ಬೇಲೂರು,ಜೂ.30-ವಿಧಾನಪರಿಷತ್‌ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದೇನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಅವರು ಇಲ್ಲಿನ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ದೇಗುಲದ ಮುಂಭಾಗದ ಬಲಿ ಕಲ್ಲಿನ ಮೇಲೆ ಎರಡೂ ಕೈ ಇಟ್ಟು ಅಡ್ಡ ಮತದಾನ ಮಾಡಿಲ್ಲ, ಪಕ್ಷಕ್ಕೆ ದ್ರೋಹ ಮಾಡಿಲ್ಲ ಎಂದು ನೂರಾರು ಕಾರ್ಯಕರ್ತರ ಸಮುಖದಲ್ಲಿ ಮೂರು ಬಾರಿ ಆಣೆ ಪ್ರಮಾಣ ಮಾಡಿದರು.
ನಂತರ ಅವರು ಮಾತನಾಡಿ, ವಿಧಾನಪರಿಷತ್‌ಚುನಾವಣೆಯಲ್ಲಿ ನಾನು ಅಡ್ಡ ಮತದಾನ ಮಾಡಿಲ್ಲದಿದ್ದರೂ ಆರೋಪ ಬಂದ ಹಿನ್ನೆಲೆ ಹಾಗೂ ಸುಳ್ಳು ಸುದ್ದಿಯ ಸೃಷ್ಠಿಯ ಕಾರಣ ಇಂದು ನಾನು ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಚನ್ನಕೇಶವ, ಸೌಮ್ಯನಾಯಕಿ, ರಂಗನಾಯಕಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಆಣೆ ಪ್ರಾಮಾಣವನ್ನು ಮಾಡಿದ್ದೇನೆ ಎಂದರು.
ಇಲ್ಲಿಂದ ನೇರವಾಗಿ ಧರ್ಮಸ್ಥಳಕ್ಕೆ ತೆರಳಿ ಅಲ್ಲಿಯೂ ಅಣ್ಣಪ್ಪ ಸ್ವಾಮಿ ದರ್ಶನದೊಂದಿಗೆ, ಅಲ್ಲಿಂದ ಮಂಜುನಾಥ್ ದೇವರ ದರ್ಶನ ಪಡೆದು ಹೆಗಡೆಯವರನ್ನು ಸಹ ಭೇಟಿ ಮಾಡಿ ನಂತರ ವಾಪಸ್ ಬರಲಿದ್ದೇವೆ ಎಂದರು.
ನನ್ನ ಮೇಲೆ ಆರೋಪ ಬಂದರೂ ಪಕ್ಷ ನನಗೆ ನೋಟಿಸಾಗಲಿ ಅಥವಾಆದೇಶವಾಗಲಿ ಕೊಟ್ಟಿಲ್ಲ. ಆದರೆ ಈ ವಿಚಾರವಾಗಿ ನಾನೇ ಸ್ವತಃ ರಾಜ್ಯಧ್ಯಕ್ಷರು, ಪ್ರತಿಪಕ್ಷದ ನಾಯಕರು, ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿಗಳು ಮತ್ತು ಸಂಘಟನ ಪ್ರಧಾನ ಕಾರ್ಯದರ್ಶಿಗಳಿಗೆ ನನ್ನ ಮೇಲೆ ಆರೋಪ ಹೊರಿಸುತ್ತಿರುವುದರಿಂದ ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪತ್ರ ಬರೆದಿದ್ದೇನೆ. ಮತ್ತು ಇದರಲ್ಲಿ ಯಾರಿದ್ದಾರೆ ಎಂಬುದು ಆ ದೇವರಿಗೆ ಗೊತ್ತು ಎಂದರು.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೆ ನೀವು ಇಂತಹ ಕೆಲಸ ಮಾಡಿಲ್ಲ ಎಂದಿರುವುದು ನನಗೆ ಆತ ವಿಶ್ವಾಸ ಹೆಚ್ಚಿಸಿದೆ. ಈಗ ಇಲ್ಲಿಂದ ನೂರಾರು ಕಾರ್ಯಕರ್ತರೊಂದಿಗೆ ಧರ್ಮಸ್ಥಳಕ್ಕೆ ತೆರಳಲಿದ್ದೇನೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಸಂಜಯ್, ಮುಖಂಡರಾದ ಪ್ರಕಾಶ್, ಕುಮಾರ್, ಪರ್ವತಯ್ಯ, ಶ್ರೀನಿವಾಸ್, ಮಂಜುನಾಥ್ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.
