ಬೆಂಗಳೂರು, ಜು.2- ರಾಜ್ಯದಲ್ಲಿ ಪಾನ್ ಮಸಾಲಾ ಹಾಗೂ ಗುಟ್ಕಾ ಉತ್ಪನ್ನಗಳನ್ನು ಬ್ಯಾನ್ ಮಾಡಲು ತಯಾರಿ ಆರಂಭಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಬೆನ್ನಲ್ಲೇ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ರಾಜ್ಯಾದ್ಯಂತ ಎರಡು ದಿನಗಳ ಮೆಗಾ ಡ್ರೈವ್ ಆರಂಭಿಸಿದ್ದಾರೆ.
ಪಾನ್ ಮಸಾಲಾ ಮತ್ತು ಗುಟ್ಕಾ ಮಾರಾಟವಾಗುತ್ತಿರುವ ಅಂಗಡಿಗಳಿಂದ ಅಧಿಕಾರಿಗಳು ಮಾದರಿಗಳನ್ನು (ಸ್ಯಾಂಪಲ್) ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸುತ್ತಿದ್ದಾರೆ.
ಈ ಪರೀಕ್ಷೆಯಲ್ಲಿ ನಿಷೇಧಿತ ಅಥವಾ ಅಮಲಿನ ಅಂಶಗಳು ಪತ್ತೆಯಾದರೆ ಸಂಬಂಧಿತ ಉತ್ಪನ್ನಗಳ ವಿರುದ್ಧ ಕಾನೂನು ಕ್ರಮ ಜತೆಗೆ ರಾಜ್ಯದಲ್ಲಿ ನಿಷೇಧ ಹೇರಲು ಸರ್ಕಾರ ಮುಂದಾಗುವ ಸಾಧ್ಯತೆ ಇದೆ.
ಮಾದಕದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣದ ಗುರಿಯೊಂದಿಗೆ ಸರ್ಕಾರ ಈ ಕಾರ್ಯಾಚರಣೆ ಕೈಗೊಂಡಿದ್ದು, ಆಹಾರ ಸುರಕ್ಷತಾ ಇಲಾಖೆ ರಾಜ್ಯಾದ್ಯಂತ ತಪಾಸಣೆಯನ್ನು ತೀವ್ರಗೊಳಿಸಿದೆ.
ಪರೀಕ್ಷಾ ವರದಿ ಬಂದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ವರದಿಯಲ್ಲಿ ಅಮಲಿನ ಅಂಶ ದೃಢಪಟ್ಟರೆ ಪಾನ್ ಮಸಾಲಾ ಮತ್ತು ಗುಟ್ಕಾ ಉತ್ಪನ್ನಗಳ ಮಾರಾಟದ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರುವ ಸಾಧ್ಯತೆ ಇದೆ. ಸರ್ಕಾರದ ಈ ಕ್ರಮದಿಂದ ಪಾನ್-ಗುಟ್ಕಾ ಉತ್ಪಾದಕರು ಹಾಗೂ ವ್ಯಾಪಾರಿಗಳಲ್ಲಿ ಆತಂಕ ಮೂಡಿದ್ದು, ಪರೀಕ್ಷಾ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
