Homeರಾಜ್ಯಬರ ಪೀಡಿತ ತಾಲ್ಲೂಕುಗಳನ್ನು ಘೋಷಿಸಿ, 5 ಕೋಟಿ ಅನುದಾನ ನೀಡಲು ಒತ್ತಾಯ

ಬರ ಪೀಡಿತ ತಾಲ್ಲೂಕುಗಳನ್ನು ಘೋಷಿಸಿ, 5 ಕೋಟಿ ಅನುದಾನ ನೀಡಲು ಒತ್ತಾಯ

Demand to declare drought-hit taluks and provide Rs 5 crore grant

ಬೆಂಗಳೂರು, ಜೂ. 29- ರಾಜ್ಯಾದ್ಯಂತ ಮಳೆ ಕೊರತೆಯಿಂದಾಗಿ ಕುಡಿಯುವ ನೀರಿನ ಅಭಾವ ತೀವ್ರವಾಗಿದ್ದು, ಪ್ರತಿ ಕ್ಷೇತ್ರಕ್ಕೂ ಕನಿಷ್ಠ 5 ಕೋಟಿ ರೂ. ಹಣ ಬಿಡುಗಡೆ ಮಾಡಬೇಕು ಅಥವಾ ಬರ ಪೀಡಿತ ತಾಲ್ಲೂಕುಗಳನ್ನು ಘೋಷಣೆ ಮಾಡಬೇಕು ಎಂಬ ಒತ್ತಡ ಹೆಚ್ಚಾಗಿದೆ.

ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ರೀತಿಯ ಆರೋಪಗಳು ಕೇಳಿ ಬಂದಿದ್ದವು. ಆದರೆ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಶಾಸಕರ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಿ, ಸಮಾಧಾನ ಪಡಿಸಿದರು. ಹೀಗಾಗಿ ವಾತಾವರಣ ತಿಳಿಯಾಗುತ್ತಿತ್ತು. ಇದರ ನಡುವೆಯೂ ಶಾಸಕ ಬಿ.ಆರ್‌. ಪಾಟೀಲ್‌ ಸೇರಿದಂತೆ ಕೆಲವರ ಹೇಳಿಕೆಗಳು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದವು.

ಕಳೆದ ಮೂರು ವರ್ಷಗಳಿಂದಲೂ ರಾಜ್ಯದಲ್ಲಿ ಮಳೆ ಕೊರತೆ ಇರಲಿಲ್ಲ, 2023ರಲ್ಲಿ ಒಂದಿಷ್ಟು ಬರ ಪರಿಸ್ಥಿತಿ ಇತ್ತು. ಅನಂತರ ಮಳೆಯಾಗಿ ವಾತಾವರಣ ತಿಳಿಯಾಯಿತು. ಸಮೃದ್ಧ ಮಳೆಯಿಂದಾಗಿ ಜಲಾಶಯಗಳು ತುಂಬಿ ತುಳುಕುತ್ತಿದ್ದವು. ಈ ಬಾರಿ ದೇಶಾದ್ಯಂತ ಶೇ. 40ರಷ್ಟು ಮಳೆ ಕೊರತೆಯ ನಿರೀಕ್ಷೆಗಳಿವೆ. ಈಗಾಗಲೇ ಮುಂಗಾರು ಬಿತ್ತನೆ ಚಟುವಟಿಕೆಗಳಲ್ಲಿ ಹಿನ್ನಡೆಯಾಗಿದೆ. ಮತ್ತೊಂದೆಡೆ ಅಂತರ್‌ ಜಲಮಟ್ಟ ಕುಸಿದು ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ.

ಬರ ಪರಿಸ್ಥಿತಿ ನಿರ್ವಹಣೆಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ 175 ಕೋಟಿ ರೂ. ಹಣ ಇದೆ ಎಂದು ಸರ್ಕಾರ ಹೇಳುತ್ತಾ ಬಂದಿದೆ, ಆದರೆ ಅದನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈವರೆಗೂ ಬರ ಘೋಷಣೆಯಾಗಿಲ್ಲ. ತಾಂತ್ರಿಕವಾಗಿ ಬರ ಘೋಷಣೆಯಾಗದ ಹೊರತೂ, ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿರುವ ಹಣವನ್ನು ಬಳಕೆ ಮಾಡಲು ಅವಕಾಶವಾಗುವುದಿಲ್ಲ. ಹೀಗಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಜನ ಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

ಪ್ರಕೃತಿ ವಿಕೋಪ ಪರಿಸ್ಥಿತಿಗಳ ಮೇಲುಸ್ತುವರಿಗಾಗಿ ರಾಜ್ಯ ಸರ್ಕಾರ ಸಚಿವರುಗಳಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿ ಜೂ.24ರಂದು ಆದೇಶ ಹೊರಡಿಸಿದೆ. ನಿಯೋಜಿತ ಸಚಿವರು ಆಯಾ ಜಿಲ್ಲೆಗಳಿಗೆ ತೆರಳಿ ಸಭೆಗಳನ್ನು ಮಾಡಬೇಕು. ಭಾದಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ಮಾಡಬೇಕಿದೆ. ಆದರೆ ಈವರೆಗೂ ಸಂಪುಟದ ಯಾವೊಬ್ಬ ಸಚಿವರೂ ಬರ ಅಥವಾ ನೆರೆ ಅಧ್ಯಯನಕ್ಕಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ಉದಾಹರಣೆ ಇಲ್ಲ.

