ಜಮು,ಜೂ.30- ಜುಲೈ 3 ರಂದು ಪ್ರಾರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಜಮ್ಮು ಮತ್ತು ಕಶ್ಮೀರದ ಕಥುವಾ ಪೊಲೀಸರು ಭಾರೀ ಕಾರ್ಯಾಚರಣೆ ನಡೆಸಿ, ಭಯೋತ್ಪಾದಕರಿಗೆ ನೆರವು ನೀಡುತ್ತಿದ್ದ ಪ್ರಮುಖ ಆರೋಪಿ ಹಾಜಿ ಲತೀಫ್ ಎಂಬಾತನನ್ನು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಹಾಜಿ ಲತೀಫ್ ಕಳೆದ 20 ವರ್ಷಗಳಿಂದ ಜೈಷ್-ಎ-ಮೊಹಮದ್ ಮತ್ತು ಲಷ್ಕರ್-ಎ-ತೊಯಿಬಾ ಉಗ್ರಗಾಮಿ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದನು. ಪಾಕಿಸ್ತಾನದಿಂದ ಭಾರತದೊಳಗೆ ಭಯೋತ್ಪಾದಕರು ನುಸುಳಲು ಸುರಕ್ಷಿತ ಮಾರ್ಗಗಳನ್ನು ಹುಡುಕಿಕೊಡುವುದು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಬೇಕಾದ ಅಗತ್ಯ ಲಾಜಿಸ್ಟಿಕ್ ಬೆಂಬಲವನ್ನು ಈತ ಒದಗಿಸುತ್ತಿದ್ದನು. ತನಿಖೆಯ ವೇಳೆ ಈತನ ಕುರಿತಾದ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿ.
ಕನಿಷ್ಠ 12 ಪಾಕಿಸ್ತಾನಿ ಭಯೋತ್ಪಾದಕರು ಗಡಿಯಾಚೆಯಿಂದ ಭಾರತಕ್ಕೆ ನುಸುಳಲು ಈತ ನೇರವಾಗಿ ನೆರವಾಗಿದ್ದಾನೆ.ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಹಿರಿಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಈತ, ಒಳನುಸುಳುವಿಕೆಯ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದನು.
ಪಾಕಿಸ್ತಾನದ ಸಿಯಾಲ್ಕೋಟ್ ಮೂಲಕ ಭಾರತ ಪ್ರವೇಶಿಸುತ್ತಿದ್ದ ಜೈಷ್-ಎ-ಮೊಹಮದ್‌ನ ಹಿರಿಯ ಕಮಾಂಡರ್‌ಗಳಿಗೆ ಈತ ಆಶ್ರಯ ಮತ್ತು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದನು.
ಸದ್ಯ, ಈತನ ವಿಚಾರಣೆಯ ಮೂಲಕ ಜಮು-ಕಾಶೀರದಲ್ಲಿ ಸಕ್ರಿಯವಾಗಿರುವ ಭೂಗತ ಕೆಲಸಗಾರರ ಜಾಲ ಮತ್ತು ಇತರ ಭಯೋತ್ಪಾದನಾ ಮಾಡ್ಯೂಲ್‌ಗಳ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ಯಾತ್ರೆಗೆ ಹೈ-ಅಲರ್ಟ್ :
ಅಮರನಾಥ ಯಾತ್ರೆಯನ್ನು ಅಡ್ಡಿಪಡಿಸಲು ಭಯೋತ್ಪಾದಕರು ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ, ಭದ್ರತಾ ಪಡೆಗಳು ಹೈ-ಅಲರ್ಟ್ ಘೋಷಿಸಿವೆ. ಈ ಕುರಿತು ಮಾಹಿತಿ ನೀಡಿರುವ ಕಾಶ್ಮೀರ ವಲಯದ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ವಿ.ಕೆ. ಬಿರ್ಡಿ, ಯಾತ್ರೆಯು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯಲು ಭದ್ರತಾ ಗ್ರಿಡ್ ಅನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಬೇಸ್ ಕ್ಯಾಂಪ್‌ಗಳು, ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಎಐ ಆಧಾರಿತ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಡಿಜಿಟಲ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇತ್ತೀಚೆಗೆ ಅನಂತ್‌ನಾಗ್‌ನಲ್ಲಿ ನಡೆದ ಅಣಕು ಕವಾಯತಿನಲ್ಲಿ, ಡ್ರೋನ್ ಬೆದರಿಕೆಗಳನ್ನು ತಟಸ್ಥಗೊಳಿಸಲು ಬಳಸುವ ಡ್ರೋನ್ ವಿರೋಧಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಸುಧಾರಿತ ತಂತ್ರಜ್ಞಾನ :
ಭದ್ರತೆಯ ಜೊತೆಗೆ, ಇತ್ತೀಚಿನ ಹವಾಮಾನ ವೈಪರೀತ್ಯಗಳ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆಗೆ ವಿಶೇಷ ಒತ್ತು ನೀಡಲಾಗಿದೆ. ಕಾಶೀರ ವಿಭಾಗೀಯ ಆಯುಕ್ತ ಅನ್ಶುಲ್ ಗರ್ಗ್ ಅವರ ಪ್ರಕಾರ, ಯಾತ್ರಿಕರಿಗೆ ಹವಾಮಾನದ ಕುರಿತಾದ ನಿಖರ ಮಾಹಿತಿಯನ್ನು ಸರಿಯಾದ ಸಮಯಕ್ಕೆ ಒದಗಿಸಲು ಶ್ರೀನಗರ, ಬನಿಹಾಲ್ ಟಾಪ್, ಜಮು ಮತ್ತು ಲೇಹ್‌ನಲ್ಲಿ ಡಾಪ್ಲರ್ ಹವಾಮಾನ ರಾಡಾರ್‌ಗಳನ್ನು ಸ್ಥಾಪಿಸಲಾಗಿದೆ.
ಬಹು-ಹಂತದ ಭದ್ರತಾ ವ್ಯವಸ್ಥೆ ಮತ್ತು ಸುಧಾರಿತ ವಿಪತ್ತು ಪ್ರತಿಕ್ರಿಯೆ ಕ್ರಮಗಳೊಂದಿಗೆ, ಈ ಬಾರಿಯ ಅಮರನಾಥ ಯಾತ್ರೆಯನ್ನು ಅತ್ಯಂತ ಸುರಕ್ಷಿತವಾಗಿ ನಡೆಸಲು ಜಮು ಮತ್ತು ಕಾಶೀರ ಆಡಳಿತ ಸಂಪೂರ್ಣ ಸಿದ್ಧತೆ ನಡೆಸಿದೆ.
