ನವದೆಹಲಿ,ಜು.2- ಭಾರತದ ರಾಜಕೀಯ ಮತ್ತು ಸಾಂವಿಧಾನಿಕ ಇತಿಹಾಸದಲ್ಲಿ ನೂತನ ಅಧ್ಯಾಯವೊಂದು ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಅಥವಾ ರಾಜ್ಯ ಸಚಿವರು ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಸತತ 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರೆ, ಅವರನ್ನು ಸ್ವಯಂಚಾಲಿತವಾಗಿ ಅಧಿಕಾರದಿಂದ ವಜಾಗೊಳಿಸುವ ಕುರಿತಾದ 130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ-2025 ಈಗ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾಗಿದೆ.
ಜುಲೈ 20ರಿಂದ 27ರೊಳಗೆ ಆರಂಭವಾಗುವ ನಿರೀಕ್ಷೆಯಿರುವ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಗೆ ಆದ್ಯತೆ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಸರ್ಕಾರ ಪ್ರಸ್ತಾಪಿಸಿರುವ ಈ ಮಸೂದೆಯು, ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬಹುದಾದ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವ ಉನ್ನತ ಹುದ್ದೆಯವರು, ಬಂಧನಕ್ಕೊಳಗಾದ 30 ದಿನಗಳೊಳಗೆ ಜಾಮೀನು ಪಡೆಯಲು ವಿಫಲರಾದರೆ, 31ನೇ ದಿನದಂದು ಸ್ವಯಂಚಾಲಿತವಾಗಿ ತಮ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ.
ಆಡಳಿತದಲ್ಲಿ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವುದು ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಖಾತರಿಪಡಿಸುವುದು ಇದರ ಮುಖ್ಯ ಉದ್ದೇಶ ಎಂದು ಕೇಂದ್ರ ಸರ್ಕಾರ ಬಲವಾಗಿ ಪ್ರತಿಪಾದಿಸುತ್ತಿದೆ. ಆದರೆ, ಈ ಮಸೂದೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ವ್ಯಕ್ತಿಯನ್ನು ಅನರ್ಹಗೊಳಿಸುವುದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಬಹುದು ಎಂದು ಅಭಿಪ್ರಾಯಪಟ್ಟಿವೆ. ಅಲ್ಲದೆ, ಅಪರಾಧ ಸಾಬೀತಾಗುವವರೆಗೆ ವ್ಯಕ್ತಿಯನ್ನು ನಿರಪರಾಧಿ ಎಂದು ಪರಿಗಣಿಸಬೇಕು ಎಂಬ ಸಂವಿಧಾನಾತಕ ತತ್ವಕ್ಕೆ ಈ ಮಸೂದೆ ವಿರುದ್ಧವಾಗಿದೆ ಎಂದು ಪ್ರತಿಪಕ್ಷಗಳು ವಾದಿಸಿವೆ.