ಸಂಪುಟ ವಿಸ್ತರಣೆಯಾಗದೆ ಪೂರ್ಣ ಪ್ರಮಾಣದಲ್ಲಿ ಸರ್ಕಾರ ರಚನೆಯಾಗಿಲ್ಲ, ಇರುವ 13 ಸಚಿವರ ಪೈಕಿ ಕೆಲವರಿಗೆ ಎರಡೆರಡು ಜಿಲ್ಲೆಗಳನ್ನು ಹಂಚಿಕೆ ಮಾಡಿದರೆ, ಇನ್ನೂ ಕೆಲವರಿಗೆ ನಾಲ್ಕು ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದೆ.

ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಬೀದರ್‌, ಬೆಳಗಾವಿ, ವಿಜಯಪುರ, ಕಲಬುರಗಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿತ್ತಿದ ಬೆಳೆಗಳು ಒಣಗಿ ಹೋಗಿವೆ. ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಅಂತರ್‌ ಜಲಮಟ್ಟ ಕುಸಿತದಿಂದ ಬೋರ್‌ವೆಲ್‌ಗಳು ಒಣಗಿ ಹೋಗಿವೆ. ನೀರಿನ ಮೂಲಗಳು ಬತ್ತಿವೆ. ಟ್ಯಾಂಕರ್‌ ಮೂಲಕ ನೀರು ಪೂರೈಸಲು, ಬೋರ್‌ವೆಲ್‌ಗಳನ್ನು ಪುನಃಶ್ಚೇತನಗೊಳಿಸಲು ಹಣಕಾಸಿನ ತುರ್ತು ಅಗತ್ಯ ಇದೆ ಎಂದು ಶಾಸಕರು ಒತ್ತಡ ಹೇರುತ್ತಿದ್ದಾರೆ.

ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಸಿಗುತ್ತಿಲ್ಲ, ಕನಿಷ್ಠ ಬರ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ತುರ್ತು ಸಂದರ್ಭಗಳಿಗಾದರೂ ಹಣ ನೀಡಿ ಎಂದು ಶಾಸಕರು ಮನವಿ ಮಾಡುತ್ತಿದ್ದಾರೆ.

ಕಳೆದ ಬಾರಿ ಬರ ಘೋಷಣೆ ಮಾಡುವಾಗಲೇ ವಿಳಂಬ ಮಾಡಲಾಯಿತು. ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿರುವುದರಿಂದ ಬರ ನಿರ್ವಹಣೆಗೆ ನೀಡಲು ಹಣ ಇಲ್ಲ. ಅದಕ್ಕಾಗಿಯೇ ಬರ ಘೋಷಣೆ ಮಾಡದೇ, ಕೇಂದ್ರದ ಮೇಲೆ ದೂರು ಹೇಳುತ್ತಾ ಕಾಲಹರಣ ಮಾಡಲಾಯಿತು ಎಂಬ ಆರೋಪಗಳಿವೆ.

ಈ ಬಾರಿ ಆ ರೀತಿಯ ಆರೋಪಗಳು ಬರಬಾರದು ಎಂಬ ಕಾರಣಕ್ಕಾಗಿಯೇ ಮುಂಜಾಗ್ರತೆಯ ಕ್ರಮವಾಗಿ ಸಚಿವರನ್ನು ಉಸ್ತುವಾರಿಗಾಗಿ ನಿಯೋಜನೆ ಮಾಡಲಾಗುತ್ತಿದೆ. ಆದರೆ ಸಚಿವರು ಈವರೆಗೂ ಮೇಲುಸ್ತುವಾರಿ ಆರಂಭಿಸದೇ ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ.

ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಬರ ಪೀಡಿತ ತಾಲ್ಲೂಕುಗಳನ್ನು ಘೋಷಣೆ ಮಾಡಿ ಮತ್ತು ನಿರ್ವಹಣೆಗೆ ಹಣ ನೀಡಿ ಎಂದು ಒತ್ತಾಯಿಸಲಾರಂಭಿಸಿದ್ದಾರೆ.

RELATED ARTICLES

Latest News