ಬೆಂಗಳೂರು, ಜು.1- ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದ್ದು, ಬಯಲುಸೀಮೆ ಪ್ರದೇಶಗಳಲ್ಲಿ ಮಳೆ ಮೋಡ ಕವಿದ ವಾತಾವರಣದೊಂದಿಗೆ ಕಣ್ಣಾಮುಚ್ಚಾಲೆಯಾಡುತ್ತಿದ್ದು, ರೈತರು ಎದುರು ನೋಡುವಂತಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾದರೆ ಅರೆ ಮಲೆನಾಡಿನ ಶಿವಮೊಗ್ಗ, ಶಿಕಾರಿಪುರ, ಸೊರಬ, ಭದ್ರಾವತಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸಾ, ಶೃಂಗೇರಿ, ಎನ್.ಆರ್.ಪುರದಲ್ಲಿ ಮಳೆಯಾಗಿದೆ.
ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿದ್ದು, ಲಿಂಗನಮಕ್ಕಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ. ಜೋಗ ಸಮೀಪದ ಭಾರಂಗಿ ಹೋಬಳಿಯ ಬಿಳಿಗಾರಿನಲ್ಲಿ ಭಾರೀ ಮಳೆ ಗಾಳಿಗೆ ಮನೆಯೊಂದರ ಛಾವಣಿ ಕುಸಿದುಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಕಳಸ, ಜಯಪುರ ಸುತ್ತಮುತ್ತ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ತುಂಗಾ ನದಿಯಲ್ಲಿ ನೀರಿನ ಪ್ರಮಾಣ ತುಸು ಏರಿಕೆಯಾಗಿದೆ.
ಬಯಲುಸೀಮೆ ಪ್ರದೇಶವಾದ ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಶೀತಗಾಳಿ ಬೀಸುತ್ತಿದ್ದು, ಮಳೆ ಮಾತ್ರ ಧರೆಗೆ ಬೀಳುತ್ತಿಲ್ಲ.
ಇದರಿಂದ ಅಲ್ಲಲ್ಲಿ ಸಾಧಾರಣ ಮಳೆ ಹೊರತುಪಡಿಸಿದರೆ ಜೋರಾಗಿ ಮಳೆ ಬೀಳದಂತಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಮಳೆ ಬಂದರೆ ಸಾಕು ಬಿತ್ತನೆ ಮಾಡೋಣ ಎಂದು ರೈತರು ಅಗತ್ಯ ಸಿದ್ಧತೆ ಮಾಡಿಕೊಂಡು ಮುಗಿಲು ನೋಡುತ್ತಿದ್ದಾರೆ.
ಉ.ಕರ್ನಾಟಕ ಭಾಗವಾದ ರಾಯಚೂರು, ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಕಲಬುರಗಿ, ಬೀದರ್, ಬಿಜಾಪುರ ಜಿಲ್ಲೆಗಳಲ್ಲೂ ಸಹ ಈ ಬಾರಿ ಮಳೆ ಕೈಕೊಟ್ಟಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
