ್ಟಿಗೆ ಆಕ್ಷೇಪಣೆ ಮತ್ತು ಸಲಹೆ ಸಲ್ಲಿಕೆ
ಆಗಸ್ಟ್ 5 -ಅಕ್ಟೋಬರ್ 3: ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ ಹಾಗೂ ವಿಲೇವಾರಿ
ಅಕ್ಟೋಬರ್ 7: ಅಂತಿಮ ಮತದಾರರ ಪಟ್ಟಿ ಪ್ರಕಟ
ದಾಖಲೆಗಳು
ಕುಟುಂಬದ ಸದಸ್ಯರ ಗುರುತಿನ ಚೀಟಿ
ಮತದಾರರ ಗುರುತಿನ ಚೀಟಿ
ಆಧಾರ್ ಕಾರ್ಡ್
ವಿಳಾಸ ದೃಢೀಕರಣ ದಾಖಲೆ
ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
