ಬೆಂಗಳೂರು, ಜು.2- ಕಲ್ಲುಕ್ವಾರಿಗಳಲ್ಲಿ ದುರಂತ ಘಟನೆಗಳು ನಡೆಯದಂತೆ ಅಗತ್ಯ ಕಠಿಣಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಗಡಿ ರಸ್ತೆಯ ಕ್ವಾರಿಯಲ್ಲಿ ಮಣ್ಣು ಕುಸಿದು ಆರೇಳು ಮಂದಿ ಸಾವನ್ನಪ್ಪಿರುವ ವರದಿ ಇದೆ. ದುರ್ಘಟನೆಯಲ್ಲಿ ಸ್ಫೋಟ ಸಂಭವಿಸಿಲ್ಲ ಎಂಬ ಮಾಹಿತಿ ಇದೆ ಎಂದರು.
ಘಟನೆಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ, ಏನಾಗಿದೆ?, ಕ್ವಾರಿ ಸಕ್ರಮವೋ?, ಅಕ್ರಮವೋ? ಎಂಬೆಲ್ಲಾ ವಿವರಗಳಿರುವ ವರದಿಯನ್ನು ಮಧ್ಯಾಹ್ನದ ವೇಳೆಗೆ ಅಧಿಕೃತವಾಗಿ ಪಡೆಯಲಾಗುವುದು ಎಂದರು.
ನಂತರ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು, ಯಾವ ರೀತಿ ಜಾಗೃತಿ ಮೂಡಿಸಬೇಕು ಎಂಬ ಬಗ್ಗೆ ಪರಿಶೀಲಿಸಲಾಗುವುದು. ಕ್ವಾರಿಗಳಿಗಾಗಿ ಅವರದ್ದೇ ಆದ ನಿಯಮಗಳಿರುತ್ತವೆ. ಎಲ್ಲರೂ ಅದನ್ನು ಪಾಲನೆ ಮಾಡಬೇಕು ಎಂದು ಆಗ್ರಹಿಸಿದರು.
ಮೃತಪಟ್ಟವರಿಗೆ ಪರಿಹಾರ ನೀಡುವುದರಿಂದ ಮೃತಪಟ್ಟವರು ಎದ್ದು ಬರುವುದಿಲ್ಲ, ಪರಿಹಾರ ನೀಡುವ ಮುನ್ನ ನಿಯಮಾವಳಿಗಳನ್ನು ಪರಿಶೀಲಿಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ತಿಳಿಸಿದರು.
