Homeರಾಜ್ಯಸರ್ಕಾರದ ವಿರುದ್ಧ ರೈತರು ದಂಗೆ ಏಳುತ್ತಾರೆ ಹುಷಾರ್ : ಅಶೋಕ್‌ ಎಚ್ಚರಿಕೆ

ಸರ್ಕಾರದ ವಿರುದ್ಧ ರೈತರು ದಂಗೆ ಏಳುತ್ತಾರೆ ಹುಷಾರ್ : ಅಶೋಕ್‌ ಎಚ್ಚರಿಕೆ

Farmers will revolt against the government, : Ashok warns

ಬೆಂಗಳೂರು,ಜು.2- ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಜನರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ. ಈಗಲಾದರೂ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಬರ ನಿರ್ವಹಣಾ ಕಾರ್ಯ ಕೈಗೊಳ್ಳದಿದ್ದರೆ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ರೈತರು ದಂಗೆ ಏಳುವುದು ನಿಶ್ಚಿತ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಎಚ್ಚರಿಸಿದ್ದಾರೆ.

ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್‌ ಮಾಡಿರುವ ಅವರು, ಬರದ ಕರಿನೆರಳಲ್ಲಿ ಕರ್ನಾಟಕ, ಅಧಿಕಾರದ ಅಮಲಿನಲ್ಲಿ ಕಾಂಗ್ರೆಸ್‌‍ ಸರ್ಕಾರ ಎಂದು ಕಿಡಕಾರಿರುವ ಅವರು, ರಾಜ್ಯದ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನತೆ ಭೀಕರ ಬರಗಾಲದ ಆತಂಕದಲ್ಲಿದ್ದರೂ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ಮಾತ್ರ ಇನ್ನೂ ಕುಂಭಕರ್ಣ ನಿದ್ರೆಯಲ್ಲೇ ಮುಳುಗಿದೆ ಎಂದು ಆರೋಪಿಸಿದ್ದಾರೆ.

ಮುಂಗಾರು ಕೈಕೊಟ್ಟಿದೆ. ಜಲಾಶಯಗಳು ಬರಿದಾಗುತ್ತಿವೆ. ಬೆಳೆಗಳು ಕಣ್ಣೆದುರೇ ಒಣಗುತ್ತಿವೆ. ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕಾಂಗ್ರೆಸ್‌‍ ಸರ್ಕಾರಕ್ಕೆ ರೈತರಿಗಿಂತ ಅಧಿಕಾರ, ರಾಜಕೀಯ, ಭ್ರಷ್ಟಾಚಾರವೇ ಮುಖ್ಯವಾಗಿದೆ. ರಾಜ್ಯದ 150ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಬೆಳಗಾವಿ,

ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಲಾಶಯಗಳು ಬರಿದಾಗುತ್ತಿದ್ದು, ಕುಡಿಯುವ ನೀರಿನ ಬಿಕ್ಕಟ್ಟು ಆರಂಭವಾಗಿದೆ ಎಂದು ಆತಂಕ ಹೊರಹಾಕಿದ್ದಾರೆ. ಮುಂಗಾರು ಮಳೆ ತೀವ್ರ ಕೊರತೆಯಿಂದ ಕೃಷಿ ಬಿತ್ತನೆ ಕುಂಠಿತಗೊಂಡಿದೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಬರ ಘೋಷಣೆಗೆ ಅಗತ್ಯವಿರುವ ಎಲ್ಲ ಸೂಚ್ಯಂಕಗಳು ಸ್ಪಷ್ಟವಾಗಿದ್ದರೂ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ರಾಜ್ಯಕ್ಕೆ ಪೂರ್ಣಾವಧಿ ಕೃಷಿ ಸಚಿವರೇ ಇಲ್ಲ. ರೈತರ ಬಗ್ಗೆ ಕಾಂಗ್ರೆಸ್‌‍ ಸರ್ಕಾರಕ್ಕಿರುವ ಕಾಳಜಿ ಇದೇನಾ? ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ, ರಾಜ್ಯದ ಜನತೆಗೆ ಉತ್ತರಿಸಿ ಎಂದು ಒತ್ತಾಯಿಸಿದ್ದಾರೆ.

ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರು ತಮ ಜಿಲ್ಲೆಗಳಲ್ಲಿ ಇದುವರೆಗೆ ಒಂದೇ ಒಂದು ಬರ ಪರಿಶೀಲನಾ ಸಭೆಯನ್ನೂ ನಡೆಸಿಲ್ಲ. ನಿಮ ಸರ್ಕಾರಕ್ಕೆ ಪರಿಸ್ಥಿತಿಯ ಗಂಭೀರತೆಯ ಅರಿವೇ ಇಲ್ಲವೇ? ಕೃಷಿ ಕಾರ್ಮಿಕರ ವಲಸೆ ತಡೆಯಲು ರಾಜಕೀಯ ಬದಿಗಿಟ್ಟು ವಿಬಿ-ಜಿರಾಮ್‌ಜಿ ಯೋಜನೆಯನ್ನು ಸಮರೋಪಾದಿಯಲ್ಲಿ ಜಾರಿಗೆ ತರಲು ಏಕೆ ಮೀನ ಮೇಷ ಎಣಿಸುತ್ತಿದ್ದೀರಿ? ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವ ಕಾಮಗಾರಿಗಳನ್ನು ತಕ್ಷಣ ಆರಂಭಿಸಲು ನಿಮ ಸರ್ಕಾರಕ್ಕೆ ಅಡ್ಡಿಯಾಗಿರುವುದು ಏನು? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದ ವಿಬಿಜಿ – ರಾಮ್‌ ಜಿ ಎಲ್ಲಿದೆ? ಮಳೆ ವಿಫಲವಾದರೆ ರೈತರಿಗೆ ಪರ್ಯಾಯ ಬೆಳೆ ವ್ಯವಸ್ಥೆ, ಮೇವು, ಉದ್ಯೋಗ ಮತ್ತು ಪರಿಹಾರ ನೀಡಲು ನಿಮ ಸರ್ಕಾರದ ಸಿದ್ಧತೆ ಏನು? ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಟ್ಯಾಂಕರ್‌, ಬೋರ್‌ವೆಲ್‌ ಹಾಗೂ ಪರ್ಯಾಯ ನೀರು ಪೂರೈಕೆಗೆ ನಿಮ ತುರ್ತು ಕಾರ್ಯ ಯೋಜನೆ ಎಲ್ಲಿದೆ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಕ್ಷಣವೇ ವಾಸ್ತವ ಪರಿಸ್ಥಿತಿಯ ಆಧಾರದ ಮೇಲೆ ಬರಪೀಡಿತ ಪ್ರದೇಶಗಳನ್ನು ಅಧಿಕೃತವಾಗಿ ಘೋಷಿಸಬೇಕು. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತುರ್ತು ಸಭೆ ನಡೆಸಿ ಜಿಲ್ಲಾವಾರು ಬರ ನಿರ್ವಹಣಾ ಕಾರ್ಯಯೋಜನೆ ಪ್ರಕಟಿಸಬೇಕು. ಕೃಷಿ ಕಾರ್ಮಿಕರ ವಲಸೆ ತಡೆಯಲು ರಾಜಕೀಯ ಬದಿಗಿಟ್ಟು ವಿಬಿಜಿ – ರಾಮ್‌ ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಹಾಗೂ ಗ್ರಾಮೀಣ ಉದ್ಯೋಗ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯವ್ಯಾಪಿ ವಿಬಿಜಿ – ರಾಮ್‌ ಜಿ ಜಾರಿಗೆ ತಂದು ಕುಡಿಯುವ ನೀರು, ಮೇವು, ಪರ್ಯಾಯ ಬೆಳೆ ಹಾಗೂ ರೈತರಿಗೆ ತುರ್ತು ನೆರವು ಒದಗಿಸಬೇಕು. ಅನಾಥವಾಗಿರುವ ಕೃಷಿ ಇಲಾಖೆಗೆ ತಕ್ಷಣ ಪೂರ್ಣಾವಧಿ ಕೃಷಿ ಸಚಿವರನ್ನು ನೇಮಿಸಬೇಕು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ, ಬರವನ್ನು ನಿರ್ಲಕ್ಷಿಸುವುದು ಎಂದರೆ ರೈತರ ಬದುಕನ್ನು ನಿರ್ಲಕ್ಷಿಸಿದಂತೆ ಎಂದು ಅಶೋಕ್‌ ಎಚ್ಚರಿಸಿದ್ದಾರೆ.

RELATED ARTICLES

Latest News