ಹೈದರಾಬಾದ್,ಜು.3- ತೆಲಂಗಾಣ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸುವ ಭ್ರಷ್ಟಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ಹೈದರಾಬಾದ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ ಪಿ) ಸಂಕೇತ್ ಭೀಮ್ ರೆಡ್ಡಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ದಾಳಿಯಲ್ಲಿ ಬರೋಬ್ಬರಿ 200 ಕೋಟಿ ರೂ.ಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ.
ಕಾನೂನು ರಕ್ಷಕರೇ ಕಳ್ಳಮಾರ್ಗದ ಹಾದಿ ಹಿಡಿದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ವಿವಿಧೆಡೆ ಒಟ್ಟು 16 ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ದಶಕಗಳ ಕಾಲ ವಿವಿಧ ಪ್ರಮುಖ ಹುದ್ದೆಗಳಲ್ಲಿದ್ದ ಸಂಕೇತ್ ಭೀಮ್ ರೆಡ್ಡಿ, ತಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ವ್ಯವಸ್ಥಿತವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಎಸಿಬಿ ಅಧಿಕಾರಿಗಳ ದಾಳಿಯಲ್ಲಿ ಪತ್ತೆಯಾದ ಆಸ್ತಿಪಾಸ್ತಿಗಳು ಬೆರಗು ಮೂಡಿಸುವಂತಿವೆ.
50 ಎಕರೆಗೂ ಅಧಿಕ ಕೃಷಿ ಮತ್ತು ಕೃಷಿಯೇತರ ಭೂಮಿ,ಐಷಾರಾಮಿ ವಿಲ್ಲಾಗಳು.
ನಗರದ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ಐಷಾರಾಮಿ ವಿಲ್ಲಾಗಳು ಮತ್ತು ವಾಣಿಜ್ಯ ಕಟ್ಟಡಗಳು.
ನಗದು ಮತ್ತು ಬೆಲೆಬಾಳುವ ವಸ್ತುಗಳು :
ದಾಳಿ ವೇಳೆ ಅಪಾರ ಪ್ರಮಾಣದ ನಗದು, ಕೆಜಿಗಟ್ಟಲೆ ಚಿನ್ನದ ಆಭರಣಗಳು ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಧ ಖಾಸಗಿ ಕಂಪನಿಗಳು ಹಾಗೂ ಷೇರು ಮಾರುಕಟ್ಟೆಯಲ್ಲಿ ಭಾರೀ ಮೊತ್ತದ ಹೂಡಿಕೆ ಮಾಡಿರುವುದು ದಾಖಲೆಗಳಿಂದ ಸಾಬೀತಾಗಿದೆ.
ಪೊಲೀಸ್ ಇಲಾಖೆಯನ್ನು ಭ್ರಷ್ಟಾಚಾರ ಮುಕ್ತವಾಗಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಆದರೆ, ಇಂತಹ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಇಂತಹ ಕೃತ್ಯಗಳಲ್ಲಿ ತೊಡಗುವುದು ಇಲಾಖೆಯ ಘನತೆಗೆ ಧಕ್ಕೆ ತರುತ್ತದೆ ಎಂದು ಎಸಿಬಿ ಮೂಲಗಳು ಬೇಸರ ವ್ಯಕ್ತಪಡಿಸಿವೆ.
ಅಧಿಕಾರಿಯ ಅಧಿಕೃತ ವೇತನಕ್ಕೂ ಅವರು ಗಳಿಸಿರುವ ಸಂಪತ್ತಿಗೂ ಎಲ್ಲಿಯೂ ಹೊಂದಾಣಿಕೆಯಾಗುತ್ತಿಲ್ಲ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಸದ್ಯ ಆರೋಪಿಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಶಪಡಿಸಿಕೊಳ್ಳಲಾದ ಆಸ್ತಿ ದಾಖಲೆಗಳನ್ನು ಎಸಿಬಿ ತಂಡ ಪರಿಶೀಲಿಸುತ್ತಿದೆ.
ಕೇವಲ ಬಂಧನ ಮಾತ್ರವಲ್ಲದೆ, ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ಸರ್ಕಾರಿ ವಶಕ್ಕೆ ಪಡೆಯುವ ಪ್ರಕ್ರಿಯೆಯನ್ನು ಎಸಿಬಿ ಚುರುಕುಗೊಳಿಸಿದೆ. ಮುಂಬರುವ ದಿನಗಳಲ್ಲಿ ತನಿಖೆ ಮತ್ತಷ್ಟು ಆಳವಾಗಿ ನಡೆಯಲಿದ್ದು, ಈ ಹಗರಣದಲ್ಲಿ ಭಾಗಿಯಾಗಿರುವ ಇತರರ ಮಾಹಿತಿಯೂ ಹೊರಬರುವ ಸಾಧ್ಯತೆ ಇದೆ.
ಈ ಪ್ರಕರಣವು ಇದೀಗ ಸಾರ್ವಜನಿಕರಲ್ಲಿ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವೇತನದ ಮಿತಿಯ ಹೊರತಾಗಿ ಈ ಮಟ್ಟದ ಸಂಪತ್ತು ಗಳಿಸಿದ್ದು ಹೇಗೆ? ಈ ಅಕ್ರಮ ಸಾಮ್ರಾಜ್ಯದ ಹಿಂದೆ ಬೇರೆ ಯಾರೆಲ್ಲಾ ಪ್ರಭಾವಶಾಲಿಗಳ ಕೈವಾಡವಿದೆ? ಇಲಾಖೆಯ ಆಂತರಿಕ ತಪಾಸಣಾ ವ್ಯವಸ್ಥೆ ಈವರೆಗೆ ಎಲ್ಲಿ ನಿದ್ರಿಸುತ್ತಿತ್ತು? ಈ ದಾಳಿಯು ತೆಲಂಗಾಣ ಎಸಿಬಿಯ ದಕ್ಷತೆಯನ್ನು ಎತ್ತಿ ಹಿಡಿದಿದ್ದರೂ, ಪೊಲೀಸ್ ಇಲಾಖೆಯಂತಹ ಸೂಕ್ಷ್ಮ ವಲಯದಲ್ಲಿ ಭ್ರಷ್ಟಾಚಾರದ ಬೇರುಗಳು ಎಷ್ಟೊಂದು ಆಳವಾಗಿ ವ್ಯಾಪಿಸಿವೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಭವಿಷ್ಯದಲ್ಲಿ ಈ ಪ್ರಕರಣವು ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಹೊಸ ತಿರುವು ನೀಡಲಿದೆ ಎನ್ನಲಾಗುತ್ತಿದೆ.
