Homeರಾಜ್ಯ52 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ ತಡೆಯಾಜ್ಞೆ

52 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ ತಡೆಯಾಜ್ಞೆ

High Court stays government's decision to withdraw 52 criminal cases

ಬೆಂಗಳೂರು,ಜು.2- ರಾಜ್ಯ ಸರ್ಕಾರವು ಕೋಮು ಗಲಭೆ ಸೇರಿದಂತೆ ಗಂಭೀರ ಸ್ವರೂಪದ 52 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆಯಲು ಕೈಗೊಂಡಿದ್ದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಸರ್ಕಾರದ ಆಡಳಿತಾತಕ ಮತ್ತು ರಾಜಕೀಯ ನಡೆಗೆ ತೀವ್ರ ಹಿನ್ನಡೆಯಾಗಿದೆ.

ಕಾನೂನಿನ ನಿಯಮಗಳನ್ನು ಉಲ್ಲಂಘಿಸಿ ರಾಜಕೀಯ ಪ್ರೇರಿತವಾಗಿ ಕೇಸ್‌‍ಗಳನ್ನು ವಾಪಸ್‌‍ ಪಡೆಯಲಾಗಿದೆ ಎಂಬ ಆರೋಪಗಳಿಗೆ ಈ ತೀರ್ಪು ಪುಷ್ಟಿ ನೀಡಿದಂತಾಗಿದೆ. ಸಚಿವ ಸಂಪುಟದ ಈ ನಿರ್ಧಾರವನ್ನು ಗಿರೀಶ್‌ ಭರದ್ವಾಜ್‌‍ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ತೀವ್ರವಾಗಿ ಆಕ್ಷೇಪಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್‌‍. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.ಹೈಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದ ಈ ನಿರ್ಧಾರವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಗಿರೀಶ್‌ ಭರದ್ವಾಜ್‌ ಪರ ವಾದಿಸಿದ ಹಿರಿಯ ವಕೀಲ ವೆಂಕಟೇಶ್‌ ದಳವಾಯಿ, ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದರು.

ನಿಯಮಗಳ ಉಲ್ಲಂಘನೆ: ಮೂವರು ಹಿರಿಯ ಸಚಿವರ ಶಿಫಾರಸಿನ ಮೇರೆಗೆ, ಯಾವುದೇ ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೆ ರಾಜಕೀಯ ಲಾಭಕ್ಕಾಗಿ ಕೇಸ್‌‍ಗಳನ್ನು ವಾಪಸ್‌‍ ಪಡೆಯಲಾಗಿದೆ. ಕೋರ್ಟ್‌ ಆದೇಶಕ್ಕೆ ತಿಲಾಂಜಲಿ: 2025ರಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿದ್ದ ಸ್ಪಷ್ಟ ಮಾರ್ಗಸೂಚಿಗಳನ್ನು ಸರ್ಕಾರ ಕಡೆಗಣಿಸಿದೆ ಎಂದು ವಾದ ಮಂಡನೆ ಮಾಡಿದರು.

ರಾಜ್ಯದ ಮೂವರು ಹಿರಿಯ ಸಚಿವರ ನೇರ ಶಿಫಾರಸಿನ ಮೇರೆಗೆ ನಿಯಮಗಳನ್ನು ಗಾಳಿಗೆ ತೂರಿ ಈ ಕೇಸ್‌‍ಗಳನ್ನು ಕೈಬಿಡಲಾಗಿದೆ. ಹೂಡಲಾಗಿದ್ದ ಕ್ರಿಮಿನಲ್‌ ಪ್ರಕರಣಗಳನ್ನು ಪ್ರಾಸಿಕ್ಯೂಷನ್‌ನಿಂದ ಹಿಂಪಡೆಯುವ ಸರ್ಕಾರದ ಈ ನಿಲುವು, ಇದೇ ವಿಷಯಕ್ಕೆ ಸಂಬಂಧಿಸಿದಂತೆ 2025 ರಲ್ಲಿ ಹೈಕೋರ್ಟ್‌ ನೀಡಿದ್ದ ಕಟ್ಟುನಿಟ್ಟಿನ ಆದೇಶಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ಇದು ಕೇವಲ ರಾಜಕೀಯ ದುರುದ್ದೇಶದಿಂದ ಕೂಡಿದ ತೀರ್ಮಾನ ಎಂದು ವಾದಿಸಿದ್ದರು.

ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ.ಎಸ್‌‍. ಹೇಮಲೇಖಾ ಅವರ ವಿಭಾಗೀಯ ಪೀಠವು ಅರ್ಜಿಯ ಗಂಭೀರತೆಯನ್ನು ಪರಿಗಣಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.ಈ ಪ್ರಕರಣಗಳ ಪೈಕಿ ಅತ್ಯಂತ ಸೂಕ್ಷ್ಮವಾದದ್ದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಲಾಡ್ಲೆ ಮಶಾಕ್‌ ದರ್ಗಾ ಘಟನೆ. 2022ರ ಮಹಾ ಶಿವರಾತ್ರಿಯಂದು ನಡೆದ ಈ ಘಟನೆಯು ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.

ದರ್ಗಾ ಆವರಣದಲ್ಲಿದ್ದ ರಾಘವ ಚೈತನ್ಯ ಶಿವಲಿಂಗದ ಮೇಲೆ ನಡೆದಿದ್ದ ವಿಕೃತಿಯು ಕೋಮು ಉದ್ವಿಗ್ನತೆಗೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿದ್ದ ಆಗಿನ ಕೇಂದ್ರ ಸಚಿವ ಭಗವಂತ ಖೂಬಾ, ಸ್ಥಳೀಯ ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ವಾಹನಗಳ ಮೇಲೆ ನಡೆದ ದಾಳಿ ಮತ್ತು ಕಲ್ಲು ತೂರಾಟದ ಘಟನೆಗಳು ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದವು.

