ಬೆಂಗಳೂರು, ಜೂ. 30- ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಬಳಿಕ ಮತದಾರರ ಪಟ್ಟಿಗೆ ಸೇರದೇ ಇರುವವರಿಗೆ ಬಿಹಾರ, ಪಶ್ಚಿಮಬಂಗಾಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳು ಹಾಗೂ ಇತರ ಸರ್ಕಾರಿ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಇದೇ ವ್ಯವಸ್ಥೆ ಬರುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ತಮ ಮನೆಯ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಎಲ್ಓಗಳು ಇಂದು ತಮ ನಿವಾಸಕ್ಕೆ ಬಂದು ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಪ್ರಕ್ರಿಯೆಗಳನ್ನು ನಡೆಸಿದ್ದಾರೆ. ಎನ್ಯುಮರೇಷನ್ ಅರ್ಜಿ ನಮೂನೆಗಳಿಗೆ ನಾನು ಸಹಿ ಹಾಕಿದ್ದೇನೆ ಎಂದು ತಿಳಿಸಿದರು.
ಇಂದಿನಿಂದ ಪ್ರಾರಂಭವಾಗಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್ಐಆರ್)ಯಲ್ಲಿ ಎಲ್ಲರೂ ತಮ ಹೆಸರುಗಳನ್ನು ಸೇರಿಸಬೇಕು. ಈ ಮೊದಲು ಮತದಾರರ ಪಟ್ಟಿಯ ನೋಂದಣಿ ವೇಳೆ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಒಂದು ವೇಳೆ ಮೊಬೈಲ್ ಸಂಖ್ಯೆ ಬದಲಾಗಿದ್ದರೆ, ಪ್ರಸ್ತುತ ಬಳಕೆ ಹಾಗೂ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಲು ಬಿಎಲ್ಎಗಳಿಗೆ ತಿಳಿಸುವಂತೆ ಮುಖ್ಯಮಂತ್ರಿ ಸಲಹೆ ನೀಡಿದರು.
ಎನ್ಯುಮರೇಷನ್ ಅರ್ಜಿ ನಮೂನೆಗಳಲ್ಲಿ ಎರಡು ಪ್ರತಿಗಳನ್ನು ಕೊಡುತ್ತಾರೆ. ಒಂದನ್ನು ಸಹಿ ಮಾಡಿ, ಬಿಎಲ್ಎಗಳಿಗೆ ನೀಡಬೇಕು. ಮತ್ತೊಂದನ್ನು ಮತದಾರರೆ ಇಟ್ಟುಕೊಳ್ಳಬೇಕು. ಕುಟುಂಬದ ಬಗ್ಗೆ ಸ್ಪಷ್ಟ ಹಾಗೂ ಸಮಗ್ರ ಮಾಹಿತಿ ಇರುವ ಜವಾಬ್ಧಾರಿಯುತ ವ್ಯಕ್ತಿಯೊಬ್ಬರು ಅರ್ಜಿ ನಮೂನೆಗಳಿಗೆ ಸಹಿ ಹಾಕಬೇಕು ಎಂದು ಹೇಳಿದರು.
ಇಂದಿನಿಂದ 7 ದಿನಗಳ ಕಾಲ ಪ್ರತಿಯೊಂದು ಮನೆಗೂ ಅರ್ಜಿ ನಮೂನೆಗಳನ್ನು ತಲುಪಿಸಲಾಗುತ್ತದೆ. ಅದನ್ನು ವಾಪಸ್ ನೀಡಲು 29 ದಿನಗಳ ಕಾಲಾವಕಾಶ ಇದೆ. ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಎಲ್ಲರೂ ತಮ ಮತದಾನ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೊಬೈಲ್ ಆ್ಯಪ್ ಬಳಕೆ ಬಗ್ಗೆ ಕೆಲವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಈ ವಿಚಾರದಲ್ಲಿ ನಾನು ಕೂಡ ಅನಕ್ಷರಸ್ಥನಿದ್ದೇನೆ. ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಲು ನನಗೂ ಸಾಧ್ಯವಾಗಲಿಲ್ಲ. ಹೀಗಾಗಿ ಪ್ರತಿಯೊಬ್ಬರೂ ನೇರವಾಗಿಯೇ ಅರ್ಜಿ ನಮೂನೆಗಳನ್ನು ಬಿಎಲ್ಎಗಳಿಗೆ ತಲುಪಿಸಬೇಕೆಂದು ಮುಖ್ಯಮಂತ್ರಿಯವರು ಸಲಹೆ ನೀಡಿದರು.
ಒಂದು ವೇಳೆ ಮತದಾರರ ಪಟ್ಟಿಯಲ್ಲಿರುವ ಹಳೇ ಫೋಟೋವನ್ನು ಬದಲಾವಣೆ ಮಾಡಬೇಕು ಎಂದಾದರೆ, ಹೊಸ ಫೋಟೋವನ್ನು ಮತದಾರರು ನೀಡಬಹುದು ಎಂದು ಮುಖ್ಯಮಂತ್ರಿ ಹೇಳಿದರು.
ಮತದಾರರಲ್ಲದವರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವುದು ಸರಿಯಲ್ಲ. ಕೆಲವರು ಬೇರೆ ರಾಜ್ಯಗಳಲ್ಲಿ ನೋಂದಾಯಿಸಿಕೊಂಡು ಅಲ್ಲಿಯೂ ಸರ್ಕಾರಿ ಸೌಲಭ್ಯಗಳನ್ನು ಪಡೆದಿರುತ್ತಾರೆ. ಇಲ್ಲಿಯೂ ಅವರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವುದು ಸೂಕ್ತವಲ್ಲ. ರಾಜ್ಯದ ಮತದಾರರಲ್ಲದವರಿಗೆ ಸೌಲಭ್ಯಗಳನ್ನು ನೀಡುವುದನ್ನು ನಿಯಂತ್ರಿಸಲಾಗುತ್ತದೆ ಎಂದು ಅವರು ಹೇಳಿದರು.