ಈ ವಿವಾದಾತಕ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯು (ಜೆಪಿಸಿ), ಜುಲೈ 17ರಂದು ತನ್ನ ಅಂತಿಮ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಬಂಧನದ 30 ದಿನಗಳ ಮಿತಿಯನ್ನು ಕಾಯ್ದುಕೊಳ್ಳಲು ಸಮಿತಿ ಒಲವು ತೋರಿದೆ.ಆದಾಗ್ಯೂ, ಅಪರಾಧ ಸಾಬೀತಾಗುವ ಮೊದಲೇ ಪದಚ್ಯುತಿಗೊಳಿಸುವುದು ಕಾನೂನುಬದ್ಧವೇ? ಮತ್ತು ರಾಜಕೀಯ ವಿರೋಧಿಗಳನ್ನು ಹಣಿಯಲು ಈ ಕಾನೂನಿನ ದುರುಪಯೋಗವಾಗುವುದಿಲ್ಲವೇ? ಎಂಬ ಪ್ರಶ್ನೆಗಳು ಕಾನೂನು ತಜ್ಞರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಇಂತಹ ದುರ್ಬಳಕೆಯನ್ನು ತಡೆಯಲು ಸಮಿತಿ ಪ್ರಬಲ ಸುರಕ್ಷತಾ ಕ್ರಮಗಳನ್ನು ಸೂಚಿಸುವ ಸಾಧ್ಯತೆಯಿದೆ. ಸಾಂವಿಧಾನಿಕ ತಿದ್ದುಪಡಿಗೆ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು (2/3) ವಿಶೇಷ ಬಹುಮತ ಕಡ್ಡಾಯ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಂತರ, ಎನ್‌ಡಿಎ ಬಲ 330ಕ್ಕೆ ಏರಿಕೆಯಾಗಿದೆ. ಆದರೂ, ವಿಶೇಷ ಬಹುಮತದ ಗುರಿ ಇನ್ನೂ ದೂರವಿದೆ. 242 ಸದಸ್ಯ ಬಲದ ರಾಜ್ಯಸಭೆಯ ಸದನದಲ್ಲಿ, ನಾಮನಿರ್ದೇಶಿತ ಸದಸ್ಯರ ಬೆಂಬಲವನ್ನೂ ಒಳಗೊಂಡಂತೆ ಎನ್ ಡಿಎ 151 ಸ್ಥಾನಗಳನ್ನು ಹೊಂದಿದೆ. ಆದರೆ, ಸಾಂವಿಧಾನಿಕ ತಿದ್ದುಪಡಿಗೆ ಅಗತ್ಯವಿರುವ ಮ್ಯಾಜಿಕ್ ನಂಬರ್‌ಗೆ ಇನ್ನೂ 11 ಮತಗಳ ಕೊರತೆಯಿದೆ.
ಈ ಹಿನ್ನೆಲೆಯಲ್ಲಿ, ಬಿಜು ಜನತಾ ದಳ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಿಲುವು ಈ ಮಸೂದೆಯ ಭವಿಷ್ಯವನ್ನು ನಿರ್ಧರಿಸಲಿದೆ. ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲದೆ ಸರ್ಕಾರ ಈ ತಿದ್ದುಪಡಿಯನ್ನು ಜಾರಿಗೆ ತರುವುದು ಕಷ್ಟಸಾಧ್ಯ.
ವಿರೋಧ ಪಕ್ಷಗಳು ಈ ಮಸೂದೆಯನ್ನು ಪ್ರಜಾಪ್ರಭುತ್ವದ ಮೇಲಿನ ಹಸ್ತಕ್ಷೇಪ ಎಂದು ಬಣ್ಣಿಸಿವೆ. ಅಧಿಕಾರ ಪ್ರತ್ಯೇಕತೆಯ ತತ್ವಕ್ಕೆ ಇದು ವಿರುದ್ಧವಾಗಿದೆ ಎಂದು ವಾದಿಸುತ್ತಿರುವ ವಿಪಕ್ಷಗಳು, ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ತೀವ್ರ ಪ್ರತಿರೋಧ ಒಡ್ಡಲು ಸಜ್ಜಾಗಿವೆ. ಆಡಳಿತಾರೂಢ ಎನ್ ಡಿಎ ಇದನ್ನು ಸಾಂವಿಧಾನಿಕ ನೈತಿಕತೆಯ ವಿಷಯವಾಗಿ ಬಿಂಬಿಸುತ್ತಿದ್ದರೆ, ವಿಪಕ್ಷಗಳು ಇದನ್ನು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸುತ್ತಿವೆ.