ಹೈಕೋರ್ಟ್‌ನ ಈ ಆದೇಶದಿಂದಾಗಿ, ಸರ್ಕಾರದಿಂದ ವಾಪಸ್‌‍ ಪಡೆಯಲ್ಪಟ್ಟಿದ್ದ ಎಲ್ಲಾ 52 ಪ್ರಕರಣಗಳ ಕಾನೂನು ವಿಚಾರಣೆಗಳು ಮರು ಚಾಲನೆಗೊಳ್ಳಲಿವೆ. ಆರೋಪಿಗಳ ಮೇಲಿನ ಕಾನೂನು ಪ್ರಕ್ರಿಯೆಗಳು ಹಳೆಯ ಸ್ಥಿತಿಯಲ್ಲಿಯೇ ಮುಂದುವರಿಯಲಿವೆ.ಸರ್ಕಾರದ ಈ ನಿರ್ಧಾರವು ನ್ಯಾಯಾಲಯದ ಪರಿಶೀಲನೆಗೆ ಒಳಪಟ್ಟಿದ್ದು, ಮುಂದಿನ ದಿನಗಳಲ್ಲಿ ಸರ್ಕಾರವು ನ್ಯಾಯಾಲಯಕ್ಕೆ ನೀಡುವ ಸಮರ್ಥನೆಗಳ ಮೇಲೆ ಪ್ರಕರಣದ ಅಂತಿಮ ಹಣೆಬರಹ ನಿರ್ಧಾರವಾಗಲಿದೆ. ಈ ಬೆಳವಣಿಗೆಯು ಮುಂಬರುವ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಲಿದೆ.

ಏನಿದು ಆಳಂದ ದರ್ಗಾ ಗಲಭೆ ಪ್ರಕರಣ? :
2022ರ ಮಹಾ ಶಿವರಾತ್ರಿಯಂದು ಲಾಡ್ಲೆ ಮಶಾಕ್‌ ದರ್ಗಾ ಆವರಣದಲ್ಲಿದ್ದ ರಾಘವ ಚೈತನ್ಯ ಶಿವಲಿಂಗಕ್ಕೆ ಕಿಡಿಗೇಡಿಗಳು ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದರು. ಈ ಹಿನ್ನೆಲೆಯಲ್ಲಿ ಜಾಗವನ್ನು ಸ್ವಚ್ಛಗೊಳಿಸಿ ಪೂಜೆ ಮಾಡಲು ತೆರಳಿದ್ದ ಅಂದಿನ ಕೇಂದ್ರ ಸಚಿವ ಭಗವಂತ ಖೂಬಾ, ಸ್ಥಳೀಯ ಶಾಸಕರು ಹಾಗೂ ಭದ್ರತೆಯ ಉಸ್ತುವಾರಿ ಹೊತ್ತಿದ್ದ ಡಿಸಿ ಮತ್ತು ಎಸ್‌‍ಪಿ ಅವರ ಕಾರುಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕಲ್ಲು ತೂರಾಟ ನಡೆಸಲಾಗಿತ್ತು.

ಈ ಗಲಭೆಗೆ ಸಂಬಂಧಿಸಿದಂತೆ ವಿವಿಧ ಮುಸ್ಲಿಂ ಮುಖಂಡರು ಮತ್ತು ಯುವಕರ ಮೇಲೆ ಒಟ್ಟು 13 ಪ್ರಕರಣಗಳು ದಾಖಲಾಗಿದ್ದವು. ಅಂದಿನ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ ಖಾದರ್‌ ಅವರ ಲಿಖಿತ ಮನವಿಯ ಮೇರೆಗೆ ಸರ್ಕಾರ ಈ ಎಲ್ಲಾ ಕೇಸ್‌‍ಗಳನ್ನು 2026 ಮೇ 27ರ ರಂದು ವಾಪಸ್‌‍ ಪಡೆದಿತ್ತು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಸರ್ಕಾರದ ನಡೆಗೆ ಸಾರ್ವಜನಿಕ ಆಕ್ರೋಶ :
ಮೇ 27, 2026ರಂದು ಸರ್ಕಾರ ಹೊರಡಿಸಿದ್ದ ಆದೇಶದ ಮೂಲಕ ಆಳಂದ ಗಲಭೆಗೆ ಸಂಬಂಧಿಸಿದ 13 ಪ್ರಕರಣಗಳು ಸೇರಿದಂತೆ ಒಟ್ಟು 52 ಕ್ರಿಮಿನಲ್‌ ಕೇಸ್‌‍ಗಳನ್ನು ವಾಪಸ್‌‍ ಪಡೆಯಲಾಗಿತ್ತು. ಅಂದಿನ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರ ಲಿಖಿತ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ, ಪ್ರತಿಪಕ್ಷಗಳು ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕಾನೂನು ಎಲ್ಲರಿಗೂ ಸಮಾನ ಎಂಬ ತತ್ವವನ್ನು ಗಾಳಿಗೆ ತೂರಿ, ತುಷ್ಟೀಕರಣದ ರಾಜಕಾರಣಕ್ಕಾಗಿ ಗಲಭೆಕೋರರಿಗೆ ರಕ್ಷಣೆ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

RELATED ARTICLES

Latest News