ಈ ಮಸೂದೆಯನ್ನು ಪರಿಶೀಲಿಸಲು 31 ಸದಸ್ಯರ ಜಂಟಿ ಸಂಸದೀಯ ಸಮಿತಿ ರಚಿಸಲಾಗಿದ್ದು, ಮಾಜಿ ಐಎಎಸ್ ಅಧಿಕಾರಿ ಹಾಗೂ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಮುಂಗಾರು ಅಧಿವೇಶನಕ್ಕೂ ಮುನ್ನ ಸಮಿತಿ ತನ್ನ ವರದಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು, ಈ ಸಮಿತಿಯಲ್ಲಿ ಭಾಗವಹಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿ ಜೆಪಿಸಿಯನ್ನು ಬಹಿಷ್ಕರಿಸಿದ್ದವು. ಆದರೆ, ಎನ್‌ಡಿಎ ಸರ್ಕಾರ ಈ ಆಕ್ಷೇಪಣೆಗಳನ್ನು ತಳ್ಳಿ ಹಾಕಿದ್ದು, ದೇಶದ ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಿನ ಉತ್ತರದಾಯಿತ್ವ ತರಲು ಈ ಮಸೂದೆ ಅಗತ್ಯ ಎಂದು ಸಮರ್ಥಿಸಿದೆ.
ಮಸೂದೆಯನ್ನು ಶೀಘ್ರದಲ್ಲೇ ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದ್ದು, ಮುಂಬರುವ ಮುಂಗಾರು ಅಧಿವೇಶನದ ಪ್ರಮುಖ ಶಾಸನ ಕಾರ್ಯಸೂಚಿಯಲ್ಲಿ ಇದಕ್ಕೂ ಸ್ಥಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೆಪಿಸಿ ಬಹಿಷ್ಕರಿಸಿದ ಪ್ರಮುಖ ಪ್ರತಿಪಕ್ಷಗಳು ಈ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯನ್ನು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ , ಸಮಾಜವಾದಿ ಪಕ್ಷ , ಡಿಎಂಕೆ ಹಾಗೂ ಎಡಪಕ್ಷಗಳು ಬಹಿಷ್ಕರಿಸಿವೆ.
ಆದರೆ, ಶರದ್ ಪವಾರ್ ಬಣದ ಎನ್‌ಸಿಪಿ, ಎಐಎಂಐಎಂ ಹಾಗೂ ತಟಸ್ಥ ನಿಲುವು ಹೊಂದಿರುವ ಬಿಜು ಜನತಾ ದಳ , ವೈಎಸ್‌ಆರ್ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ ಸೇರಿದಂತೆ ಕೆಲವು ಪಕ್ಷಗಳು ಜಂಟಿ ಸಂಸದೀಯ ಸಮಿತಿಯ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿವೆ.
ಉನ್ನತ ರಾಜಕೀಯ ಹುದ್ದೆಗಳಲ್ಲಿರುವವರು ತನಿಖೆಯ ಅವಧಿಯಲ್ಲಿ ಅಧಿಕಾರದಲ್ಲಿ ಮುಂದುವರಿಯುವುದು ಎಷ್ಟು ಸಮಂಜಸ ಎಂಬ ಜಿಜ್ಞಾಸೆಯ ನಡುವೆಯೇ, ಈ ಮಸೂದೆಯು ಜಾರಿಗೆ ಬಂದರೆ ಭಾರತದ ರಾಜಕೀಯ ಸ್ವರೂಪದಲ್ಲಿ ಭಾರೀ ಬದಲಾವಣೆಗಳಾಗುವುದು ಖಚಿತ.
130ನೇ ಸಾಂವಿಧಾನಿಕ ತಿದ್ದುಪಡಿಯು ಕೇವಲ ಕಾನೂನಿನ ಬದಲಾವಣೆಯಲ್ಲ, ಇದು ಭಾರತೀಯ ಪ್ರಜಾಪ್ರಭುತ್ವದ ನೈತಿಕ ಹೊಣೆಗಾರಿಕೆಯ ಹೊಸ ಪರೀಕ್ಷೆಯೂ ಹೌದು. ಸಂಸತ್ತಿನಲ್ಲಿ ನಡೆಯಲಿರುವ ಚರ್ಚೆಗಳು, ಮತದಾನದ ಪ್ರಕ್ರಿಯೆ ಮತ್ತು ಪ್ರಾದೇಶಿಕ ಪಕ್ಷಗಳ ನಿಲುವು ಇಡೀ ದೇಶದ ಗಮನ ಸೆಳೆಯಲಿವೆ.
